ಚಿಕ್ಕಮಗಳೂರು: ಸೆರೆಯಾದ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಡಿ.2ರ ರಾತ್ರಿ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಕನಗದ್ದೆ ಗ್ರಾಮದಲ್ಲಿ ನಡೆದಿದೆ. ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಆನೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿದು ಸಾಗಿಸಲು ಸರ್ಕಾರದ ಆದೇಶದ ಮೇರೆಗೆ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ನಿನ್ನೆ ರಾತ್ರಿ ಮೇಕನಗದ್ದೆ ಗ್ರಾಮದ ಸಮೀಪ ಕಾಡಾನೆ ಕಾಣಿಸಿಕೊಂಡಿದ್ದು, ಅರವಳಿಗೆ ಚುಚ್ಚುಮದ್ದು ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ಅರವಳಿಕೆ ಚುಚ್ಚುಮದ್ದು ಹಾಕಿದ ನಂತರ ಆನೆಯ ಜಾಡು ಹಿಡಿದು ಹೋದಾಗ ಸ್ವಲ್ಪ ದೂರದಲ್ಲೇ ಕಾಡಾನೆ ಮೃತಪಟ್ಟು ಬಿದ್ದಿದ್ದು ಕಂಡುಬಂದಿದೆ.
ಶನಿವಾರ ರಾತ್ರಿ ಸುಮಾರು 11-30 ರ ವೇಳೆಗೆ ಈ ಘಟನೆ ನಡೆದಿದ್ದು, ಇತ್ತೀಚೆಗೆ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿದ್ದ ದೊಡ್ಡಗೊಳ್ಳ ಎಂಬ ಸ್ಥಳದ ಸಮೀಪದಲ್ಲಿಯೇ ಕಾಡಾನೆ ಸತ್ತು ಬಿದ್ದಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿರುವ ಆನೆ ಒಂಟಿ ಗೊಂಬಿನ ಆನೆಯಾಗಿದೆ. ಇದು ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿತ್ತು ಎಂದು ತಿಳಿಬಂದಿದೆ.
ಆನೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.