ಮುಂಬೈ: ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದ ಬಳಿಕ ನೂತನ ನಾಯಕನ ಬಗ್ಗೆ ಕುತೂಹಲ ಕೆರಳಿದೆ. ಹಲವರು ಮುಂದಿನ ನಾಯಕನ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾಯಕನ ರೇಸ್ ನಲ್ಲಿ ರೋಹಿತ್ ಶರ್ಮಾ, ಕೆ,ಎಲ್.ರಾಹುಲ್. ರಿಷಭ್ ಪಂತ್ ಮುಂತಾದವರಿದ್ದಾರೆ.
ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ತನಗೆ ಟೆಸ್ಟ್ ತಂಡದ ನಾಯಕತ್ವ ನೀಡಿದರೆ ಅದರು “ಗೌರವ” ಎಂದು ಭಾವಿಸುತ್ತೇನೆ ಎಂದಿದ್ದಾರೆ. ” ನಾನು ತಂಡಕ್ಕೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಿದ್ಧನಿದ್ದೇನೆ, ಅದು ದೊಡ್ಡ ಹುದ್ದೆಯಲ್ಲಿರಲಿ ಅಥವಾ ಇನ್ನಾವುದೇ ಆಗಿರಲಿ” ಎಂದು ಬುಮ್ರಾ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
“ನಾಯಕತ್ವದ ಅವಕಾಶ ನೀಡಿದರೆ ಅದು ಗೌರವ ಎಂದು ಭಾವಿಸುತ್ತೇನೆ, ಇಲ್ಲದೆ ಇದ್ದರೂ ನಾನು ನನ್ನ ಸಾಮರ್ಥ್ಯಕ್ಕೆ ಬೇಕಾದುದನ್ನು ಮಾಡಲು ಪ್ರಯತ್ನಿಸುತ್ತೇನೆ. ನನ್ನ ಗಮನ ಉತ್ತಮ ಪ್ರದರ್ಶನ ನೀಡುವುದರ ಮೇಲಷ್ಟೇ ” ಎಂದು ಬಲಗೈ ವೇಗಿ ಹೇಳಿದರು.
ಇದನ್ನೂ ಓದಿ:ಏಕದಿನ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಬುಮ್ರಾ ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಸದ್ಯ ಟೆಸ್ಟ್ ಮಾದರಿಯ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಬುಮ್ರಾ ಗುರುತಿಸಲ್ಪಡುತ್ತಾರೆ.
“ನಾವು ಬದಲಾವಣೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ನಾವೆಲ್ಲರೂ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ” ಎಂದು ಬುಮ್ರಾ ಹೇಳುತ್ತಾರೆ.