Advertisement

ಕಾಡಾನೆಗಳಿಂದ ಸೋಲಾರ್‌ ವಿದ್ಯುತ್‌ ಬೇಲಿ ನಾಶ, ಕೃಷಿ ಹಾನಿ

12:35 PM Apr 11, 2017 | Harsha Rao |

ಕಾಸರಗೋಡು: ಕಾಡಾನೆಗಳ ದಾಳಿ ತಡೆಯಲು ಅರಣ್ಯ ಇಲಾಖೆ ಕಳೆದ ವರ್ಷ ನಿರ್ಮಿಸಿದ್ದ ಸೋಲಾರ್‌ ವಿದ್ಯುತ್‌ ತಡೆ ಬೇಲಿಗಳನ್ನು ಪುಡಿಗೈದ ಕಾಡಾನೆಗಳ ಹಿಂಡು ಅಡೂರು ಪರಿಸರದಲ್ಲಿ ಕೃಷಿ ತೋಟಗಳಿಗೆ ನುಗ್ಗಿ ವ್ಯಾಪಕ ಹಾನಿ ಮಾಡಿವೆ.

Advertisement

ರವಿವಾರ ರಾತ್ರಿ ಅಡೂರು ಸನಿಹದ ಕಾಟಿಕಜೆ ವ್ಯಾಪ್ತಿಯಲ್ಲಿ ಕೃಷಿ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು ಆತಂಕ ಸೃಷ್ಟಿ ಮಾಡಿತು. ಕಾಟಿಕಜೆಯ ಬುದ್ಧ ನಾಯಕ್‌, ರಾಜೇಶ್‌ ನಾಯಕ್‌, ಚಂದ್ರಶೇಖರ ನಾಯ್ಕರ ತೋಟಗಳಿಗೆ ನುಗ್ಗಿದ ಆನೆಗಳು ತೆಂಗು ಮತ್ತು ಕರಿಮೆಣಸಿನ ಬಳ್ಳಿಗಳನ್ನು ನಾಶಗೊಳಿಸಿವೆ.

ಕಾಡಾನೆಗಳ ದಾಳಿಯಿಂದ ಕೃಷಿ ಸಹಿತ ಜನರನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಕಳೆದ ವರ್ಷ ವ್ಯಾಪಕ ಪ್ರಮಾಣದಲ್ಲಿ ಸೋಲಾರ್‌ ವಿದ್ಯುತ್‌ ಬೇಲಿ ನಿರ್ಮಿಸಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಈ ತಡೆಬೇಲಿ ಕಾರ್ಯ ಸ್ಥಗಿತಗೊಳಿಸಿದೆ.
ಮಳೆಗಾಲದಲ್ಲಿ ತಡೆಬೇಲಿಯನ್ನು ಆವರಿಸುವ ಕಾಡು, ಪೊದರು, ಬಳ್ಳಿಗಳಿಂದ ಸೋಲಾರ್‌ ವಿದ್ಯುತ್‌ ತಡೆಬೇಲಿಯ ಕಾರ್ಯಕ್ಷಮತೆ ಸಹಜವಾಗಿ ಕುಗ್ಗುತ್ತದೆ. ಮಳೆಗಾಲದ ಬಳಿಕ ನಿರ್ವಹಣೆ ಮಾಡದಿರುವುದು ಕಾಡಾನೆಗಳು ಬೇಲಿ ಪುಡಿಗಟ್ಟಲು ಇದು ಕಾರಣ.

ಕಳೆದ ನಾಲ್ಕು ವರ್ಷಗಳಿಂದ ವ್ಯಾಪಕವಾಗಿ ಅಡೂರು, ಪಾಂಡಿ, ಕಾಟಿಕಜೆ ಸಹಿತ ಮಲೆನಾಡ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಯಿಂದ ವ್ಯಾಪಕ ಕೃಷಿ ನಾಶವಾಗುತ್ತಿದ್ದು, ಅರಣ್ಯ ಇಲಾಖೆ ಸಹಿತ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಕಾಡಾನೆಗಳ ದಾಳಿ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನು ಕಾಡಾನೆಗಳ ಆವಾಸ ಪ್ರದೇಶ ಎಂದು ಘೋಷಿಸಿ ಕೃಷಿಕರಿಗೆ ರಕ್ಷಣೆ ನೀಡಬೇಕು ಎಂದು ಪ್ರಧಾನಿ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲು ಸ್ಥಳೀಯರು ತೀರ್ಮಾನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next