ವೈಲ್ಡ್ ಲೈಫ್ ಫೋಟೋಗ್ರಾಫರ್ ಒಬ್ಬ ಅಪರೂಪನ ಫೋಟೋಗಳನ್ನು ಸೆರೆಹಿಡಿಯುವ ಉದ್ದೇಶದಿಂದ ನಿರ್ಬಂಧಿತ ಕಾಡಿನೊಳಕ್ಕೆ ಹೋದಾಗ ಅಲ್ಲಿ ಏನೇನು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾನೆ ಅನ್ನೋದು “ನವರತ್ನ’ ಚಿತ್ರದ ಕಥೆಯ ಒಂದು ಎಳೆ. ಅಂತಿಮವಾಗಿ ಫೋಟೋಗ್ರಾಫರ್ ತಾನಂದುಕೊಂಡ ಸಾಧನೆ ಮಾಡುತ್ತಾನಾ, ಇಲ್ಲವಾ ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್ ಎನ್ನುತ್ತದೆ ಚಿತ್ರತಂಡ.
ಚಂದನವನದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳ ಅಬ್ಬರ ಹಿಂದೆಂದಿಗಿಂತಲೂ ಇತ್ತೀಚೆಗೆ ಹೆಚ್ಚಾಗಿಯೇ ಇದೆ. ಈಗ ಈ ಸಾಲಿಗೆ ಅಂಥದ್ದೇ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅಂದಹಾಗೆ ಆ ಚಿತ್ರದ ಹೆಸರು “ನವರತ್ನ’. ಬಹುತೇಕ ಹೊಸ ಪ್ರತಿಭೆಗಳೆ ತೆರೆಯ ಹಿಂದೆ ಮತ್ತು ತೆರೆಯ ಮುಂದೆ ನಿಂತು ಮಾಡಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇತ್ತೀಚೆಗೆ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದೇ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ಯೋಚನೆಯಲ್ಲಿದೆ.
ಈ ಚಿತ್ರದ ವಿಶೇಷವೆಂದರೆ, ಚಿತ್ರದ ಮುಕ್ಕಾಲು ಭಾಗ ದೃಶ್ಯಗಳು ಅರಣ್ಯದಲ್ಲಿಯೇ ನಡೆಯಲಿದೆಯಂತೆ. ಅದಕ್ಕಾಗಿ ಶೃಂಗೇರಿ ಸಮೀಪದ ಕಿಗ್ಗ, ಲಡಾಕ್, ಇಂಡೋನೇಶಿಯಾದ ದಟ್ಟ ಕಾನನದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ದಿನ ಚಿತ್ರೀಕರಣ ನಡೆಸಲಾಗಿದೆಯಂತೆ. ಇನ್ನು ಚಿತ್ರದ ಪ್ರೀ-ಪ್ರೊಡಕ್ಷನ್, ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಚಿತ್ರತಂಡ ಬರೋಬ್ಬರಿ ಮೂರು ವರ್ಷಗಳನ್ನು ತೆಗೆದಿರಿಸಿದೆಯಂತೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಒಬ್ಬ ಅಪರೂಪನ ಫೋಟೋಗಳನ್ನು ಸೆರೆಹಿಡಿಯುವ ಉದ್ದೇಶದಿಂದ ನಿರ್ಬಂಧಿತ ಕಾಡಿನೊಳಕ್ಕೆ ಹೋದಾಗ ಅಲ್ಲಿ ಏನೇನು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾನೆ ಅನ್ನೋದು “ನವರತ್ನ’ ಚಿತ್ರದ ಕಥೆಯ ಒಂದು ಎಳೆ. ಅಂತಿಮವಾಗಿ ಫೋಟೋಗ್ರಾಫರ್ ತಾನಂದುಕೊಂಡ ಸಾಧನೆ ಮಾಡುತ್ತಾನಾ, ಇಲ್ಲವಾ ಅನ್ನೋದೆ ಚಿತ್ರದ ಕ್ಲೈಮ್ಯಾಕ್ಸ್ ಎನ್ನುತ್ತದೆ ಚಿತ್ರತಂಡ.
ಈ ಹಿಂದೆ ಎರಡು ಚಿತ್ರಗಳಲ್ಲಿ ಅಭಿನಯಿಸಿರುವ ಅನುಭವ ಹೊಂದಿರುವ ಪ್ರತಾಪ್ ರಾಜ್ ಈ ಚಿತ್ರದಲ್ಲಿ ತೆರೆಮುಂದೆ ನಾಯಕನಾಗಿ ಮತ್ತು ತೆರೆಹಿಂದೆ ನಿರ್ದೇಶಕನಾಗಿ ಎರಡೆರಡು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ಮೋಕ್ಷಾ ಕುಲಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಮಿತ್ ರಾಜ್, ಶರತ್ ಲೋಹಿತಾಶ್ವ, ಬಲರಾಜವಾಡಿ, ಸಿದ್ದರಾಜ್ ಕಲ್ಯಾಣ್‌ಕರ್, ಸ್ವಾತಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭರತ್.ಕೆ ಕಡೂರ್ ಸಾಹಿತ್ಯದ ಮೂರು ಗೀತೆಗಳಿಗೆ ವೆಂಕಿ ರಾಗ ಒದಗಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್ ಪೌಲ್ ಹಿನ್ನಲೆ ಸಂಗೀತ ನೀಡಿದ್ದಾರೆ.
ರಿಗೋ ಪಿ.ಜಾನ್ ಮತ್ತು ಲಕ್ಷ್ಮೀ ರಾಜ್ ಛಾಯಾಗ್ರಹಣ, ವಿಷ್ಣು ಸಂಕಲನ, ನವೀನ್ ಕುಮಾರ್ ಸೌಂಡ್ ಡಿಸೈನಿಂಗ್ ಕಾರ್ಯ ಚಿತ್ರದಲ್ಲಿದೆ. ಮಂಡ್ಯ ಮೂಲದ ಉದ್ಯಮಿ ಚಂದ್ರಶೇಖರ್ ಎಸ್.ಪಿ “ನವರತ್ನ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಇತ್ತೀಚೆಗೆ ಫಸ್ಟ್ ಕಾಪಿಯೊಂದಿಗೆ ಹೊರಬಂದಿರುವ “ನವರತ್ನ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣಪತ್ರ ಕೊಟ್ಟು ಬಿಡುಗಡೆಗೆ ಅಸ್ತು ಎಂದಿದೆ. ಸದ್ಯ ತನ್ನ ಟ್ರೇಲರ್ ಮೂಲಕ ನಿಧಾನವಾಗಿ ಸದ್ದು ಮಾಡುತ್ತಿರುವ “ನವರತ್ನ’ ಥಿಯೇಟರ್‌ನಲ್ಲಿ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇನ್ನು ಒಂದೆರಡು ತಿಂಗಳಿನಲ್ಲಿ ಗೊತ್ತಾಗಲಿದೆ.