Advertisement

ರಾ.ಹೆದ್ದಾರಿ 75 ಕೊಲ್ಲಹಳ್ಳಿ ಸಮೀಪ ರಸ್ತೆ ದಾಟಿದ ಕಾಡಾನೆ: ಕೆಲಕಾಲ ಆತಂಕ

07:42 PM Aug 21, 2022 | Team Udayavani |

ಸಕಲೇಶಪುರ: ಪಟ್ಟಣಕ್ಕೆ ಪ್ರವೇಶ ಮಾಡುವ ಕೊಲ್ಲಹಳ್ಳಿ ಗ್ರಾಮದ ನಂದಿ ಎಸ್ಟೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಬದಿಯಲ್ಲೇ ಕಾಡಾನೆಯೊಂದು ಭಾನುವಾರ ಸಂಜೆ ಏಕಾಏಕಿ ಕಾಣಿಸಿಕೊಂಡಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

Advertisement

ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು-ಬೆಂಗಳೂರು ನಡುವೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವುದು ಸಾಮಾನ್ಯವಾಗಿದ್ದು ಈ ವೇಳೆ ಹೆದ್ದಾರಿಯ ಒಂದು ಬದಿಯಲ್ಲಿರುವ ಗದ್ದೆಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಇದನ್ನು ನೋಡಲು ಜನ ಮುಗಿದು ಬಿದ್ದರು. ಕೆಲವರು ವಾಹನಗಳಲ್ಲೆ ವಿಡಿಯೋ ಪೋಟೋ ತೆಗೆದುಕೊಂಡರೆ ಇನ್ನು ಕೆಲವರು ವಾಹನಗಳನ್ನು ನಿಲ್ಲಿಸಿ ಕಾಡಾನೆ ವೀಕ್ಷಿಸಿದರು.

ನಂತರ ಗದ್ದೆಯಿಂದ ನಿಧಾನಕ್ಕೆ ಬಂದ ಕಾಡಾನೆ ಹೆದ್ದಾರಿಯನ್ನು ದಾಟಿ ನಂದಿ ಎಸ್ಟೇಟ್ ಒಳಗೆ ಪ್ರವೇಶಿಸಿತು. ಕಳೆದ ವರ್ಷ ಕಾಡಾನೆಯೊಂದು ಇದೇ ಪ್ರದೇಶದಲ್ಲಿ ಅಸ್ತಿಕ ಭಟ್ ಎಂಬುವರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಜಾಗವು ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದ್ದು ಮತ್ತೊಮ್ಮೆ ಕಾಡಾನೆ ಈ ಪ್ರದೇಶಕ್ಕೆ ಬಂದಿರುವುದು ಜನರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಶಿಲ್ಪ  ಹಾಗೂ ಇತರ ಸಿಬ್ಬಂದಿಗಳು ಭೇಟಿ ನೀಡಿ ಯಾವುದೇ ಅನಾಹುತವಾಗದಂತೆ ನೋಡಿಕೊಂಡರು. ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವ್ಯಾಪಕವಾಗಿದ್ದು ಜನಸಾಮಾನ್ಯರು, ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next