ಕುಷ್ಟಗಿ: ಪರಿಸರ ದಿನಾಚರಣೆ ಸಂದರ್ಭದಲ್ಲಿ ಫೋಟೋಗಾಗಿ ಗಿಡ ನೆಡುವುದು, ಒಂದಿಷ್ಟು ಪರಿಸರ, ವನ್ಯ ಜೀವಿಯ ರಕ್ಷಣೆ ಕಾಳಜಿ ವ್ಯಕ್ತಪಡಿಸುವುದು. ಇಷ್ಟಕ್ಕೇ ಮುಗಿದು ಹೋಗುತ್ತದೆ ಪರಿಸರ ದಿನಾಚರಣೆ ಹಾಗೂ ಪರಿಸರದ ಮೇಲಿನ ಪ್ರೀತಿ. ಏತನ್ಮಧ್ಯೆ ಕುಷ್ಟಗಿ ಪಟ್ಟಣದ ಇಬ್ಬರು ಯುವಕರು ಪರಿಸರ ದಿನಾಚರಣೆ ನಿಮಿತ್ತ ಜಿಲ್ಲೆಯಲ್ಲಿರುವ ಅಪರೂಪದ ವನ್ಯಜೀವಿಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಪಟ್ಟಣದ ವನ್ಯಜೀವಿ ಛಾಯಾಗ್ರಾಹಕ ಸುಜಿತ್ ಶೆಟ್ಟರ್ ಹಾಗೂ ವಿನಯ್ ಕಂದಕೂರು ಅವರೇ ವನ್ಯ ಜೀವಿ ಸಂರಕ್ಷಣೆಗೆ ಟೊಂಕ ಕಟ್ಟಿದ ಯುವಕರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 200 ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ವನ್ಯಜೀವಿ ಉಳಿವು ಜಾಗೃತಿ ಪಾಠ ಮಾಡಲು ಯೋಜಿಸಿದ್ದು, ಪರಿಸರ ದಿನಾಚರಣೆ ಹೀಗೂ ಆಚರಿಸಬಹುದು ಎಂದು ನಿರೂಪಿಸಿದ್ದಾರೆ.
ಕುಷ್ಟಗಿ ತಾಲೂಕು ಬಯಲು ಸೀಮೆ, ಮಳೆ ಕಡಿಮೆ ಬೀಳುವ ಪ್ರದೇಶ. ಇಂತಹ ಪ್ರದೇಶದಲ್ಲಿ ವನ್ಯಜೀವಿಗಳಿಲ್ಲ. ಅವೆಲ್ಲ ಮಲೆನಾಡಿಗೆ ಸೀಮಿತ ಎನ್ನುವ ವಾದವಿದೆ. ಆದರೆ ನಮ್ಮಲ್ಲೂ ತೀರ ಅಪರೂಪವೆನಿಸುವ ವನ್ಯಜೀವಿ ಪ್ರಭೇದಗಳಿದ್ದು, ಅವುಗಳೆಲ್ಲವೂ ಈ ವನ್ಯಜೀವಿ ಛಾಯಾಗ್ರಾಹಕರಿಂದ ಬೆಳಕಿಗೆ ಬರುತ್ತಿವೆ. ಜಿಲ್ಲೆಯಲ್ಲಿ ಕರಡಿ, ತೋಳ, ನರಿ, ಕಾಡು ಹಂದಿ, ಮುಂಗುಸಿ, ಕತ್ತೆಕಿರುಬ, ಮೊಲ, ಮುಳ್ಳು ಹಂದಿ, ಕಾಡು ಬೆಕ್ಕು, ಜಿಂಕೆ, ನವಿಲು, ಬಾವಲಿ, ಸರಿಸೃಪ ಹಾಗೂ ಅಪರೂಪವೆನಿಸುವ ಕೀಟಗಳನ್ನು ಕಾಣಬಹುದಾಗಿದೆ.
ಸತತ ಬರಗಾಲ, ತಾಪಮಾನ ಏರಿಕೆಯಿಂದ ಸೀಮಿತ ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲು, ಹಳ್ಳ ಕೊಳ್ಳಗಳಲ್ಲಿ ನೀರು ಕಡಿಮೆಯಾಗಿದೆ. ಇದರಿಂದಾಗಿ ಸಸ್ಯಹಾರಿ ಪ್ರಾಣಿಗಳು ಕಡಿಮೆಯಾಗುತ್ತಿವೆ. ಈ ಪ್ರಾಣಿಗಳನ್ನು ಭೇಟೆಯಾಡಿ ತಿನ್ನುವ ಮಾಂಸಹಾರಿ ಪ್ರಾಣಿಗಳಿಗೂ ಆಹಾರ ಅಭಾವ ಸೃಷ್ಟಿಯಾಗಿದೆ. ಈ ನಡುವೆಯೂ ಕಳ್ಳ ಭೇಟೆಯಿಂದ ಪ್ರಾಣಿ ಸಂಕುಲ ಕ್ಷೀಣಿಸಲಾರಂಭಿಸುತ್ತಿದ್ದು, ಪರಿಸರ ಅಸಮಾತೋಲನಕ್ಕೆ ಕಾರಣ ಎಂದು ವನ್ಯಜೀವಿ ಛಾಯಾಗ್ರಾಹಕ ಸುಜಿತ್ ಶೆಟ್ಟರ್, ವಿನಯ್ ಕಂದಕೂರ ನೋವಿನಿಂದ ವಿವರಿಸುತ್ತಾರೆ. ಸರ್ಕಾರಿ ಶಾಲೆ ಅದರಲ್ಲೂ ಬುಡಕಟ್ಟು ಜನಾಂಗದವರು ವಾಸಿಸುವ ಮಕ್ಕಳು ಕಲಿಯುತ್ತಿರುವ ಶಾಲೆಗಳಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಪಾಠ ಮಾಡುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾವು ಕೊಪ್ಪಳ ಜಿಲ್ಲೆಯಲ್ಲಿ ಸೆರೆಹಿಡಿದ ಅಪರೂಪ ಛಾಯಾಚಿತ್ರಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ತಮ್ಮ ಪ್ರೊಜೆಕ್ಟರ್ ಹಾಗೂ ಲ್ಯಾಪ್‌ಟಾಪ್ ಮೂಲಕ ಪ್ರದರ್ಶಿಸುವುದಲ್ಲದೇ, ಇದಕ್ಕೆ ಪೂರಕ ಮಾಹಿತಿ ನೀಡುತ್ತಾರೆ. ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವುದು ಗಮನಾರ್ಹವೆನಿಸಿದೆ. ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಿದ ಶಾಲೆಗಳಲ್ಲಿ ಕಡ್ಡಾಯವಾಗಿ ಸಸಿಗಳನ್ನು ನೆಡಲಾಗುತ್ತಿದೆ.
ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿಯ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಾಗೃತಿ ಪಾಠದಿಂದ ಓರ್ವ ವಿದ್ಯಾರ್ಥಿ ತಮ್ಮ ಪಾಲಕರು, ಮೊಲಗಳನ್ನು ಬೇಟೆಯಾಡಿ ತಿನ್ನುತ್ತಾರೆ. ಇನ್ಮುಂದೆ ತಿನ್ನುವುದಿಲ್ಲ ಎಂದು ಪಾಲಕರಿಗೆ ಮನವರಿಕೆ ಮಾಡಿಕೊಡುವ ವಾಗ್ಧಾನ ಮಾಡಿರುವುದನ್ನು ವನ್ಯಜೀವಿ ಛಾಯಾಗ್ರಾಹಕ ವಿನಯ್ ಕಂದಕೂರ ತಿಳಿಸಿದರು.
ಪ್ರಾಣಿ ಕೊಲ್ಲದಿರಿ: ವನ್ಯ ಜೀವಿಗಳನ್ನು ಕೊಲ್ಲುವುದರಿಂದ ಪರಿಸರದಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಅಪರೂಪದ ಪ್ರಾಣಿಗಳನ್ನು ಕಂಡರೆ ಕೊಲ್ಲಬೇಡಿ, ಕೂಡಲೇ ನಮ್ಮ ಮೊಬೈಲ್ ಸಂಖ್ಯೆ 9880894111, 9900555865ಗೆ ಕರೆ ಮಾಡಲು ಸಲಹೆ ನೀಡಿದ್ದಾರೆ.
•ಮಂಜುನಾಥ ಮಹಾಲಿಂಗಪುರ