ಮುಂಬಯಿ: ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ 19 ಸೋಕು ತಡೆಗಟ್ಟಲು ಜಾರಿಗೊಳಿಸಿರುವ ನಿರ್ಬಂಧವನ್ನು ಒಂದು ವೇಳೆ ಜನರು ಪಾಲಿಸದೇ ಇದ್ದಲ್ಲಿ ಕಠಿಣ ಲಾಕ್ ಡೌನ್ ಹೇರುವುದು ಅನಿವಾರ್ಯವಾಗಲಿದ್ದು, ಈ ಬಗ್ಗೆ ಏಪ್ರಿಲ್ 2ರ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶುಕ್ರವಾರ(ಮಾರ್ಚ್ 26) ತಿಳಿಸಿದ್ದಾರೆ.
ಇದನ್ನೂ ಓದಿ:“ಕೆಲಸ ಕೊಡಿಸುವುದಾಗಿ ಎರಡು ಬಾರಿ ಮನೆಗೆ ಕರೆದು ಅನ್ಯಾಯ ಮಾಡಿದ್ದಾರೆ”: ದೂರು ನೀಡಿದ ಯುವತಿ
ಮಹಾರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿದ್ದು, ಗುರುವಾರ (ಮಾರ್ಚ್ 25) ಒಂದೇ ದಿನ 31,000 ದಾಖಲೆಯ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ದೇಶದಲ್ಲಿ ಕಳೆದ 24ಗಂಟೆಯಲ್ಲಿ 59 ಸಾವಿರ ಕೋವಿಡ್ ಪ್ರಕರಣ ವರದಿಯಾಗಿದೆ.
ಪುಣೆಯಲ್ಲಿನ ಕೋವಿಡ್ ಪರಿಸ್ಥಿತಿ ಅವಲೋಕನದ ಸಭೆಯ ನಂತರ ಮಾತನಾಡಿದ ಅಜಿತ್ ಪವಾರ್, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಹೋಳಿ ಸಂಭ್ರಮದ ವೇಳೆ ಜನರು ಗುಂಪುಗೂಡಬಾರದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಹೇರಿಕೆ ಮಾಡದಿರಲು ಜನರು ಕೋವಿಡ್ 19 ಸೋಂಕು ತಡೆಗಟ್ಟಲು ಜಾರಿಗೊಳಿಸಿರುವ ನಿರ್ಬಂಧಗಳನ್ನು ಪಾಲಿಸಬೇಕು ಎಂದು ಅಜಿತ್ ಪವಾರ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಳವಾದರೆ ಏನು ಮಾಡಬೇಕು ಎಂಬ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು, ಆರೋಗ್ಯ ತಜ್ಞರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಕೋವಿಡ್ ಪ್ರಕರಣ ಮಿತಿಮೀರಿದಲ್ಲಿ ನಮ್ಮ ಬಳಿ ಕಠಿಣ ಲಾಕ್ ಡೌನ್ ಜಾರಿಗೊಳಿಸುವುದು ಬಿಟ್ಟರೆ ಬೇರ ಯಾವುದೇ ಆಯ್ಕೆಗಳಿಲ್ಲ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.