ಬೆಂಗಳೂರು : “ನಾನು ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತೇನೆ” ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಒಳಜಗಳಕ್ಕೆ ಅಂತ್ಯ ಹಾಕುವ ಕೆಲಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಕೆಪಿಸಿಸಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, “ ಪಕ್ಷ ನನ್ನ ಮೇಲಿಟ್ಟ ಭರವಸೆಯನ್ನು ಯಾವುದೇ ಕಾರಣಕ್ಕೂ ನಾನು ಹುಸಿ ಮಾಡುವುದಿಲ್ಲ. ಕರ್ನಾಟಕದ ಮೂಲಕ ರಾಷ್ಟ್ರದಲ್ಲಿ ಕಾಂಗ್ರೆಸ್ ನ್ನು ಮತ್ತೆ ಅಧಿಕಾರದಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಬೇಕಿದೆ. ಹೀಗಾಗಿ ನಾನು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದು ಹೇಳಿದರು.
ವ್ಯಕ್ತಿ ಪೂಜೆಗಿಂತ , ಪಕ್ಷ ಪೂಜೆ ಮುಖ್ಯ ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ರಾಜ್ಯದಲ್ಲಿ ಒಂದು ಭ್ರಷ್ಟ ಸರಕಾರ ಅಧಿಕಾರದಲ್ಲಿದ್ದು ಅದನ್ನು ಕಿತ್ತೊಗೆಯುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ದಾಖಲೆ ಮೀರಿಸಿದೆ. ಹೀಗಾಗಿ ಜನರು ಬೇಸತ್ತಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಉಪ ಚುನಾವಣೆಯಲ್ಲೂ ನಾವು ಸಮಬಲದಿಂದ ಗೆದ್ದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಪೂರಕವಾದ ಎಲ್ಲ ವಾತಾವರಣವಿದೆ ಎಂದು ಹೇಳಿದರು.
ದೇಶದಲ್ಲಿ ಶೇ
.62 ಕ್ಕೂ ಹೆಚ್ಚು ಯುವ ಮತದಾರರಿದ್ದಾರೆ. ಹೀಗಾಗಿ ಯುವಕರ ಆಶಯಕ್ಕೆ ತಕ್ಕಂತೆ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎವೆರಿ ಬೂತ್ ಡಿಜಿಟಲ್ ಯೂತ್ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ಸದ್ಯದಲ್ಲೇ ಚಿಂತನ-ಮಂಥನ ಕಾರ್ಯಕ್ರಮ ನಡೆಸಲಾಗುವುದು ಎಂದರು.