Advertisement

ಕಾಡಾನೆ ಸಮಸ್ಯೆ: ಒತ್ತಡದಲ್ಲಿ ಅರಣ್ಯ ಸಿಬ್ಬಂದಿ

08:45 PM May 01, 2019 | Lakshmi GovindaRaj |

ಸಕಲೇಶಪುರ: ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದ್ದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ನಿದ್ರಿಸುತ್ತಿದ್ದು ಇದರಿಂದ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳು ನಿದ್ರೆಯಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಕಳೆದ ಒಂದು ದಶಕದಲ್ಲಿ ಮಿತಿ ಮೀರಿದ್ದು ಆಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಸುಮಾರು 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಹಲವಾರು ಮಂದಿ ಕಾಡಾನೆ ದಾಳಿಯಿಂದ ಮಾರಣಾಂತಿಕ ಗಾಯಗೊಂಡಿದ್ದಾರೆ.

ಕಾಡಾನೆ ಹಾವಳಿಯಿಂದ ಕೋಟ್ಯಂತರ ಮೌಲ್ಯದ ಬೆಳೆ ನಾಶವಾಗಿದ್ದರೂ, ಅರಣ್ಯ ಇಲಾಖೆಯವರು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ಹುಡುಕಲು ಮುಂದಾಗದ ಕಾರಣ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರ ಕೆಂಗಣ್ಣಿಗೆ ಗುರಿ: ತಾಲೂಕಿನಲ್ಲಿ ದಿನನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು ಇದನ್ನು ಓಡಿಸಲು ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳ ಜೀವಭಯ ಬಿಟ್ಟು ಕಾರ್ಯಾಚರಣೆ ನಡೆಸಬೇಕಾಗಿದೆ.

ಕಾಡಾನೆಗಳನ್ನು ಒಂದು ಗ್ರಾಮದಿಂದ ಓಡಿಸಿದರೆ ಸುತ್ತು ಹಾಕಿ ಪಕ್ಕದ ಗ್ರಾಮಕ್ಕೆ ಹೋಗುತ್ತಿದ್ದು, ಇದೇ ರೀತಿ ಸುತ್ತು ಹಾಕಿ ದಾಂದಲೇ ನಡೆಸುತ್ತಿದೆ. ಕೆಳಹಂತದ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರು ದೂರವಾಣಿ ಕರೆ ಮಾಡಿದ ತಕ್ಷಣ ಕಾಡಾನೆ ಇರುವ ಪ್ರದೇಶಕ್ಕೆ ಹೋಗಬೇಕಾಗಿದ್ದು, ಇಲ್ಲದಿದ್ದಲ್ಲಿ ಗ್ರಾಮಸ್ಥರು ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

Advertisement

ಸೂಕ್ತ ರಕ್ಷಣೆಯಿಲ್ಲ: ಕಾಡಾನೆ ಪೀಡಿತ ಪ್ರದೇಶಗಳಲ್ಲಿ ನಡೆಯುವ ಸುಗ್ಗಿ, ದೇವರ ಉತ್ಸವ, ಚುನಾವಣೆ ಮುಂತಾದ ಕಾರ್ಯಕ್ರಮಗಳಿಗು ಸಹ ಅರಣ್ಯ ಇಲಾಖೆ ಸಿಬ್ಬಂದಿಗಳು ಹೋಗಿ ರಕ್ಷಣೆ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಾಡಾನೆಗಳಿಂದ ರಕ್ಷಣೆ ಇಲ್ಲ ಆದರೂ ಸಹ ನಾಗರಿಕರ ರಕ್ಷಣೆಗಾಗಿ ಹೋಗಬೇಕಾದ ಅನಿವಾರ್ಯತೆಯಿಂದ ಕೆಳಹಂತದ ಸಿಬ್ಬಂದಿಗಳು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ತಾಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಯೊಂದು ಅರಣ್ಯ ಇಲಾಖೆ ನೌಕರ ಲೋಕೇಶ್‌ ಎಂಬುವರ ಮೇಲೆ ದಾಳಿ ನಡೆಸಿದ್ದು ಅದೃಷ್ಟವಷಾತ್‌ ಅವರು ಜೀವಪಾಯದಿಂದ ಪಾರಾಗಿದ್ದಾರೆ.

ಆದರೆ, ಅವರ ಬೈಕ್‌ ಸಂಪೂರ್ಣವಾಗಿ ಕಾಡಾನೆ ದಾಳಿಯಿಂದ ಜಖಂಗೊಂಡಿದೆ. ಇದೇ ವೇಳೆ ಉದ್ರಿಕ್ತಗೊಂಡ ಕೆಲವು ಗ್ರಾಮಸ್ಥರು ವಿನಾಕಾರಣ ಲೋಕೇಶ್‌ರವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ರೀತಿಯ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದರೂ, ಈ ಬಗ್ಗೆ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

ಮೇಲಧಿಕಾರಿಗಳ ವೈಫ‌ಲ್ಯ: ಕಾಡಾನೆ ಬಂದಿದೆ ಎಂದರೆ ಉನ್ನತ ಅಧಿಕಾರಿಗಳು ಆರಾಮವಾಗಿ ಮನೆಯಲ್ಲಿ ನಿದ್ರಿಸುತ್ತಿದ್ದರೆ ರಾತ್ರೋ ರಾತ್ರೀ ಕೆಳಹಂತದ ಸಿಬ್ಬಂದಿಗಳು ಹೆಂಡತಿ ಮಕ್ಕಳನ್ನು ಬಿಟ್ಟು ಕಾರ್ಯಾಚರಣೆಗೆ ಹೋಗಬೇಕಾಗಿದೆ. ಅಪರೂಪಕ್ಕೊಮ್ಮೆ ತಾಲೂಕಿಗೆ ಆಗಮಿಸುವ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇಲ್ಲಿಯವರೆಗೂ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ವಿಫ‌ಲರಾಗಿದ್ದಾರೆ.

ಕಾಡಾನೆ ಕಾಲ್‌ ಸೆಂಟರ್‌, ಬೆರಳೆಣಿಕೆಯಷ್ಟು ಕಾಡಾನೆಗಳ ಸ್ಥಳಾಂತರ, ಕಾಡಾನೆಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸುವಂತಹ ಕೆಲಸಗಳನ್ನು ಅರಣ್ಯ ಇಲಾಖೆ ಮಾಡಿದ್ದರೂ, ಪ್ರಯೋಜನವಾಗಿಲ್ಲ. ಸಮಸ್ಯೆ ಮಿತಿ ಮೀರಿ ಹೋಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಆನೆ ಕಾರಿಡಾರ್‌ ಮತ್ತು ಆನೆ ಧಾಮವನ್ನು ಮಾಡಿದಲ್ಲಿ ಮಾತ್ರ ಕಾಡಾನೆ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು. ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ವಿನಾಕಾರಣ ಸಾರ್ವಜನಿಕರ ಆಕ್ರೋಷಕ್ಕೆ ತುತ್ತಾಗುತ್ತಿದ್ದಾರೆ.
-ಬ್ಯಾಕರವಳ್ಳಿ ಜಯಣ್ಣ, ಸಮಾಜ ಸೇವಕರು

ಸಕಲೇಶಪುರ, ಆಲೂರು. ಯಸಳೂರು ವಲಯದಲ್ಲಿ ಕಾಡಾನೆ ಕಾರ್ಯಾಚರಣೆಗಾಗಿ ಸುಮಾರು 150 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಯಾರಾದರೂ ವಿನಾಕಾರಣ ಸಿಬ್ಬಂದಿಗಳ ಮೇಲೆ ದಬ್ಟಾಳಿಕೆ ಮಾಡುವುದನ್ನು ಕಂಡು ಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
-ಲಿಂಗರಾಜು, ಉಪವಲಯ ಅರಣ್ಯಾಧಿಕಾರಿ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next