Advertisement

ಕಾಳ್ಗಿಚ್ಚಿಗೆ ಆಹುತಿಯಾಗುತ್ತಿದೆ ಪ್ರವಾಸಿಗರ ಸ್ವರ್ಗ

01:06 PM Mar 07, 2018 | |

ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಪ್ರವಾಸಿಗರ ಸ್ವರ್ಗ, ಹಿಮ್ಮುರಿ ತಿರುವುಗಳ ಕಡಿದಾದ ಘಾಟಿ ಚಾರ್ಮಾಡಿಯಲ್ಲಿ ಅಗ್ನಿಯ ರುದ್ರನರ್ತನವಾಗುತ್ತಿದೆ.

Advertisement

ಕಾಳ್ಗಿಚ್ಚಿನಿಂದಾಗಿ ನೂರಾರು ಹೆಕ್ಟೇರ್‌ ಕಾಡು ಬೆಂಕಿಗೆ ಆಹುತಿಯಾಗುತ್ತಿದ್ದು, ಸಾವಿರಾರು ವನ್ಯಜೀವಿಗಳು ತಮ್ಮ ನೆಲೆ ಕಳೆದುಕೊಂಡಿವೆ. ಅನೇಕ ಸರೀ ಸೃಪಗಳು ಬೆಂಕಿಯ ಬೇಗೆಗೆ ಬೆಂದು ಹೋಗಿವೆ. ಚಾರ್ಮಾಡಿ ಘಾಟಿಯ ಅರಣ್ಯ ಸಂಪತ್ತು ಬೆಂಕಿಯಲ್ಲಿ ಕರಕಲಾಗಿ ತನ್ನ ಸ್ವರೂಪವನ್ನು ಕಳೆದು ಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಮಲಯ ಮಾರುತ ನಿರೀಕ್ಷಣಾ ಮಂದಿರ ಸಮೀಪದಿಂದ ಹರಡಿದ ಬೆಂಕಿಯು ಘಾಟಿ ಪ್ರದೇಶದ ಅರಣ್ಯವನ್ನು ಆವರಿಸಿಕೊಂಡಿದೆ.

ನಿರ್ಲಕ್ಷ್ಯದಿಂದ ಅನಾಹುತ
ಶಿರಾಡಿ ಘಾಟಿಯ ಕಾಮಗಾರಿಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆ ಮೂಲಕ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಕೆಲವು ಪ್ರವಾಸಿಗರು ಘಾಟಿಯ ಸೊಬಗನ್ನು ಸವಿಯಲು ಬಂದರೆ, ಲಾರಿ ಇನ್ನಿತರ ಖಾಸಗಿ ವಾಹನ ಸವಾರರು ತಮ್ಮ ದಣಿವನ್ನು ನಿವಾರಿಸಲು ಈ ಭಾಗದಲ್ಲಿ ತಂಗುವುದು ಸರ್ವೇಸಾಮಾನ್ಯ. ಕೆಲವು ಬಾರಿ ಇಂತಹ ಮಂದಿಯೇ ಚಳಿ ಕಾಯಿಸಲು ಇಲ್ಲಿ ಬೆಂಕಿ ಹಾಕಿ ಹಾಗೆಯೇ ಬಿಟ್ಟು ಅದು ಗಾಳಿಗೆ ಕಾಡಿನಾದ್ಯಂತ ಹಬ್ಬಿದ ಘಟನೆಗಳಿವೆ.

ಅರಣ್ಯ ಇಲಾಖೆ ಮೌನ
ಇಂತಹ ದುರ್ಘ‌ಟನೆಗಳು ಕಣ್ಣೆದುರು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕೈಗೊಂಡ ಕ್ರಮ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದ್ದು ಚಾರಣಿಗರ, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ. ಘಾಟಿ ಯಲ್ಲಿ ಮುಂದುವರಿದ ಕಾಳ್ಗಿಚ್ಚಿನಿಂದ ಬೆಳೆಬಾಳುವ ಅರಣ್ಯ ಸಂಪತ್ತು, ಔಷಧೀಯ ಗುಣಗಳ ಸಸ್ಯಗಳು, ಅಪರೂಪದ ವನ್ಯಜೀವಿಗಳು ಬೆಂಕಿಯ ಬೇಗೆಯಲ್ಲಿ ಸಿಲುಕಿ ನಾಶವಾಗುವ ಭೀತಿ ಎದುರಾಗಿದೆ. ಕೆಲವು ಪ್ರಾಣಿ – ಪಕ್ಷಿಗಳು ತಮ್ಮ ವಾಸ ತಾಣವನ್ನು ಕಳೆದುಕೊಂಡು ನೀರು, ಆಹಾರವಿಲ್ಲದೆ ನಾಡಿಗೆ ಇಳಿಯುವ ಸಾಧ್ಯತೆಯೂ ಇದೆ. ಇಂತಹ ಘಟನೆಗಳು ಮರುಕಳಿಸದಂತೆ ಇಲಾಖೆ ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.

ಮಾಫಿಯಾಗಳಿಂದ ಪಶ್ಚಿಮ ಘಟ್ಟ ನಿಯಂತ್ರಣ
ವರ್ಷದಿಂದ ವರ್ಷಕ್ಕೆ ಕಾಳ್ಗಿಚ್ಚು ಹೆಚ್ಚಾಗುತ್ತಿದ್ದು, ಇದು ಅರಣ್ಯ ಅತಿಕ್ರಮಣ ಮತ್ತು ಪಶ್ಚಿಮ ಘಟ್ಟವನ್ನು ನಿಯಂತ್ರಣ ಮಾಡುತ್ತಿರುವ ಮಾಫಿಯಾಗಳ ಕೊಡುಗೆ. ಅರಣ್ಯ ಇಲಾಖೆ ಮತ್ತು ಸರಕಾರ ಈ ಬಗ್ಗೆ ವಿಶೇಷವಾದ ಗಮನ ಕೊಡದೇ ಮತ್ತಷ್ಟು ಅರಣ್ಯ ವಿನಾಶಕ ಯೋಜನೆಗಳಿಗೆ ಅಗೋಚರವಾಗಿ ಪರವಾನಿಗೆ ನೀಡುತ್ತಿದೆ. ಈ ರೀತಿ ಮುಂದುವರಿದರೆ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯ, ನದಿ ಮೂಲ, ಮಳೆ ಕಾಡು ನಾಶವಾಗುತ್ತಾ ಮುಂದೆ ಆಗಲಿರುವ ಪ್ರಾಕೃತಿಕ ದುರಂತಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಚಾರಣಿಗ ದಿನೇಶ್‌ ಹೊಳ್ಳ ತಿಳಿಸಿದ್ದಾರೆ.

Advertisement

ಬೆಳ್ತಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಸಂಭವಿಸಿಲ್ಲ. ಅದು ಮೂಡಿಗೆರೆ ವ್ಯಾಪ್ತಿಯದ್ದು.
-ಕಿರಣ್‌, ವಲಯ ಅರಣ್ಯಾಧಿಕಾರಿ
ವನ್ಯಜೀವಿ ವಿಭಾಗ, ಬೆಳ್ತಂಗಡಿ

ಗುರು ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next