ಎಲ್ಲ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದಾಗಲೇ ಹಲವು ಶಾಸಕರು ತಮಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಂಭಾವ್ಯರ ಪಟ್ಟಿಯಲ್ಲೂ ಕೆಲವರ ಹೆಸರು ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ 32 ಶಾಸಕರು ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಚ್ಚಳ ಎನ್ನಲಾಗಿದೆ. ಈ ಪೈಕಿ ಮೂರರಿಂದ ನಾಲ್ಕು ಸಚಿವರೂ ಇದ್ದಾರೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಡಳಿತ ವಿರೋಧಿ ಅಲೆಯ ವಿರುದ್ಧ ಈಜುವುದಕ್ಕಾಗಿ ಹೊಸಮುಖಗಳನ್ನು ಕಣಕ್ಕಿಳಿಸುವುದು ಅನಿವಾರ್ಯ.
Advertisement
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ – ಒಟ್ಟು 7ದಕ್ಷಿಣ ಕನ್ನಡ ಜಿಲ್ಲೆಯ ಮೂವರು, ಉಡುಪಿ ಜಿಲ್ಲೆಯ ನಾಲ್ವರು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತ ಎನ್ನಲಾಗಿದೆ. ಈ ಪೈಕಿ ಕೆಲ ಘಟಾನುಘಟಿಗಳ ಹೆಸರೂ ಸೇರಿವೆ. ಕಾರ್ಯಕರ್ತರ ವಲಯದಿಂದ ವ್ಯಕ್ತವಾದ ಬಲವಾದ ವಿರೋಧವೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಕಳೆದ ಚುನಾವಣೆ ಸಂದರ್ಭ ಬದಲಾವಣೆಗೆ ಸಾಕ್ಷಿಯಾಗಿದ್ದ ಕರಾವಳಿಯ 3 ಜಿಲ್ಲೆಗಳಲ್ಲೇ 9 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಖಚಿತವಾಗಿದೆ. ಸಂಭಾವ್ಯ ಶಾಸಕರ ಪಟ್ಟಿ ಈಗಾಗಲೇ ವರಿಷ್ಠರ ಕೈಯಲ್ಲಿ ಇದೆ ಎನ್ನಲಾಗಿದೆ.
ಎ. 8, 9ರಂದು ದಿಲ್ಲಿಯಲ್ಲಿ ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿ ಸಭೆ ನಡೆಯುವುದಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಅದಕ್ಕೆ ಮುಂಚಿತವಾಗಿಯೇ ಗುರುವಾರ ಪೂರ್ವಭಾವಿ ಸಭೆ ನಡೆದಿದೆ. ಈ ಸಭೆಯಲ್ಲಿ ಕರ್ನಾಟಕದ ಒಟ್ಟಾರೆ ಪರಿಸ್ಥಿತಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಚುನಾವಣ ಪ್ರಭಾರಿ ಧರ್ಮೇಂದ್ರ ಪ್ರಧಾನ್, ಸಹಪ್ರಭಾರಿ ಅಣ್ಣಾಮಲೈ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.