ಶಿರ್ವ: ಆತ್ರಾಡಿ -ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿಯ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಸಮೀಪ ಬೃಹತ್ ಗಾತ್ರದ ಕಾಡುಕೋಣವೊಂದು ಬುಧವಾರ ಬೆಳಗ್ಗೆ 10 -15ರ ವೇಳೆಗೆ ಮುಖ್ಯರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದು ವಾಹನ ಸವಾರರು ಸ್ವಲ್ಪದಲ್ಲಿಯೇ ಪಾರಾಗಿದ್ದಾರೆ. ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶದ ಸುತ್ತ ತಂತಿ ಬೇಲಿ ಹಾಕಲಾಗಿದ್ದು, ಕಾಡುಕೋಣ ಕಾಡಿನೊಳಕ್ಕೆ ಹೋಗಲಾಗದೆ ಸುತ್ತಾಡಿ ಬಳಿಕ ಕಾಡಿನೊಳಕ್ಕೆ ಹೋಗಿದೆ.
ಕಳೆದ ಎ. 18 ರಂದು ರಾತ್ರಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಅಭಯಾರಣ್ಯದಿಂದ ರಸ್ತೆದಾಟಲು ಯತ್ನಿಸುತ್ತಿದ್ದ ಕಾಡುಕೋಣ ಢಿಕ್ಕಿ ಹೊಡೆದು ಕಾರಿಗೆ ಹಾನಿ ಸಂಭವಿಸಿದ್ದು, ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು. ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸುತ್ತಮುತ್ತ ಭಾರೀ ಗಾತ್ರದ ಕಾಡುಕೋಣಗಳು ಮತ್ತು ಮರಿ ಕೋಣಗಳು ಸುತ್ತಾಡುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಭಯಭೀತರಾಗಿದ್ದಾರೆ.
ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶ ಮತ್ತು ಸೂಡ ಪರಿಸರದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದ ಬಗ್ಗೆ ಉದಯವಾಣಿ ಜ. 4 ಮತ್ತು ಎ. 20 ರಂದು ಸಮಗ್ರ ವರದಿ ನೀಡಿತ್ತು.
ಕಾಡು ಪ್ರಾಗಳ ಹಾವಳಿ ತಪ್ಪಿಸಲು ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶದ ಸುತ್ತ ತಂತಿ ಬೇಲಿ ನಿರ್ಮಿಸಲಾಗಿದೆ. ಈ ಪ್ರದೇಶದ ರಸ್ತೆಯಲ್ಲಿ ಪ್ರಯಾಸುವ ವಾಹನ ಸವಾರರು ಕರ್ಕಶ ಹಾರ್ನ್ ಬಳಸದೆ ಮಿತ ವೇಗದಲ್ಲಿ ಚಲಿಸಬೇಕಾಗಿದೆ. ಕಾಡುಕೋಣಗಳ ಹಾವಳಿಗೆ ಕ್ರಮಕೈಗೊಳ್ಳಲು ಅರಣ್ಯಇಲಾಖೆ ಪ್ರಯತ್ನಿಸುತ್ತಿದ್ದು,ಅರಣ್ಯ ಪ್ರದೇಶದಲ್ಲಿ ಅಡ್ಡಾಡುವ ಜನರು ಜಾಗರೂಕರಾಗಿರಬೇಕೆಂದು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ತಿಳಿಸಿದ್ದಾರೆ.
ರಸ್ತೆಯಲ್ಲಿ ಅಡ್ಡಾಡುತ್ತಿರುವ ಕಾಡುಕೋಣವನ್ನು ವಾಹನದಲ್ಲಿ ಪ್ರಯಾಣಿಸುತ್ತಿರುವ ಗ್ರಾ.ಪಂ. ಸದಸ್ಯ ವಿಜಯ್ ಧೀರಜ್ ಸೆರೆಹಿಡಿದಿದ್ದು ವೈರಲ್ ಆಗಿದೆ.