Advertisement

ಕಾಡ್ಗಿಚ್ಚು ಸಂಪೂರ್ಣ ತಹಬದಿಗೆ: ಹೆಲಿಕಾಪ್ಟರ್‌ಗಳ ಮಹತ್ವದ ಪಾತ್ರ  

12:23 AM Feb 27, 2019 | |

 ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸತತ ಐದು ದಿನಗಳ ಕಾಲ ಎದ್ದಿದ್ದ ಕಾಡ್ಗಿಚ್ಚು ಮಂಗಳವಾರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಕಾಡಿನ ಬೆಂಕಿಯನ್ನು ಆರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಎರಡು ವಾಯುಪಡೆ ಹೆಲಿಕಾಪ್ಟರ್‌ಗಳು, ಅಗ್ನಿಶಾಮಕದಳ, ಸ್ವಯಂ ಸೇವಕರು ಯಶಸ್ವಿಯಾಗಿದ್ದಾರೆ.

Advertisement

ಮಂಗಳವಾರ ಮಧ್ಯಾಹ್ನದ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ವಾಯುಪಡೆ
ಹೆಲಿಕಾಪ್ಟರ್‌ಗಳು ಮಹತ್ವದ ಪಾತ್ರ ವಹಿಸಿದವು. ಬೆಂಕಿಯ ಕೆನ್ನಾಲಿಗೆ ಸೋಮವಾರ ಬಂಡೀಪುರ ಉದ್ಯಾನದ ಪಶ್ಚಿಮ ದಿಕ್ಕಿಗೂ ಹರಡಿದ್ದರಿಂದ ಮತ್ತಷ್ಟು ಹಾನಿ ಸಂಭವಿಸಬಹುದೆಂಬ ಆತಂಕದಲ್ಲಿದ್ದ ಅರಣ್ಯಾಧಿಕಾರಿಗಳ ಮುಖದಲ್ಲಿ ಸಂಜೆಯ ವೇಳೆಗೆ ದಣಿವು ಮಿಶ್ರಿತ ಸಮಾಧಾನ ಕಂಡು ಬಂದಿತು.

ಮಂಗಳವಾರ ಬೆಳಗ್ಗೆ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಬರಗಿ ದೊಡ್ಡಕೆರೆಯಿಂದ ನೀರನ್ನು ಒಯ್ದು ಮೂಲೆಹೊಳೆ ಅರಣ್ಯ ವಲಯದ ಚಮ್ಮನಹಳ್ಳ, ತಿಪ್ಪನಹಳ್ಳ ಮತ್ತು ಕೇರಳ ರಾಜ್ಯದ ವೈನಾಡು ಅರಣ್ಯದ ಗಡಿಯಲ್ಲಿ ಉರಿಯುತ್ತಿದ್ದ ಕಿಚ್ಚನ್ನು ಆರಿಸಿದವು. ಅಲ್ಲದೇ ಕಲ್ಕೆರೆ ಮತ್ತು ಮೊಳೆಯೂರು ಅರಣ್ಯ ವಲಯಕ್ಕೆ ತಲುಪುವ ಮುನ್ನವೇ ಬೆಂಕಿಯನ್ನು ಆರಿಸಿದ್ದರಿಂದ ಆಹುತಿಯಾಗಿರುವ ಪ್ರದೇಶಗಳಿಗಿಂತಲೂ ಹೆಚ್ಚಿನ ಮೌಲ್ಯದ ಮರಗಳು, ವನ್ಯಸಂಪತ್ತನ್ನು ಒಳಗೊಂಡ ಅರಣ್ಯ ಪ್ರದೇಶಗಳು ಬೆಂಕಿಯಿಂದ ಪಾರಾದವು. ಉಳಿದಂತೆ 200ಕ್ಕೂ ಹೆಚ್ಚಿನ ಅರಣ್ಯಾಧಿಕಾರಿಗಳು, ಕಾಡಂಚಿನ ಗ್ರಾಮಗಳ 30ಕ್ಕೂ ಹೆಚ್ಚು ಸಾರ್ವಜನಿಕರೂ, ಎರಡು ಅಗ್ನಿ ಶಾಮಕದಳದ 20 ಸಿಬ್ಬಂದಿ ಸಹಿತ ನಾಲ್ಕು ವಾಹನಗಳು ಉಳಿದ ಬೆಂಕಿಯನ್ನು ತಹಬದಿಗೆ ತಂದರು.

9,000ಎಕರೆಗೂ ಹೆಚ್ಚು ಆಹುತಿ: ಬಂಡೀಪುರ ಅರಣ್ಯದಲ್ಲಿ ಕಳೆದ ಐದು ದಿನಗಳಿಂದ ಆರ್ಭಟಿಸಿದ ಕಾಡ್ಗಿಚ್ಚಿನಿಂದ ಅಂದಾಜು 9 ಸಾವಿರ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿರಬಹುದೆಂದು ಅಂದಾಜಿಸಲಾಗಿದೆ. ಕೇರಳದ ವೈನಾಡು ಪ್ರದೇಶದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ಆದರೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 800 ಎಕರೆಗೂ ಹೆಚ್ಚಿನ ವನ್ಯ ಸಂಪತ್ತು ಭಸ್ಮವಾಗಿದೆ. ಒಟ್ಟಾರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10 ಸಾವಿರ ಎಕರೆಗೂ ಮಿಗಿಲಾದ ವನ್ಯ ಸಂಪತ್ತು ಆಹುತಿಯಾಗಿರಬಹುದೆಂದು ಹೇಳಲಾಗಿದೆ.

ಬಂಡೀಪುರದಲ್ಲಿ ಕಾಡ್ಗಿಚ್ಚು ಸಂಪೂರ್ಣ ನಿಯಂತ್ರಣದಲ್ಲಿದೆ. ಸೋಮವಾರವೇ ಹಿರಿಯ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಿದ್ದು ರಕ್ಷಣಾ ಇಲಾಖೆಯೊಂದಿಗೆ ಮಾತನಾಡಿ ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಹಗಲಿರುಳು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ.
ಕಾಡ್ಗಿಚ್ಚು ತಹಬದಿಗೆ ಬಂದಿದೆ.
● ಎಚ್‌.ಡಿ.ಕುಮಾರಸ್ವಾಮಿ, ಸಿಎಂ

Advertisement

ಕರ್ನಾಟಕ-ತಮಿಳುನಾಡು-ಕೇರಳ ಗಡಿಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಅದನ್ನು ನಂದಿಸಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮುನ್ನೆಚ್ಚರಿಕೆ ಕ್ರಮವಾಗಿ 2 ಹೆಲಿಕಾಪ್ಟರ್‌ಗಳನ್ನು ಬಂಡೀಪುರದಲ್ಲಿ ಇರಿಸಿಕೊಳ್ಳಲಾಗುವುದು. ಬುಧವಾರ ಪರಿಸ್ಥಿತಿ ನೋಡಿಕೊಂಡು ಸಫಾರಿ ಆರಂಭಿಸಲಾಗುವುದು.
● ಅಂಬಾಡಿ ಮಾಧವ್‌,ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next