Advertisement

ಏಕಜಾತಿಯ ಅಪಾಯ ಕಾಡು ತೋಟದ ಉಪಾಯ

06:00 AM Sep 24, 2018 | |

ಜೀವ ಸರಪಳಿಯ ಸೂಕ್ಷ್ಮ ಗಳನ್ನು ಅರ್ಥಮಾಡಿಕೊಳ್ಳದೇ ಬೆಳೆ ಬೆಳೆಯಲು ಆಗುವುದಿಲ್ಲ. ಏಕ ಜಾತಿಯ ಬೆಳೆ ನಿರ್ವಹಣೆ ಅನುಕೂಲ, ಅದರಿಂದ ಲಾಭದಾಯಕವೆಂದು ಲೆಕ್ಕಹಾಗಿ, ಗೆಲುವಿನ ಆಸೆಯಿಂದ ಗೆಲ್ಲಲು ಓಡುತ್ತೇವೆ. ಆದರೆ, ಕೀಟ ದಾಳಿ ಕಲಿಸಿದ ಪಾಠಗಳು ಕೃಷಿಕರನ್ನು ಕಾಡಿನಲ್ಲಿ ಕಲಿಯುವಂತೆ ಮಾಡಿವೆ.

Advertisement

ನ್ಪೋಡಾಪ್ಟರಾ ಪೂ›ಜಿಪರ್ಡಾ ಕೀಟ ಇಂದು ರಾಜ್ಯದ ಮೆಕ್ಕೆಜೋಳದ ಹೊಲದ ಹೊಸ ಅತಿಥಿ. ಅಮೆರಿಕ, ಟರ್ಕಿ, ಚಿಲಿ, ಅರ್ಜೆಂಟೀನಾಗಳಲ್ಲಿ ನೂರಾರು ಬೆಳೆಗಳನ್ನು ಕಾಡುತ್ತಿದ್ದ ಕೀಟವಿದು. ಕ್ರಿ.ಶ. 2016 ರಲ್ಲಿ ಆಫ್ರಿಕಾ, 2017 ರಲ್ಲಿ ಘಾನಾದಲ್ಲಿ ಪತ್ತೆಯಾದ ಈ ಕೀಟ  ಸುಮಾರು ಎರಡು ಸಾವಿರ ಕಿಲೋ ಮೀಟರ್‌ ದೂರ ಸಾಗಿ ಕರ್ನಾಟಕಕ್ಕೆ ಬಂದಿದೆ. ಗೌರಿಬಿದನೂರು, ನೆಲಮಂಗಲ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮಂಡ್ಯ, ದಾವಣಗೆರೆಯ ಹೊಲಗಳಲ್ಲಿ ಕಾಣಿಸಿದೆ. ಇದು ಬಿತ್ತನೆಯಾದ 25 ದಿನಗಳ ನಂತರ ಎಲೆ ತಿನ್ನುವ ಬಕಾಸುರ. ಸಮೀಕ್ಷೆಯ ಪ್ರಕಾರ ಕೀಟಬಾಧೆಯಿಂದ ಶೇ.12 ರಿಂದ 70 ರಷ್ಟು ಬೆಳೆ ನಾಶವಾಗಬಹುದು.  ಒಮ್ಮೆಗೆ ನೂರಾರು ಮೊಟ್ಟೆ ಇಡುವ ದೈತ್ಯ ಸಂಕುಲ ಹೊಲದ ಎಲೆ ಮರೆಯಲ್ಲಿ ಸಾಮ್ರಾಜ್ಯ ವಿಸ್ತರಿಸುತ್ತದೆ. 

ಮೆಕ್ಕೆಜೋಳ ಹದಿನೆಂಟನೆಯ ಶತಮಾನದಲ್ಲಿ ದಕ್ಷಿಣ ಅಮೆರಿಕಾದಿಂದ ಭಾರತಕ್ಕೆ ಬಂದು ನಮ್ಮಲ್ಲಿ ಗೆದ್ದಿದೆ. ಶೇಂಗಾ, ಹತ್ತಿ, ಮೆಣಸು, ಭತ್ತ ಬೆಳೆಯುತ್ತಿದ್ದ ನೆಲೆಯನ್ನು ಆಕ್ರಮಿಸಿದೆ.  ಮೆಕ್ಕೆ ಜೋಳದ ಬೇಸಾಯದಲ್ಲಿ ಕೆಲಸ ಕಡಿಮೆ, ಕೃಷಿ ಅನುಕೂಲ, ಎಕರೆಗೆ 30 ಕ್ವಿಂಟಾಲ್‌ ಜೋಳ ಬೆಳೆಯಬಹುದೆಂದು ರೈತರು ಆ ಬೆಳೆಗೆ ಶರಣಾಗಿದ್ದಾರೆ. ಬೆಳಗಾವಿ, ಖಾನಾಪುರ ಮೂಲೆಯಿಂದ ಬೆಂಗಳೂರು ದಾಟಿ ಕೋಲಾರಕ್ಕೆ ಹೋದರೂ ಎಲ್ಲೆಡೆ ರೈತರು ಮೆಕ್ಕೆಜೋಳಕ್ಕೆ ಜೈ ಹೇಳಿದ್ದು ಕಾಣಿಸುತ್ತದೆ.   ಒಂದೇ ಜಾತಿಯ ಬೆಳೆಗಳನ್ನು ಹೊಲದಲ್ಲಿ  ವ್ಯಾಪಕವಾಗಿ ಬೆಳೆಯುತ್ತ ಹೋದಂತೆ ಅವಲಂಬಿತ  ಕೀಟ ಸಮಸ್ಯೆಗಳು ಹೆಚ್ಚುತ್ತವೆ.

 ಜೋಳದ ರೊಟ್ಟಿ ಊಟ ಸಿಗುತ್ತದೆಂದು ಬೋರ್ಡು ಹಾಕಿದ ಖಾನಾವಳಿ ಹುಡುಕಿ ನಾವು ಹೋಗುವಂತೆ ಕೀಟಗಳು ಇಷ್ಟವಾದ ಆಹಾರ ಹುಡುಕಿ ಬರುವುದು ಸಹಜ. ಪಾರ್ಸಲ್‌ ಬ್ಯಾಗ್‌ ಮೂಲಕ ರಾಜ್ಯಕ್ಕೆ ಇದು ಆಗಮಿಸಿರಬಹುದೆಂದು ಕೀಟಶಾಸ್ತ್ರಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ. ಆಹಾರ, ಆವಾಸ, ಅನುಕೂಲ ದೊರೆತು ಕೀಟಗಳ ಬೆಳವಣಿಗೆಯಾಗುತ್ತದೆ. ಸಾಮಾಜಿಕ ಅರಣ್ಯ ಯೋಜನೆ ಸಂದರ್ಭದಲ್ಲಿ ರಾಜ್ಯದಲ್ಲಿ ದನಕರುಗಳ ಮೇವಿಗಾಗಿ ಮಧ್ಯ ಅಮೇರಿಕಾ ಮೂಲದ ಸುಬಾಬುಲ್‌ ಸಸ್ಯ ನಾಟಿ ಮಾಡಿದ್ದು ನಿಮಗೆ ನೆನಪಿರಬಹುದು.

ಸಸ್ಯ ಬಂದ ಹೊಸತರಲ್ಲಿ ಅದಕ್ಕೆ ಯಾವ ಕೀಟಬಾಧೆಯೂ ಇರಲಿಲ್ಲ. ಆದರೆ ಕ್ರಿ.ಶ. 1988 ರ ನಂತರದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೈಲಿಡ್ಸ್‌  ಕೀಟಗಳು ಮರಗಳಿಗೆ ದಾಳಿ ಮಾಡಿ ಜಾನುವಾರುಗಳ ಮೇವನ್ನು ಲಪಟಾಯಿಸಿದವು. ಸಸ್ಯಮೂಲವಾದ ದಕ್ಷಿಣ ಅಮೇರಿಕಾದಿಂದ  ಕೀಟಗಳು  ಸುಬಾಬುಲ್‌ ಗಿಡಗಳನ್ನೇ ಹುಡುಕಿ ಕೊಂಡು ಬಂದವು. ಕೀಟಗಳ ಖಂಡಾಂತರ ಪಯಣವೇ ಬಹು ದೊಡ್ಡ ವಿಸ್ಮಯ ಪ್ರಪಂಚ.  

Advertisement

ಮೆಕ್ಕೆಜೋಳಕ್ಕೆ ಬಂದ ‘ನ್ಪೋಡಾಪ್ಟರಾ ಪೂ›ಜಿಪರ್ಡಾ’ ಕೀಟಗಳನ್ನು  ಜೋಳದ ಹಸಿರು ಗರಿಯ ಮರೆಯಿಂದ ಹೆಕ್ಕಿ ತೆಗೆದು ತಿನ್ನಲು ಕಾಡಿನ ಪಕ್ಷಿಗಳು ಬೇಕು. ಆಹಾರಕ್ಕೆ ಮೈದಾ ಬೇಡ, ಗೋದಿ ಬೇಡ, ಸಿರಿಧಾನ್ಯ ಬೇಕೆಂದು ನಾವು ಇಚ್ಚಿಸುವುದಕ್ಕಿಂತ ಸೂಕ್ಷ್ಮವರ್ತನೆ ಇವುಗಳದು.  ನಿಸರ್ಗ ತಜ್ಞರಾದ ಅವಕ್ಕೆ ಆಹಾರ ಆರೋಗ್ಯ ಅನುಭವದ ಮೂಲಕ ಬೆಳೆಯುತ್ತದೆ. ಪ್ರಪಂಚದ ಉಷ್ಣವಲಯದ ಅಕೇಶಿಯಾ,

ನೀಲಗಿರಿ, ಸಿಲ್ವರ್‌, ಫೈನಸ್‌ ಮುಂತಾದ ದೇಸೀ ಸಸ್ಯಗಳು ನಮ್ಮ ಭೂಮಿಯಲ್ಲಿ ಖುಷಿಯಿಂದ ಬೆಳೆಯಲು ಈ ನೆಲದಲ್ಲಿ ಅದರ ನೈಸರ್ಗಿಕ ಶತ್ರುಗಳಿಲ್ಲದ್ದು ಮುಖ್ಯಕಾರಣವಾಗಿದೆ. ಇಷ್ಟು ಕಾಲ  ರೋಗ, ಕೀಟಬಾಧೆ ಇಲ್ಲದೇ ಜೋಳ ಹೀಗೆ ಗೆದ್ದಿದೆ. ಕೀಟಗಳಿಗೆ ನೈಸರ್ಗಿಕ ವೈರಿಗಳಿಲ್ಲದಿದ್ದರೆ  ಏನಾಗಬಹುದು? ಎಲ್ಲವನ್ನೂ ಕೀಟ ನಾಶಕಗಳ ಮೂಲಕ ನಿಯಂತ್ರಿಸಲು ಸಾಧ್ಯವೇ? ಒಮ್ಮೆ ವಿಷ ರಾಸಾಯನಿಕ ಬಳಸುತ್ತ ಬೇಸಾಯ ನಡೆಸಿದರೆ ಜೋಳದ ಹೊಲದ ಸುತ್ತ ರೈತರಿಗೆ ಹೊಸ ಆಸ್ಪತ್ರೆ ಆರಂಭಿಸಬೇಕು. ಇದು ಏಕಜಾತಿಯ ಫ‌ಲಾಫ‌ಲದ ಸಣ್ಣ ಉದಾಹರಣೆ ಮಾತ್ರ.  

ಪಶ್ಚಿಮ ಘಟ್ಟದ ಕಾಡಿನಲ್ಲಿ ತೇಗ(ಸಾಗವಾನಿ) ನೈಸರ್ಗಿಕ ಮರ. ಎರಡು ಶತಮಾನಗಳ ಹಿಂದೆ ನೈಸರ್ಗಿಕ ಕಾಡಿನಲ್ಲಿ ಎಕರೆಯಲ್ಲಿ ಹತ್ತಾರು ಮರಗಳಿದ್ದವು. ಉತ್ಕೃಷ್ಟ ಗುಣಮಟ್ಟದ  ಮರ ಬ್ರಿಟಿಷರ ಪ್ರೀತಿ ಗಳಿಸಿತು. ಕ್ರಿ.ಶ. 1850 ರ ನಂತರದಲ್ಲಿ ಕರ್ನಾಟಕದಲ್ಲಿ ನೈಸರ್ಗಿಕ ಕಾಡು ಕಡಿದು ನೆಡುತೋಪು ಆರಂಭವಾಯ್ತು.  ತೇಗದ ಬೀಜ, ಬೇರಿನ ರಸ, ಹೂವು, ಕಾಯಿ, ತೊಗಟೆ, ಎಲೆ, ತಿರುಳುಗಳನ್ನು ಆಹಾರವಾಗಿ ನಂಬಿದ 173 ಜಾತಿಯ ಕೀಟಗಳಿವೆ. ನೆಡುತೋಪು ಇವುಗಳ ಬೆಳವಣಿಗೆಗೆ ಅನುಕೂಲವಾಯ್ತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡ, ಶಿರಸಿಯ ಘಟ್ಟ ಪ್ರದೇಶಗಳಲ್ಲಿ ಸುಮಾರು 90,000 ಹೆಕ್ಟೇರ್‌ ಕ್ಷೇತ್ರದಲ್ಲಿ ತೇಗವಿದೆ.

ಕ್ರಿ.ಶ. 1989 ರಲ್ಲಿ ಕಾಸಸ್‌ಕಡಾಂಬೆ (cossus cadambae moor Or Alcterogystia cdambe moor)  ಕಾಂಡ ಕೊರೆಯುವ ಕೀಟ ದಾಂಡೇಲಿಯ ಕುಳಗಿಯಲ್ಲಿ ಪತ್ತೆಯಾಯ್ತು. ಅಂದು ಈ ಹುಳಗಳು ಶೇ. 10-15 ರಷ್ಟು ಮರಗಳ ಕಾಂಡದ ತಿರುಳು ತಿಂದಿದ್ದವು. ಕೀಟಬಾಧೆ ವ್ಯಾಪಿಸುತ್ತ ಮುಂದಿನ 20 ವರ್ಷಗಳಲ್ಲಿ ಕೀಟಗಳ ಸಂಖ್ಯಾನ್ಪೋಟವಾಯಿತು. ಇಂದು ತಟ್ಟಿಹಳ್ಳ, ಕುಳಗಿ, ದಾಂಡೇಲಿ, ಬರ್ಚಿ, ಹಳಿಯಾಳ, ಮುಂಡಗೋಡ, ಯಲ್ಲಾಪುರ ಕೆಲವು ಪ್ರದೇಶದ ನೆಡುತೋಪಿನ ಶೇಕಡಾ 30-55 ರಷ್ಟು ಮರಗಳಿಗೆ ಕಾಂಡಕೊರೆಯುವ ಕೀಟಗಳಿಂದ ಭಾರೀ  ಹಾನಿಯಾಗಿದೆ. ಮೂವತ್ತು ವರ್ಷಕ್ಕೂ ಹೆಚ್ಚಿನ ಪ್ರಾಯದ ಮರಗಳಿಗೆ ಮಾತ್ರ ಇವು ದಾಳಿ ಮಾಡುತ್ತವೆ.

ಕಾಂಡ ಕೊರೆತದಿಂದ ಕಟ್ಟಿಗೆಯ ಗುಣಮಟ್ಟ ಹಾಳಾಗಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಮರಕ್ಕೆ ಹದಿನೈದು ಸಾವಿರವೂ  ದೊರೆಯುವುದಿಲ್ಲ. ಒಂದು ಹೆಕ್ಟೇರ್‌ ಪ್ರದೇಶದಲ್ಲಿ 70 ವರ್ಷಕ್ಕೂ ಹೆಚ್ಚಿನ ಪ್ರಾಯದ 600 ತೇಗದ ಮರಗಳಿರುವ ಅಂದಾಜಿದೆ. ಅಧ್ಯಯನದ ಪ್ರಕಾರ, ಸಾವಿರಾರು ಕೋಟಿ ರೂಪಾಯಿ ಜಿಲ್ಲೆಯಲ್ಲಿ ಪುಟ್ಟ ಕೀಟದಿಂದ ಹಾನಿಯಾಗಿದೆ. ಕೀಟಬಾಧಿತ ಮರವನ್ನು ಕಡಿದು ಸುಡಬೇಕೆಂದು ಕೀಟಶಾಸ್ತ್ರಜ್ಞರೊಬ್ಬರು ಅರಣ್ಯ ಭವನಕ್ಕೆ  ಕ್ರಿ.ಶ. 1999ರಲ್ಲಿ ವರದಿ ಸಲ್ಲಿಸಿದ್ದಾರೆ! ಇದು ಆಗದ ಕೆಲಸ. ಗೋಲ್ಡನ್‌ ಬ್ಯಾಕ್ಡ್ ವುಡ್‌ಪೆಕರ್‌, ಬಾರ್ಬೆಟ್‌ ಪಕ್ಷಿಗಳು  ಈ ಕೀಟವನ್ನು ಹಿಡಿದು ತಿನ್ನುತ್ತವೆ.

ಒಂದು ಜೊತೆ ಪ್ರೌಢ ಕೀಟಗಳು 600 ತತ್ತಿ ಇಡುತ್ತವೆ. ಸುಮಾರು 213 ದಿನಗಳ ಕಾಲ ಹುಳುವಾಗಿ (ಲಾರ್ವಾ) ಕಾಂಡ ಕೊರೆಯುತ್ತವೆ. ನೈಸರ್ಗಿಕ ಕಾಡಿನ ನಡುವಿನ ಹತ್ತಾರು ತೇಗದ ಮರದ ಆರೋಗ್ಯ ಕಾಪಾಡಬಲ್ಲ ಸಾಮರ್ಥ್ಯವೇನೋ ಪಕ್ಷಿಗಳಿಗಿದೆ. ಆದರೆ, ನೆಡುತೋಪಿನ ಲಕ್ಷಾಂತರ ಮರದ ಕೀಟ ತಿನ್ನಲು ಅವುಗಳಿಂದ ಸಾಧ್ಯವೇ? ಹೀಗಾಗಿ ಸಮಸ್ಯೆ ಬೆಳೆದಿದೆ. ಒಂದು ಜಾತಿಯ ಮರಗಳನ್ನು ಹೇರಳ ಪ್ರಮಾಣದಲ್ಲಿ ಬೆಳೆದರೆ ಏನಾಗುತ್ತದೆಂಬುದಕ್ಕೆ ದಾಂಡೇಲಿಯ ತೇಗ ನೋಡಬಹುದು. 

ಮೈಸೂರಿನ ಭತ್ತದ ಗದ್ದೆಗಳು ಗಾಳಿಯ (Casuarina equisetifolia L ) ನೆಡುತೋಪುಗಳಾಗುತ್ತಿವೆ. ಏಕಜಾತಿಯ ಭತ್ತದ ಜಾಗದಲ್ಲಿ ಗಾಳಿ ಮರಗಳು ಬೆಳೆದಿವೆ. ಬರ ಹಾಗೂ ಕೂಲಿ ಸಮಸ್ಯೆಯಿಂದ ಬೇಸಾಯದಿಂದ ನಷ್ಟವೆಂದು ಅರ್ಥ ಮಾಡಿಕೊಂಡಿರುವ ರೈತರು ಮರ ಬೆಳೆಸುತ್ತಿದ್ದಾರೆ. ಮುಂಬೈ ನಗರಕ್ಕೆ ಉರುವಲು ಕಟ್ಟಿಗೆ ಒದಗಿಸಲು ಕರಾವಳಿ ದಂಡೆಯಲ್ಲಿ ಕ್ರಿ.ಶ. 1868 ರಲ್ಲಿ ಬೆಳೆಸಿದ ಉತ್ತರ ಆಸ್ಟೇಲಿಯಾದ ಸಸ್ಯವಿದು. ಮರ ಆಶ್ರಯಿಸಿ ಸುಮಾರು 78 ಕೀಟ ಜಾತಿಗಳು ಬದುಕುತ್ತವೆ.

ಇವುಗಳಲ್ಲಿ 65 ಜಾತಿಯವು ಹಸಿ ಮರಕ್ಕೆ ದಾಳಿ ಮಾಡಿದರೆ ಇನ್ನುಳಿದ 13 ಕೀಟ ಜಾತಿಗಳು ಮರ ಸತ್ತ ಬಳಿಕ ಆಗಮಿಸುತ್ತವೆ. ನಾವು ಒಂದು ಸಸ್ಯವನ್ನು ನಮಗೆ ಹೇಗೆ ಲಾಭದಾಯಕವೆಂದು ಅರಿವಿನ ಮಟ್ಟದಲ್ಲಿ ಗುರುತಿಸುತ್ತೇವೆ.  ನಮಗಿಂತ ಮುಂಚೆ ಭೂಮಿಗೆ ಬಂದ ಕೀಟಗಳು ಸಾಮ್ರಾಜ್ಯ ಸ್ಥಾಪನೆಗೆ ಒಳಗೊಳಗೆ ಪೈಪೋಟಿ ನಡೆಸುತ್ತವೆ. ಮಲೆನಾಡಿನ ಕಾಡುಗಳಲ್ಲಿ ಅರಣ್ಯ ಇಲಾಖೆಯ ಅಕೇಶಿಯಾ ನೆಡುತೋಪು ವ್ಯಾಪಕವಾಗಿದೆ. ಆಸ್ಟ್ರೇಲಿಯನ್‌ ಮೂಲದ ಸಸ್ಯಕ್ಕೆ ಕೀಟಗಳ ಸಮಸ್ಯೆಇಲ್ಲ. ರಾಜ್ಯದ ಪರಿಸರ, ವನ್ಯಜೀವಿ ಸಂರಕ್ಷಣೆಯ ಹೊಣೆ ಹೊತ್ತ ಅರಣ್ಯ ಇಲಾಖೆ ಅರಣ್ಯೀಕರಣದಲ್ಲಿ ಗೆಲ್ಲಲು ಕೀಟಬಾಧೆ ಇಲ್ಲದ ದೇಶಿ ಸಸ್ಯದ ಮೊರೆ ಹೋಗಿದ್ದು ಜೀವ ಸರಪಳಿಯ ವೈರುಧ್ಯ.

ಆದರೆ ಕೀಟ, ಪಕ್ಷಿಗಳಿಗೆ ಸಂಬಂಧವಿಲ್ಲದಂತೆ ಕಾಡಿನಲ್ಲಿ ಮರ ಬೆಳೆಸಲಾಗುವುದಿಲ್ಲ. ಹರಳು ಗಿಡದ ಎಲೆ ತಿನ್ನುವ   ಕಾಸ್ಟರ್‌ ಸೆುಲೂಪರ್‌ ಎಂಬ  ಕೀಟ ಕ್ರಿ.ಶ. 2007 ರಲ್ಲಿ ಚಿಕ್ಕಮಗಳೂರು. ಶಿವಮೊಗ್ಗ, ಉತ್ತರ ಕನ್ನಡದ ಅಕೇಶಿಯಾ ನೆಡುತೋಪಿಗೆ ಲಗ್ಗೆ ಹಾಕಿತು. ಇವುಗಳ ಲಾರ್ವಾಗಳು ಎಲೆ ತಿನ್ನಲು ದಾಳಿ ಮಾಡಿದ ಪರಿಣಾಮ ಮುಂದಿನ ಮೂರು ವರ್ಷ ಕಾಲ ನೆಡುತೋಪಿನ ಮರಗಳು ಸೋತು ಸೊರಗಿದವು. ಆಹಾರದ ಕೊರತೆಯೋ? ಹವಾಮಾನದ ವ್ಯತ್ಯಾಸದಿಂದಲೋ ಹರಳು ಗಿಡ ತಿನ್ನುವವು ಅಕೇಶಿಯಾಕ್ಕೆ ಲಗ್ಗೆ ಇಟ್ಟಿದ್ದು ಕೀಟಶಾಸ್ತ್ರಜ್ಞರಿಗೆ ಅಚ್ಚರಿ ಹುಟ್ಟಿಸಿತು.

ಕೀಟಗಳ ದಾಳಿಯ ಪ್ರಮಾಣ ಹೇಗಿತ್ತೆಂದರೆ, ಅಕೇಶಿಯಾ ನೆಡುತೋಪು ಸನಿಹದ ಹಲವು ಮನೆಯವರು ಹುಳುಗಳಿಗೆ ಬೇಸತ್ತು ಕೆಲವು ದಿನ ಮನೆ ಖಾಲಿ ಮಾಡಿದ್ದರು. ಇಂದಿಗೆ ಸುಮಾರು 20-22 ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಪೆರಾಬೆಯಲ್ಲಿ ಅಡಿಕೆ ತೋಟಕ್ಕೆ ಇರುವೆಗಳು ದಾಳಿಯಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಇರುವೆಗಳ ಆಕ್ರಮಣದಿಂದ ಎಳೆಯ ಅಡಿಕೆಗಳೆಲ್ಲ ಒಣಗಿ, ಮರಗಳೆಲ್ಲ ಫ‌ಲವಿಲ್ಲದೇ ಬರಿದಾಗಿದ್ದವು. ಅಲ್ಲಿನ ಕೃಷಿಕ ಅಣ್ಣು ಪೂಜಾರಿಯ ತೋಟ ನೋಡಲು ಹೋಗಿದ್ದಾಗ ತೋಟದ ಗೊನೆಗಳೆಲ್ಲ ಒಣಗಿದ್ದ ದೃಶ್ಯ ಭಯ ಹುಟ್ಟಿಸುತ್ತಿತ್ತು.

ಅಡಿಕೆ ಗೊನೆಗಳ ಮೇಲೆ ಇರುವೆಗಳ ಸೈನ್ಯ ನೋಡಿದವರು, ಇರುವೆಗಳು ಅಡಿಕೆ ತಿಂದು ಹಾನಿ ಮಾಡಿದವೆಂದು ಬೊಬ್ಬೆ ಇಟ್ಟರು. ಆದರೆ ಆದದ್ದು ಬೇರೆ…. ಎಫಿಡ್ಸ್‌(ಗಿಡ ಹೇನು)ಗಳು  ಅಡಿಕೆಯ ರಸ ಹೀರಿದ್ದವು. ನಾವು ಹಾಲಿಗಾಗಿ ಹಸು ಸಾಕುವಂತೆ ಇರುವೆಗಳು ಸಿಹಿದ್ರವಕ್ಕಾಗಿ  ಗಿಡಹೇನುಗಳನ್ನು ಸಾಕುತ್ತವೆ. ಹೇನುಗಳನ್ನು ಒಯ್ದು ಆಹಾರರುವ ನೆಲೆಯಲ್ಲಿ ಪ್ರತಿಷ್ಠಾಪಿಸುತ್ತವೆ. ಪೆರಾಬೆಯಲ್ಲಿ ಅಡಿಕೆಯ ರಸ ಹೀರಿದ ಎಫಿಡ್ಸ್‌ಗಳು ಸಿಹಿದ್ರವ ನೀಡಿದ್ದರಿಂದ ಇರುವೆಗಳು ತೋಟದಲ್ಲಿ ಸಂಭ್ರಮದಲ್ಲಿದ್ದವು. ಗುಲಗುಂಜಿ ಹುಳುಗಳು ಅಡಿಕೆ ತೋಟದಲ್ಲಿ ಎಫಿಡ್ಸ್‌ ತಿಂದು ಬದುಕುತ್ತವೆ.

ಮರದ ಬುಡದಿಂದ ತೋಟದ ಗೊನೆಯೆತ್ತರಕ್ಕೆ ಸಂಚರಿಸುತ್ತ ಕೃಷಿಕರ ಮಿತ್ರನಾಗಿ ದುಡಿಯುತ್ತವೆ. ಅಡಿಕೆಯ ಜೊತೆಗೆ ತೋಟದಲ್ಲಿ ತೊಂಡೆ ಬೆಳೆಯಲು ಆರಂಭಿಸಿದ ಪೆರಾಬೆಯ ಕೃಷಿಕರು ವಿಷ ಕೀಟನಾಶಕ, ಕಳೆ ನಾಶಕಗಳನ್ನು ಬಳಸಿದ್ದರಿಂದ ಗುಲಗುಂಜಿ ಹುಳುಗಳು ಸತ್ತು ಹೋದವು. ಮರದ 70-80 ಅಡಿ ಎತ್ತರದಲ್ಲಿದ್ದ  ಎಫಿಡ್ಸ್‌ ಹಾಗೂ ಇರುವೆಗಳು ವಿಷ ಸೋಂಕದೆ ಆರಾಮವಾಗಿ ಬೆಳೆದವು. ರಸ ಹೀರಿದ ಗೊನೆಗಳು ಸಂಪೂರ್ಣ ಒಣಗಿದಾಗ ರೈತರಿಗೆ ಫ‌ಕ್ಕನೆ ಸರಸರ ಓಡಾಡುವ ಇರುವೆಗಳು ಮುಖ್ಯ ಅಪರಾಧಿಯಾಗಿ ಕಾಣಿಸಿದವು.  

ಆಗ ರಾಜ್ಯದ ತೋಟಗಾರಿಕಾ ಸಚಿವರು ಈ ಘಟನೆಗೆ  ಪ್ರತಿಕ್ರಿಯಿಸಿ ಇರುವೆ ನಿಯಂತ್ರಣಕ್ಕೆ ಅಡಿಕೆ ತೋಟಕ್ಕೆ ಬೆಂಕಿ ಹಾಕುವುದೇ  ಪರಿಹಾರವೆಂದು ಘೋಷಿಸಿದರು ! ಚಳ್ಳಕೆರೆ, ಪಾವಗಡದಲ್ಲಿ ಕಳ್ಳೆಕಾಯಿ(ಶೇಂಗಾ) ಬೆಳೆಗೆ ಕಂಬಳಿ ಹುಳು, ಕಲಬುರಗಿಯ ತೊಗರಿಗೆ ಕಾಯಿಕೊರಕ ದಾಳಿ ಸಾಮಾನ್ಯ. ಅರಣ್ಯ, ಗುಂಡುತೋಪುಗಳು ವಿನಾಶವಾದ ಬಳಿಕ ಇಂಥ ಕೀಟಗಳ  ಕಹಿ ಅನುಭವ ಕೃಷಿಯಲ್ಲಿ ಜೋರಾಗಿವೆ. ಕೃಷಿ ರಂಗ ಇಂದು ನಿಧಾನಕ್ಕೆ ಎಚ್ಚೆತ್ತುಕೊಂಡಿದೆ. ಬೆಳೆ ವೈವಿಧ್ಯದ ಸಮಗ್ರ ಕೃಷಿಯ ಪರಿಸರ ಸ್ನೇಹಿ ಮಾದರಿಯ ಮಾತಾಡುತ್ತಿದೆ. ವನ ವಿಜಾnನ ಹಾಗೂ ಕೃಷಿ ಜಾnನದ ಅಳವಡಿಕೆ ಜೊತೆ ಜೊತೆಗೆ ಶುರುವಾಗಿದೆ. 

ಮುಂದಿನ ಭಾಗ: ಕಾಡು ನೋಡಿ ಕೃಷಿ ಮಾಡಿ !

* ಶಿವಾನಂದ ಕಳವೆ  

Advertisement

Udayavani is now on Telegram. Click here to join our channel and stay updated with the latest news.

Next