ರಾಯಚೂರು: ವೈಲ್ಡ್ ಲೈಫ್ ಫೋಟೋಗ್ರಾμ ಎಂದರೆ ಹಸಿರು, ಬೆಟ್ಟಗಾಡು, ನದಿ, ದಟ್ಟಾರಣ್ಯ ಎಂಬ ಕಲ್ಪನೆ ಮೂಡುವುದು ಸಹಜ. ಆದರೆ, ಬಯಲು ಸೀಮೆಯಾದ ರಾಯಚೂರು ಜಿಲ್ಲೆಯಲ್ಲೂ ಉತ್ತಮ ವೈಲ್ಡ್‌ಲೈಫ್ ಫೋಟೋಗ್ರಾμ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಟ್ಯಾಟೂ ಕಲಾವಿದ ಶಂಕರ ಬದಿ.
ಲಾಕ್‌ಡೌನ್ ಜಾರಿಯಾದ ಬಳಿಕ ಸಾಕಷ್ಟು ಜನರಿಗೆ ಏನು ಕೆಲಸ ಮಾಡಬೇಕೆಂದು ತೋಚದೆ ಕಾಲಕ್ಷೇಪ ಮಾಡಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸವಿಲ್ಲ ಎಂದು ಊರಿಗೆ ಮರಳಿದ್ದ ಟ್ಯಾಟೂ ಕಲಾವಿದ ಶಂಕರ ಬದಿ, ಈ ಭಾಗದಲ್ಲೇ ಸಿಗುವ ಅಪರೂಪದ ಪಕ್ಷಿಗಳ ಫೋಟೋಗಳನ್ನು ತೆಗೆಯುವ ಮೂಲಕ ಸಿಕ್ಕ ಕಾಲಾವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಜಿಲ್ಲೆಯ ಸಿಂಧನೂರು ಮೂಲದ ಶಂಕರ ಬದಿ ಟ್ಯಾಟೂ ಕಲಾವಿದರು. ಬೆಂಗಳೂರಿನಲ್ಲಿ ನೆಲೆಸಿದ್ದು, ಟ್ಯಾಟೂ ಕಲೆಯಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ನಿರಂತರ 24 ಗಂಟೆಗಳ ಕಾಲಟ್ಯಾಟೂ ಬಿಡಿಸುವ ಮೂಲಕ ಸದ್ದು ಮಾಡಿದ್ದರು. ಅಭಿಮಾನಿ ಬೆನ್ನಿಗೆ ನಟ ಉಪೇಂದ್ರರ ಚಿತ್ರ ಬಿಡಿಸುವ ಮೂಲಕ ಖುದ್ದು ಉಪೇಂದ್ರರಿಂದಲೇ ಪ್ರಶಂಸೆ ಪಡೆದಿದ್ದಾರೆ. ಆದರೆ, ಲಾಕ್ ಡೌನ್ ಜಾರಿಯಾದ ಬಳಿಕ ಬೆಂಗಳೂರಿನಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಎಲ್ಲರಂತೆ ಅವರೂ ತಮ್ಮ ತವರಿಗೆ ಆಗಮಿಸಿದ್ದರು. ಆದರೆ, ಸುಮ್ಮನೇ ಕೂರುವುದೇಕೆ ಎಂದು ತಮ್ಮ ಬಳಿಯಿದ್ದ ಕಡಿಮೆ ಸಾಮರ್ಥ್ಯದ ಕ್ಯಾಮೆರಾ ಹೆಗಲೇರಿಸಿಕೊಂಡು ಸುತ್ತಲಿನ ಪರಿಸರದಲ್ಲಿಯೇ ಆಕರ್ಷಿಸುವ ನೂರಾರು ಫೋಟೋಗಳನ್ನು ತೆಗೆದಿದ್ದಾರೆ.
ಬಯಲು ಸೀಮೆಯಾದ ಜಿಲ್ಲೆಯಲ್ಲಿ ಬಿರುಬೇಸಿಗೆಯಲ್ಲಿ ಹೊರಗೆ ಓಡಾಡುವುದೇ ಕಷ್ಟ. ಅಂಥ ವೇಳೆ ಪ್ರಾಣಿ ಪಕ್ಷಿ ಸಂಕುಲ ಸಿಗುವುದೇ ಅಪರೂಪ. ಆದರೂ ವಿವಿಧೆಡೆ ಓಡಾಡುವ ಮೂಲಕ ಹತ್ತಾರು ಜಾತಿಗಳ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸಿಂಧನೂರು ಭಾಗದಸುತ್ತಮುತ್ತಲಿನ 20-30 ಕಿಮೀ ಆಸುಪಾಸಿನಲ್ಲಿ, ಕನಕಗಿರಿ, ಅಂಬಾಮಠ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿಗುವ ಸಣ್ಣಪುಟ್ಟ ಕಾಡಿನಲ್ಲಿಯೇ ಅವರು ತಮ್ಮ ಕೈಚಳಕ ತೋರಿದ್ದಾರೆ. ಅವರ ಫೋಟೋಗಳನ್ನು ನೋಡಿದವರಿಗೆ ಬಯಲು ಸೀಮೆಯಲ್ಲೂ ಉತ್ತಮ ವೈಲ್ಡ್‌ಲೈಫ್ ಫೋಟೋಗ್ರಾμ ಮಾಡಬಹುದು ಎಂಬ ಭಾವನೆ ಮೂಡದೆ ಇರದು.
ದಿನವಿಡೀ ಕಾಯುವಿಕ : ಕೆಲವೊಂದು ಪಕ್ಷಿಗಳ ಫೋಟೋಗಳನ್ನು ಸೆರೆ ಹಿಡಿಯಲು ಅವರು ಇಡೀ ದಿನ ಕಳೆದಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಹೊರಟರೆ ಕೆಲವೊಮ್ಮೆ ಸಂಜೆವರೆಗೂ ಫೋಟೋ ತೆಗೆಯುವುದರಲ್ಲೇ ಮಗ್ನರಾಗಿದ್ದಾಗಿ ತಿಳಿಸುತ್ತಾರೆ. ಇಂಡಿಯನ್ ರೊಲರ್, ಸಿಲ್ವರ್ ಬಿಲ್, ವೈಟ್ ಚೀಕಡ್ ಬಾರ್ಬೆಟ್, ಲಾಡ್ಜರ್ ಗ್ರೇ ಬಾಬ್ಲಿರ್, ಗ್ರೇಟರ್ ಕೋಕಲ್, ಆಸ್ಟ್ರೇಲಿಯನ್ ಮಾಸ್ಕಡ್ ಓವೆಲ್, ಎಲ್ಲೊ ಬೆಲ್ಲಿಡ್ ಪ್ರಿನಿಯಾ, ಸ್ಪಾಟೆಡ್ ಓವೆಲ್ ಸೇರಿದಂತೆ ವಿವಿಧ ಜಾತಿಯಪಕ್ಷಿಗಳನ್ನು ಸೆರೆ ಹಿಡಿದಿದ್ದಾರೆ. ಅದರ ಜತೆಗೆ ಸರಿಸೃಪಗಳು, ಸೂಕ್ಷ್ಮ ಕೀಟಗಳನ್ನು ಕ್ಲಿಕ್ಕಿಸಿದ್ದಾರೆ.
ಫೋಟೋಗ್ರಾಫಿ ನನ್ನ ಹವ್ಯಾಸ. ಲಾಕ್‌ಡೌನ್ ವೇಳೆ ಸುಮ್ಮನೆ ಕೂಡುವುದಕ್ಕಿಂತ ಒಂದಷ್ಟು ಫೋಟೋಗಳನ್ನು ತೆಗೆದೆ. ಬೆಂಗಳೂರಿನ ಖ್ಯಾತ ವೈಲ್ಡ್‌ಲೈಫ್ ಫೋಟೋಗ್ರಾಫರ್ ದೀಪಕ್ ಎನ್ನುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೂ ಸೇರಿಸಿದ್ದಾರೆ. ನಮ್ಮ ಭಾಗದಲ್ಲೂ ವೈಲ್ಡ್‌ಲೈಫ್ ಫೋಟೋಗ್ರಫಿ ಮಾಡಬಹುದು. ಬಯಲು ಸೀಮೆಯಲ್ಲಿ ಮಾತ್ರ ಸಿಗುವ ಅಪರೂಪದ ಪ್ರಾಣಿ ಪಕ್ಷಿಗಳನ್ನು ಸೆರೆ ಹಿಡಿಯುವ ಕೆಲಸ ಆಗಬೇಕು.
-ಶಂಕರ ಬದಿ, ಹವ್ಯಾಸಿ ಛಾಯಾಗ್ರಾಹಕ, ಟ್ಯಾಟೂ ಕಲಾವಿದ
-ಸಿದ್ಧಯ್ಯಸ್ವಾಮಿ ಕುಕುನೂರು