Advertisement

ಕಾಡಾನೆ ದಾಳಿ: ನಷ್ಟ ಪರಿಹಾರಕ್ಕೆ  ಒತ್ತಾಯ

04:21 PM Apr 26, 2023 | Team Udayavani |

ಬಂಗಾರಪೇಟೆ: ಕಾಡಾನೆಗಳ ಹಾವಳಿಯಿಂದ ನಾಶವಾಗಿರುವ ಪ್ರತಿ ಎಕರೆಗೆ 10 ಲಕ್ಷ ಪರಿಹಾರ ನೀಡುವ ಜತೆಗೆ ಗಡಿಭಾಗದ ರೈತರ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ನೊಂದ ರೈತರಿಗೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕರೆ ನೀಡಿದರು.

Advertisement

ತಾಲೂಕಿನ ಗಡಿಭಾಗದ ಸಾಕಾರಸನಹಳ್ಳಿ ಗ್ರಾಮದಲ್ಲಿ ನೊಂದ ರೈತರ ತೋಟಗಳಿಗೆ ಭೇಟಿ ನೀಡಿ ಮಾತನಾಡಿ, ಗಡಿಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮತ ಕೇಳಲು ಬರುವ, ಮೂರು ಪಕ್ಷದ ಅಭ್ಯರ್ಥಿಗಳಿಗೆ ನೊಂದ ರೈತರಿಂದ ಕಾಡಾನೆ ಲದ್ದಿ ಚಳುವಳಿ ಮಾಡುವ ಮೂಲಕ, ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಅರಣ್ಯ ಅಧಿಕಾರಿಗಳಿಗೆ ನೀಡಿದರು.

ಕಾಡಾನೆ ದಾಳಿ ತಪ್ಪಿಸುವಲ್ಲಿ ಅಧಿಕಾರಿಗಳು, ಪ್ರತಿನಿಧಿಗಳು ವಿಫ‌ಲ: ಕಾಡಾನೆಗಳು ಗಡಿಭಾಗದ ಸಾಕರಸನಹಳ್ಳಿ, ದೋಣಿಮಡಗು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ರೈತರ ತೋಟಗಳಿಗೆ ನುಗ್ಗಿ ,ಹತ್ತಾರು ವರ್ಷಗಳಿಂದ ಜೀವನ ನಿರ್ವಹಣೆಗೆ ಆಧಾರವಾಗಿದ್ದ ವೀಳ್ಯದಎಲೆ ತೋಟ ಹಾಗೂ ಟೊಮೇಟೊ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ರೈತರ ಬದುಕನ್ನು ಕಸಿಯುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಅರಣ್ಯ ಇಲಾಖೆ ಹಾಗೂ ಜನ ಪ್ರತಿನಿಧಿಗಳು ವಿಫ‌ಲವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.

ಪ್ರತಿ ವರ್ಷ ರೈತರ ನಿದ್ದೆಗೆಡಿಸುತ್ತಿರುವ ಕಾಡಾನೆಗಳು ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಂತಹ ಬೆಳೆ ಸಮೃದ್ಧವಾಗಿ ಬಂದು ಕೈಗೆ ಸಿಕ್ಕಿ ಉತ್ತಮ ಲಾಭ ಬರುವ ಸಮಯಕ್ಕೆ ಕಾಡಾನೆಗಳು ಎಲ್ಲವನ್ನು ಹಾಳು ಮಾಡಿವೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಜನ ಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫ‌ಲವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಮುಖ ನೋಡಿ ಮತ ಹಾಕಬೇಕು: ರೈತ ನಾಗರಾಜ ಮಾತನಾಡಿ, ಐದು ವರ್ಷಗಳಿಂದ ನಾಪತ್ತೆಯಾಗಿರುವ ಜನಪ್ರತಿನಿಧಿಗಳು 6 ತಿಂಗಳಿಂದ ಕಾಲಕ್ಕೆ ಚಕ್ರ ಕಟ್ಟಿಕೊಂಡು ಹಳ್ಳಿಗಳಿಗೆ ರಾತ್ರಿ ಹಗಲು ಸುತ್ತಾಡಿ, ನಿಮ್ಮ ಕೈಕಾಲಿಗೆ ಬೀಳುತ್ತಿದ್ದಾರೆ. ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ. ಈ ಬಾರಿ ನಮ್ಮನ್ನು ಆಶೀರ್ವಾದಿಸಿ ಎಂದು ಬೇಡಿಕೊಳ್ಳುವ ಜನಪ್ರತಿನಿಧಿ ಗಳು ಹತ್ತಾರು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ರೈತರ ಪ್ರಾಣ ಹಾಗೂ ಬೆಳೆ ನಾಶವಾಗುತ್ತಿದ್ದರೂ ಸ್ಪಂದಿಸಿಲ್ಲ. ಈಗ ರೈತರು ಯಾವ ಮುಖನೋಡಿ ಮತ ಹಾಕಬೇಕು ಎಂದು ಪ್ರಶ್ನೆ ಮಾಡಿದರು.

Advertisement

ನೆಪಮಾತ್ರಕ್ಕೆ ಬೆಳೆ ಪರಿಶೀಲನೆ: ರೈತ ಸೀತಬೈರಪ್ಪ ಮಾತನಾಡಿ, ಕಾಡಾನೆಗಳಿಂದ ಬೆಳೆ ನಷ್ಟವಾಗಿದೆ ಎಂದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರೆ ನೆಪಮಾತ್ರಕ್ಕೆ ಬೆಳೆ ಪರಿಶೀಲನೆ ಮಾಡಿ ಪೋಟೋ ಹಿಡಿದುಕೊಂಡು ಸರ್ಕಾರಕ್ಕೆ ಕಳುಹಿಸುತ್ತೇವೆಂದು ಉಡಾಫೆ ಉತ್ತರ ನೀಡುತ್ತಾರೆ. ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣ ಮಾಡಲು ಅಳವಡಿಸಿರುವ ಸೋಲಾರ್‌ ತಂತಿ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಅದನ್ನು ನಿರ್ವಹಣೆ ಮಾಡುವ ಕೆಲಸಗಾರರು ಇಲ್ಲದೆ ಅನಾಥವಾಗಿ ಬಿದ್ದರೂ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫ‌ಲವಾಗಿದ್ದಾರೆಂದು ಆರೋಪ ಮಾಡಿದರು.

ನಷ್ಟ ಪರಿಹಾರಕ್ಕೆ ಒತ್ತಾಯ: ರೈತ ಸಂಘದ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ಯಾವುದೇ ಜನ ಪ್ರತಿನಿಧಿ ವ್ಯವಸಾಯ ಮಾಡಿ ಅದರ ಕಷ್ಟ ಅನುಭವಿಸಿದರೆ, ಆಗ ಗೊತ್ತಾಗುತ್ತದೆ ರೈತರ ಅನ್ನದ ಬೆಲೆ. ವ್ಯವಸಾಯದ ಗಂದ ಗಾಳಿಗೊತ್ತಿಲ್ಲದ ಜನಪ್ರತಿನಿಧಿಗಳಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ರೈತರ ಬಗ್ಗೆ ಗೌರವ ಇದ್ದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೂ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. 24 ಗಂಟೆಯಲ್ಲಿ ಕಾಡಾನೆಗಳ ಹಾವಳಿಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ 10 ಲಕ್ಷ ಪರಿಹಾರ ನೀಡಿ, ಹದಗೆಟ್ಟಿರುವ ಸೋಲಾರ್‌ ತಂತಿ ಸರಿಪಡಿಸಬೇಕೆಂದು ರೈತರು ಒತ್ತಾಯಿಸಿದರು.

ರೈತರ ನಿಯೋಗದಲ್ಲಿ ತಾಲೂಕು ಅಧ್ಯಕ್ಷ ಕದರಿನತ್ತ ಅಪ್ರೋಜಿರಾವ್‌, ಯಾರಂಘಟ್ಟ ಗಿರೀಶ್‌, ರಾಮಸಾಗರ ವೇಣು, ವಿಶ್ವ, ಮುನಿರಾಜು, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next