Advertisement

ಕೇರಳ ಸರ್ಕಾರಕ್ಕಿಲ್ಲವೇ ವನ್ಯಜೀವಿ ಕಾಳಜಿ?

06:00 AM Aug 04, 2018 | Team Udayavani |

ಚಾಮರಾಜನಗರ: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವಾದ ಮೇಲೆ ಪ್ರಾಣಿಗಳ ಸಾವಿನ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ!

Advertisement

ಬಂಡೀಪುರ ಅರಣ್ಯದ ಮಧ್ಯೆಯೇ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. 766 ರಾಷ್ಟ್ರೀಯ ಹೆದ್ದಾರಿ (ಹಳೆಯ ಸಂಖ್ಯೆ 212) ಕೇರಳದ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ರಾಷ್ಟ್ರೀಯ ಹೆದ್ದಾರಿ 67 ತಮಿಳುನಾಡಿನ ಉದಕಮಂಡಲಕ್ಕೆ ಸಂಪರ್ಕ ಕಲ್ಪಿಸುತ್ತದೆ.ಎರಡು ರಾಜ್ಯಗಳನ್ನು ಬೆಸೆಯುವ ಈ ಹೆದ್ದಾರಿಗಳು ಸ್ವಾಭಾವಿಕವಾಗಿಯೇ ವಾಹನ ದಟ್ಟಣೆ ಹೊಂದಿವೆ.

ರಾತ್ರಿ ವಾಹನ ಸಂಚಾರ ನಿಷೇಧ ಮಾಡುವ ಮುನ್ನ 5 ವರ್ಷಗಳಲ್ಲಿ  ಒಟ್ಟು 91 ಪ್ರಾಣಿಗಳು ಮೃತಪಟ್ಟಿವೆ. ಆದರೆ, ನಿಷೇಧದ ನಂತರ ಒಟ್ಟು 10 ವರ್ಷಗಳ ಅವಧಿಯಲ್ಲಿ 36 ಪ್ರಾಣಿಗಳು ಮೃತಪಟ್ಟಿವೆ. ಇನ್ನೂ ಮುಖ್ಯ ವಿಷಯವೆಂದರೆ, ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ 2009ರಿಂದ ರಾತ್ರಿ 9 ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಒಂದು ಪ್ರಾಣಿಯೂ ಸತ್ತಿಲ್ಲ ಎಂದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಇಲಾಖೆಯ ದಾಖಲೆಗಳು ತಿಳಿಸುತ್ತಿವೆ.  ಹೀಗಾಗಿಯೇ ರಾತ್ರಿ ವಾಹನ ಸಂಚಾರದ ಸಮಯದಲ್ಲಿ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪುತ್ತಿದ್ದವು ಎಂಬ ಕಾರಣಕ್ಕಾಗಿ 10 ವರ್ಷಗಳ ಹಿಂದೆ ಬಂಡೀಪುರ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು, ಪರಿಸರವಾದಿಗಳು ಜಿಲ್ಲಾಡಳಿತಕ್ಕೆ ಸಮೀಕ್ಷಾ ವರದಿ ನೀಡಿದ್ದರು. ಇದರ ಅಧ್ಯಯನ ನಡೆಸಿದ ಅಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ ಮೀನಾ  2009ರ ಜೂನ್‌ 3ರಿಂದ ಬಂಡೀಪುರದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಿದ್ದರು.

ಒಂದು ವೇಳೆ ರಾಜ್ಯ ಸರ್ಕಾರ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದರೆ, ಮದ್ಯ, ಮರಳುದಂಧೆ, ಟಿಂಬರ್‌ ಮಾಫಿಯಾಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ, ಅಮೂಲ್ಯ ವನ್ಯಜೀವಿಗಳ ಮಾರಣ ಹೋಮಕ್ಕೆ ಅವಕಾಶವಾಗುತ್ತದೆ.
-ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ

ಮೂರು ತಿಂಗಳ ಹಿಂದೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಕೇರಳ ಸಾರಿಗೆ ಕಾರ್ಯದರ್ಶಿ, ಕೇರಳ ವೈನಾಡು ಜಿಲ್ಲಾಧಿಕಾರಿಗಳ ತಂಡವನ್ನು ರಾತ್ರಿ ವೇಳೆ ರಸ್ತೆಯಲ್ಲಿ ಸುತ್ತಾಡಿಸಿ ಪ್ರಾಣಿಗಳ ಸಂಚಾರ ಹೇಗೆ ಸುಗಮವಾಗಿದೆ ಎಂಬುದನ್ನು ತೋರಿಸಿಕೊಟ್ಟು, ಮನವರಿಕೆ ಮಾಡಿಕೊಟ್ಟಿದ್ದೇವೆ.
-ಅಂಬಾಡಿ ಮಾಧವ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ

Advertisement

ಪರ್ಯಾಯ ರಸ್ತೆಗೆ ಅನುವು ಮಾಡಿಕೊಡಿ
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಸ್ತೆಗೆ ಪರ್ಯಾಯವಾಗಿ ನಾಗರಹೊಳೆ ಅರಣ್ಯದಂಚಿನಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 90ನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಪ್ಲೀಸ್‌ ಸೇವ್‌ ಬಂಡೀಪುರ ಟೈಗರ್ ಆನ್‌ಲೈನ್‌ ಅಭಿಯಾನ
ಈ ಮಧ್ಯೆ ರಾತ್ರಿ ವಾಹನ ಸಂಚಾರಕ್ಕ ಅವಕಾಶ ನೀಡಬಾರದು ಎಂದು ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ಸದ್ದಿಲ್ಲದೆ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ. “ಪ್ಲೀಸ್‌ ಸೇವ್‌ ಬಂಡೀಪುರ ಟೈಗರ್’ ಶೀರ್ಷಿಕೆಯಲ್ಲಿ ಕೃಷ್ಣ ನವೀನ್‌ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.  ಈಗಾಗಲೇ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಭಿಯಾನದ ಮನವಿಗೆ ಈವರೆಗೆ 24 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಹಾಕುವ ಮೂಲಕ ಸಾಥ್‌ ನೀಡಿದ್ದಾರೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next