ಹುಬ್ಬಳ್ಳಿ: ಈ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ. ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಮೂರು ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.
ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ಆದರೆ ಒಂದು ವರ್ಷವೂ ಕೊಡಲಿಲ್ಲ. ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಕೃಷ್ಣಾ ಮತ್ತು ಮಹಾದಾಯಿ ನೀರಿನ ಬಗ್ಗೆ ಅವರು ಮಾತನಾಡಲ್ಲ ಎಂದರು.
ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಕೃಷ್ಣಾ ಮತ್ತು ಮಹಾದಾಯಿ ನೀರಿನ ಹಕ್ಕಿನಿಂದ ಕರ್ನಾಟಕದ ಜನರನ್ನು ದೂರ ಇರಿಸಿದ್ದಾರೆ. ಕರ್ನಾಟಕದ ಜನರು ಅವರ ವಂಚನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಯಾತ್ರೆಯ ಮೂಲಕ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ 3.30 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ; ಚಿವ ಜೆ.ಸಿ.ಮಾಧುಸ್ವಾಮಿ
ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಎಂಟು ವರ್ಷಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಜನವರಿ 2ರಂದು ಹುಬ್ಬಳ್ಳಿಯಲ್ಲಿ ಮಹಾದಾಯಿ ಕುರಿತು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದು, ಉದರಿಂದ ಬೆದರುರುವ ಬಿಜೆಪಿಯವರು ಮಹದಾಯಿ ವಿಷಯವಾಗಿ ಒಂಟೆಯ ಬಾಯಲ್ಲಿ ಜೀರಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ, ಹಸಿರು ನ್ಯಾಯಾಧಿಕರಣದ ಅನುಮೋದನೆ ಇದೆಯೇ? ಬಿಜೆಪಿ ಸರಕಾರ ಹೊರಟು ಹೋಗುವಾಗ ಇಲ್ಲಸಲ್ಲದ ಮಾತನಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಮಹಾದಾಯಿಗೆ ಮೂರು ಸಾವಿರ ಕೋಟಿ ರೂ. ಅನುದಾನ ಕೊಡಲಿದೆ. ಮೊದಲ ಕ್ಯಾಬಿನೆಟ್‌ನಲ್ಲಿ ಐದು ನೂರು ಕೋಟಿ ರೂ. ಬಿಡುಗಡೆ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ, ದ್ರೋಹಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.