ಸಂತೆಮರಹಳ್ಳಿ: ಎಏಸಿಗೆ ಕಾಲ ಆಂಭವಾಗಿದ್ದು ಎಲ್ಲೆಡೆ ಬಿರು ಬಿಸಿಲು, ಧಗೆಗೆ ಧರೆ ಉರಿಯುತ್ತಿದೆ. ಜೀವಜಲ ಬತ್ತುತ್ತಿದೆ. ದಟ್ಟ ಕಾನನವಾಗಿರುವ ಪೌರಾಣಿಕ ಐತಿಹಾಸಿಕ ಪ್ರಸಿದ್ಧ ಹಾಗೂ ಶೋಲಾ, ನಿತ್ಯಹರಿದ್ವರ್ಣ, ಕುರಚಲು, ಅರೆನಿತ್ಯ ಹರಿದ್ವರ್ಣದಂತಹ ಭಿನ್ನ ಪ್ರಭೇದಗಳನ್ನು ಒಂದೇ ಒಡಲಿನಲ್ಲಿ ಇಟ್ಟುಕೊಂಡಿರುವ ಅಪರೂಪದ ವೃಕ್ಷ, ಖಗ, ಮೃಗ ಸಂಪತ್ತಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಅಪರೂಪ ಸಸ್ಯ ಸಂಕುಲ: ಬಿಆರ್‌ಟಿ ವನ್ಯಧಾಮ ಹುಲಿಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು ಈ ವಲಯವು 675 ಚ.ಕಿ.ಮೀ ವಿಸ್ತೀರ್ಣ ಒಳಗೊಂಡಿದೆ. ಈ ಅರಣ್ಯದಲ್ಲಿ ಪ್ರಮುಖವಾಗಿ ಹುಲಿ, ಆನೆ, ಚಿರತೆ, ಜಿಂಕೆ, ಕಾಡೆಮ್ಮೆ, ಕಾಡುಕುರಿ, ನವಿಲು ಸೇರಿದಂತೆ ಹಲವು ಪಕ್ಷಿಪ್ರಾಣಿ ಸಂಕುಲವಿದೆ ಜೀವಿಸುತ್ತಿವೆ. ಇದರ ಜೊತೆಗೆ ಅಪರೂಪದ ಸಸ್ಯ ಸಂಕುಲವನ್ನೂ ತನ್ನೊಡಲಿನಲ್ಲಿ ಇಟ್ಟುಕೊಂಡಿದೆ.
200ಕ್ಕೂ ಹೆಚ್ಚು ಕಟ್ಟೆಗಳು ಖಾಲಿ: ಪ್ರಸ್ತುತ ಬೇಸಿಗೆ ಇರುವ ಕಾರಣ ನೀರಿನ ಅಭಾವ ಎಲ್ಲೆಡೆ ಕಾಡುತ್ತಿದೆ. ಈ ಒಂದು ಸಮಸ್ಯೆಯೂ ಕಾಡಿನಲ್ಲಿರುವ ಪ್ರಾಣಿಗಳನ್ನು ಬಿಟ್ಟಿಲ್ಲ. ಬಿಆರ್‌ಟಿ ಅರಣ್ಯ ವ್ಯಾಪ್ತಿಯ ವಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ಸಣ್ಣಪುಟ್ಟ ಕೆರೆಕಟ್ಟೆಗಳಿವೆ. ಈ ಕೆರೆಗಳು ಮಳೆಗಾಲದಲ್ಲಿ ತುಂಬಿ ತುಳುಕುತ್ತವೆ. ಆದರೆ ಬೇಸಿಗೆಯ ವೇಳೆಗೆ ಕೆರೆಗಳೆಲ್ಲಾ ಒಣಗಿ ಬಣಗುಡುತ್ತವೆ. ಅದರಂತೆ ಈ ಭಾರೀ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಈಗಾಗಲೇ ಅರಣ್ಯದಲ್ಲಿನ ಬಹುತೇಕ ಸಣ್ಣಪುಟ್ಟ ಕೆರೆಗಳಲ್ಲಿ ನೀರು ಖಾಲಿಯಾಗಿವೆ.
ಹಳ್ಳಿಗಳಿಗೆ ಬರುವ ಕಾಡುಪ್ರಾಣಿಗಳು: ಉಳಿದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು ಅದು ಸಹ ಕೆಸರು ಮಯವಾಗಿದೆ. ಇದರಿಂದ ಇಲ್ಲಿನ ಪ್ರಾಣಿಗಳು ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಕೆಸರು ನೀರನ್ನೇ ಕುಡಿಯಬೇಕಾದ ಸ್ಥಿತಿ ಬಂದೊದಗಿದೆ. ಜೊತೆಗೆ ಪ್ರಾಣಿಗಳು ನೀರಿಗಾಗಿ ಕಾಡಂಚಿನ ಗ್ರಾಮಗಳಿಗೂ ಲಗ್ಗೆ ಇಡುವ ಸಂಭವವೂ ಹೆಚ್ಚಿದೆ.
ಕೆಸರು ನೀರಿನಿಂದ ಸಂಚಕಾರ: ಕೆಸರು ನೀರನ್ನು ಪ್ರಾಣಿಗಳು ಕುಡಿದಾಗ ನೀರಿನ ಜೊತೆಗೆ ಕೆಸರು ಸಹ ಪ್ರಾಣಿಯ ದೇಹಕ್ಕೆ ಹೊಕ್ಕು ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆಯು ಸಲೀಸಾಗಿ ಆಗದೇ ಪ್ರಾಣಿಗಳಿಗೆ ಸೋಂಕು ತಗಲುವ ಸಂಭವವೂ ಹೆಚ್ಚಿರುತ್ತದೆ. ಜೊತೆಗೆ ಕರುಳುಬೇನೆ, ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳು ಹೆಚ್ಚಾಗಿ ಪ್ರಾಣಿಗಳನ್ನು ಕಾಡುತ್ತವೆ ಎಂದು ಪರಿಸರ ಪ್ರೇಮಿ ಮನು ಆತಂಕ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಕಾಡಿನಲ್ಲಿನ ಪ್ರಾಣಿಗಳಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಜೊತೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು.
-ಅವಿನಾಶ್, ಪರಿಸರ ಪ್ರಿಯ
ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯದಲ್ಲಿನ ಕೆರೆಗಳಲ್ಲಿ ನೀರಿನ ಸಮಸ್ಯೆಯಿಲ್ಲ. ಸಣ್ಣಪುಟ್ಟ ಕೆರೆಗಳನ್ನು ಹೊರತುಪಡಿಸಿದರೆ ಉಳಿದಂತೆ ದೊಡ್ಡ ಕೆರೆಗಳಾದ ಗೌಡಹಳ್ಳಿ ಡ್ಯಾಂ, ಕೃಷ್ಣಯ್ಯನ ಕಟ್ಟೆ, ಬೆಲ್ಲವತ್ತ ಡ್ಯಾಂಗಳಲ್ಲಿ ನೀರಿದೆ. ಇದರಿಂದ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
-ನಾಗರಾಜು, ಯಳಂದೂರು ಅರಣ್ಯ ವಲಯದ ಎಸಿಎಫ್
* ಫೈರೋಜ್ ಖಾನ್