ಹೈದರಾಬಾದ್ : ‘ತೆಲಂಗಾಣ ಮತದಾರರಿಗೆ ಭಾರತೀಯ ಜನತಾ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ಒಂದು ಲಕ್ಷ ಗೋವುಗಳನ್ನು ಉಚಿತವಾಗಿ ಪೂರೈಸುವ ಭರವಸೆ ನೀಡಿದೆ. ಇದರಲ್ಲಿ ಬಿಜೆಪಿಯವರು ನನಗೂ ಒಂದು ಗೋವನ್ನು ಕೊಡುತ್ತಾರೆಯೇ ?’ ಎಂದು ಆಲ್ ಇಂಡಿಯಾ ಮಜ್‌ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
“ಬಿಜೆಪಿ ತೆಲಂಗಾಣದ ಮತದಾರರಿಗೆ ಉಚಿತವಾಗಿ 1 ಲಕ್ಷ ಗೋವುಗಳನ್ನು ಕೊಡುವುದಾಗಿ ಭರವಸೆ ನೀಡಿದೆ. ಅದರಲ್ಲಿ ನನಗೂ ಒಂದು ಗೋವನ್ನು ಅವರು ಕೊಡುತ್ತಾರೆಯೇ ? ಅವರು ನನಗೆ ಒಂದು ಗೋವನ್ನು ಕೊಟ್ಟರೆ ನಾನು ಅದನ್ನು ಗೌರವದಿಂದ ಸಾಕುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ. ಇದು ನಗಾಡುವ, ತಮಾಷೆಯ ವಿಷಯ ಅಲ್ಲ; ಇದರ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ’ ಎಂದು ಓವೈಸಿ ಗಂಭೀರವಾಗಿಯೇ ಹೇಳಿದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಎನ್‌ವಿಎಸ್‌ಎಸ್ ಪ್ರಭಾಕರ್ ಅವರು “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣ ಮತದಾರರಿಗೆ ಹಬ್ಬ ಮತ್ತು ಇತರ ಸಂದರ್ಭಗಳಲ್ಲಿ, ಯಾರಿಗೆ ಅಗತ್ಯ ಉಂಟೋ ಅವರಿಗೆ, ಗೋವು ನೀಡಲು ಉದ್ದೇಶಿಸಿದೆ’ ಎಂದು ಹೇಳಿದ್ದಾರೆ.
ಈಚೆಗೆ ಬರ್ಖಾಸ್ತು ಗೊಂಡ ರಾಜ್ಯ ವಿಧಾನಸಭೆಯಲ್ಲಿ ಶಾಸಕರಾಗಿದ್ದ ಪ್ರಭಾಕರ್ ಅವರು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಅಗತ್ಯವಿರುವ ಗೋವುಗಳ ಸಂಖ್ಯೆಯನ್ನು ಪಟ್ಟಿ ಮಾಡಿ ವರ್ಷಂಪ್ರತಿ ತೆಲಂಗಾಣ ಮತದಾರರಿಗೆ 1 ಲಕ್ಷ ಗೋವುಗಳನ್ನು ನೀಡುವುದಾಗಿ ಹೇಳಿದ್ದಾರೆ.
ಪ್ರಭಾಕರ್ ಅವರು ಮುಂದುವರಿದು “ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಿನಿ ಭಾರತ ಭಾಷಾ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗುವುದು; ಈ ಮಂಡಳಿಯು ಇತರ ರಾಜ್ಯಗಳಿಂದ ಹೈದರಾಬಾದಿಗೆ ಉದ್ಯೋಗಾರ್ಥವಾಗಿ ಬರುವ ಭಾಷಾ ಅಲ್ಪಸಂಖ್ಯಾಕರ ಕಲ್ಯಾಣಕ್ಕೆ ಶ್ರಮಿಸುವುದು’ ಎಂದು ಹೇಳಿದ್ದಾರೆ.