ವಿಜಯಪುರ: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ಸಚಿವರಾಗಿರುವ ನಮ್ಮ ತಂದೆ ಎಂ.ಬಿ.ಪಾಟೀಲ ಅವರ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ಧ್ರುವ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಬಬಲೇಶ್ವರ ತಾಲೂಕಿನ ಮಮದಾಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ, ತಮ್ಮ ನೇತೃತ್ವದ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಆ್ಯಂಡ್ ಅನಿಮಲ್ಸ್ ಸಹಯೋಗದಲ್ಲಿ ಕೈಗೊಂಡಿರುವ ಕೋಟಿ ವೃಕ್ಷ ಆಂದೋಲನದ ಭಾಗವಾಗಿ ಎರಡು ವರ್ಷಗಳ ಹಿಂದೆ ನೆಟ್ಟಿದ್ದ 1.36 ಲಕ್ಷ ಸಸಿಗಳ ಬೆಳವಣಿಗೆ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ನಾನು 11 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿಯೇ ನನ್ನನ್ನು ಈಗ ಸದಸ್ಯನಾಗಿ ನೇಮಿಸಲಾಗಿದೆ ಎಂದು ತಮ್ಮ ನೇಮಕಾತಿಯನ್ನು ಸಮರ್ಥಿಸಿಕೊಂಡರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯನಾಗಿ ನನ್ನನ್ನು ನೇಮಿಸಿರುವುದು ನಾನು ಸಚಿವರ ಪುತ್ರ ಎಂಬ ಕಾರಣಲ್ಲ, ಅನಗತ್ಯವಾಗಿ ಇಂಥ ಆರೋಪ ಮಾಡುವುದೂ ಸರಿಯಲ್ಲ. ನಾನು ಅಮೆರಿಕದಲ್ಲಿ ಓದುತ್ತಿದ್ದರೂ 4 ತಿಂಗಳ ರಜೆಯಲ್ಲಿ ಇಲ್ಲಿಗೆ ಬಂದಾಗ 3 ತಿಂಗಳನ್ನು ಕಬಿನಿ, ಬಂಡೀಪುರ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲೇ ಕಳೆಯುತ್ತೇನೆ ಎಂದರು.
ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಕುರಿತು ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಜತೆಗೆ ಕಪ್ಪು ಚಿರತೆ ಹಾಗೂ ಹುಲಿ ಛಾಯಾಗ್ರಹಣ ಮಾಡಿದ್ದೇನೆ. ಅಲ್ಲದೆ, ವಿಜಯಪುರದ ವನ್ಯಜೀವಿ ಸಂಪತ್ತನ್ನು ಕುರಿತು ವೈಲ್ಡ್ ವಿಜಯಪುರ ಎನ್ನುವ ಸಾಕ್ಷ್ಯಚಿತ್ರ ಮಾಡಿದ್ದೇನೆ. ಸಿದ್ಧೇಶ್ವರ ಶ್ರೀಗಳು ಕೂಡ ಅದನ್ನು ವೀಕ್ಷಿಸಿ, ಮೆಚ್ಚಿಕೊಂಡಿದ್ದರು ಎಂದು ವಿವರಿಸಿದ್ದಾರೆ.
8 ವರ್ಷದವನಿದ್ದ ಹಂತದಿಂದಲೂ ನಾನು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಈಗ ವನ್ಯಜೀವಿ ಮಂಡಳಿ ಸದಸ್ಯನಾಗಿ ನೇಮಕ ಮಾಡಿರುವುದು ಅಧಿಕೃತ ಸ್ಥಾನಮಾನ ಅಷ್ಟೆ ಎಂದರು.
ಇದರ ಮೂಲಕ ವನ್ಯಜೀವಿ ಸಂರಕ್ಷಣೆಗೆ ರೂಪಿಸುವ ನೀತಿ ನಿರೂಪಣೆಗಳ ಮೇಲೆ ಸಕಾರಾತ್ಮಕ ಕೊಡುಗೆ ನೀಡಬಹುದು ಎನ್ನುವುದು ನನ್ನ ಭಾವನೆಯಾಗಿದೆ ಎಂದರು.