ಹೊಸದಿಲ್ಲಿ : ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ “ಪದ್ಮಾವತ್” ಕಥಾ ಚಿತ್ರದ ದೇಶಾದ್ಯಂತ ಬಿಡಗಡೆಗೆ ಸುಪ್ರೀಂ ಕೋರ್ಟ್ ಅನುಕೂಲ ಮಾಡಿಕೊಟ್ಟಿರುವ ಹೊರತಾಗಿಯೂ ರಾಜಪೂತ ಸಮುದಾಯದ ಸದಸ್ಯರು “ಪದ್ಮಾವತ್ ಚಿತ್ರ ಬಿಡುಗಡೆಯಿಂದ ಗಂಭೀರವಾದ ಪರಿಣಾಮ ಉಂಟಾದೀತು’ ಎಂಬ ಎಚ್ಚರಿಕೆಯನ್ನು ಇಂದು ಗುರುವಾರ ನೀಡಿದೆ.
ರಾಜಸ್ಥಾನ, ಗುಜರಾತ್, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯ ಸರಕಾರಗಳು ತಮ್ಮ ರಾಜ್ಯದಲ್ಲಿ ಚಿತ್ರ ಬಿಡಗಡೆಯನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ “ಪದ್ಮಾವತ್’ ಚಿತ್ರ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದ್ದರು.
ಚಿತ್ರ ನಿರ್ಮಾಪಕ ಮನವಿಯನ್ನು ಇಂದು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, “ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಪಡೆದಿರುವ ಯಾವುದೇ ಚಿತ್ರವನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇಲ್ಲ’ ಎಂದು ಸ್ಪಷ್ಟಪಡಿಸಿತಲ್ಲದೆ ಪದ್ಮಾವತ್ ಚಿತ್ರವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿತ್ತು.
ಪದ್ಮಾವತ್ ಚಿತ್ರ ಬಿಡುಗಡೆ ನಿಷೇಧದ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿರುವ ಛತ್ತೀಸ್‌ಗಢ ರಾಜಪುತ ಸಮುದಾಯವರು ಇಂದು, “ಇದು ನಮ್ಮ ಕೊನೇ ಎಚ್ಚರಿಕೆ; ರಾಣಿ ಪದ್ಮಾವತಿಯ ಘನತೆ ಗೌರವಗಳೊಂದಿಗೆ ಆಟವಾಡಲು ನಾವು ಯಾರಿಗೂ ಬಿಡುವುದಿಲ್ಲ. ಪದ್ಮಾವತ್ ಚಿತ್ರ ಪ್ರದರ್ಶಿಸುವ ಎಲ್ಲ ಚಿತ್ರ ಮಂದಿರಗಳಿಗೆ ನಾವು ಬೆಂಕಿ ಹಾಕುವೆವು’ ಎಂದು ಹೇಳಿದ್ದಾರೆ.
ಉಜ್ಜೆ„ನಿಯಯಲ್ಲಿಂದು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರಾಜಪೂತ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಳವಿ ಅವರು “ಸಾಮಾಜಿಕ ಸಂಘಟನೆಗಳು ಪದ್ಮಾವತ್ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಬೇಕೆಂದು ನಾನು ಆಗ್ರಹಿಸುತ್ತೇನೆ; ಈ ಚಿತ್ರ, ಸಿನೆಮಾ ಮಂದಿರಗಳಲ್ಲಿ ಪ್ರದರ್ಶನವಾಗ ಕೂಡದು. ಪದ್ಮಾವತ್ ಚಿತ್ರ ಪ್ರದರ್ಶನವಾಗುವ ಚಿತ್ರ ಮಂದಿರಗಳ ಮುಂದೆ ಜನರು ಜಮಾಯಿಸಿ ಕರ್ಫ್ಯೂ ರೀತಿಯ ಸನ್ನಿವೇಶವನ್ನು ಉಂಟುಮಾಡಿ ಪ್ರತಿಭಟನೆ ನಡೆಸಬೇಕು’ ಎಂದು ಹೇಳಿದರು.
ಈ ವಿವಾದಿತ ಚಿತ್ರವನ್ನು ನಿಷೇಧಿಸುವಂತೆ ಕಳವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದರು. ಚಿತ್ರ ಬಿಡುಗಡೆಯಾದಲ್ಲಿ ದೇಶದ ಸಾಮಾಜಿಕ ಸಾಮರಸ್ಯ ಹದಗೆಡುವುದೆಂದು ಅವರು ಎಚ್ಚರಿಸಿದರು.