ರಾಮನಗರ: ಕಾವೇರಿ ವನ್ಯಜೀವಿ ವಲಯದಿಂದ ಜಿಲ್ಲೆಯ ಜನವಸತಿ ಪ್ರದೇಶಗಳತ್ತ ವಲಸೆ ಬಂದಿರುವ ಕಾಡಾನೆಗಳಿಗೆ ಮತ್ತೆ ಕಾಡಿಗೆ ಹೋಗಲು ಇಷ್ಟವಾದಂತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಕಾಡಾನೆಗಳು ಇಲ್ಲಿಂದ ಕದಲುತ್ತಿಲ್ಲ. ಆನೆ ನಡೆದಿದ್ದೆ ದಾರಿ ಎಂಬ ಮಾತಿನಂತೆ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಆನೆಗಳು ನುಗ್ಗುತ್ತಿದ್ದು, ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಮಾಡುತ್ತಿರುವ ಪ್ರಯತ್ನವೆಲ್ಲಾ ಹೊಳೆಯಲ್ಲಿ ಹುಣಸೇಹಣ್ಣು ತೇದಂತಾಗಿದೆ.
ನಾಡಿಗೆ ನುಗ್ಗಿ ಹಾವಳಿ ಎಬ್ಬಿಸುತ್ತಿರುವ ಆನೆಗಳನ್ನು ಹಿಂದಕ್ಕಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ಬೆನ್ನುತ್ತಿದ್ದಾರೆ. ಇತ್ತ ಆನೆಗಳು ದಿಕ್ಕಾಪಾಲಾಗಿ ತಿರುಗಾಡುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು, ಇದೀಗ ಅರಣ್ಯ ಪ್ರದೇಶದಿಂದ 10 ರಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮ ಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿವೆ.
ಆನೆಗಳ ಹಾವಳಿಗೆ ಜನತೆ ಕಂಗಾಲು: ಇತ್ತೀಚಿಗೆ ಚನ್ನಪಟ್ಟಣ ತಾಲೂಕಿನ ಸುಳ್ಳೇರಿ, ಮಂಗಾv ಹಳ್ಳಿ, ಹೊಂಗನೂರು, ಎಸ್.ಎಂ.ಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಣಿಸಿ ಕೊಂಡು ಸಾಕಷ್ಟು ಹಾನಿಮಾಡಿದೆ. 6 ಆನೆಗಳ ಹಿಂಡು ರಸ್ತೆ ದಾಡುತ್ತಿರುವ, ರೈತರ ಜಮೀನಿನಲ್ಲಿ ಬೆಳೆ ಹಾನಿ ಮಾಡಿರುವ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ಆನೆಗಳ ಹಾವಳಿಗೆ ಜನತೆ ಕಂಗಾಲಾಗಿದ್ದಾರೆ.
ವನ್ಯಜೀವಿ ವಲಯಕ್ಕೆ ಹೋಗದ ಆನೆಗಳು: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 10ರಿಂದ 12 ಕಾಡಾನೆಗಳು ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ, ಜಿಲ್ಲೆಯ ಹಲವು ಭಾಗಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ಅರಣ್ಯ ಇಲಾಖೆಯ ನೂರರು ಸಿಬ್ಬಂದಿ ಅಹೋರಾತ್ರಿ ಕಾಡಾನೆಗಳನ್ನು ಓಡಿಸಲು ಬೆವರು ಸುರಿಸುತ್ತಿದ್ದಾರೆ. ಇವರೊಂದಿಗೆ ಜೂಟಾಟ ಆಡುತ್ತಿರುವ ಕಾಡಾನೆಗಳು ಜಪ್ಪಯ್ನಾ ಎಂದರೂ ಕಾಡಿಗೋಗದೆ ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಅಲೆದಾಡುತ್ತಾ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯಪಡೆ ತಂಡ ದೊಂದಿಗೆ ಜೂಟಾಟ ಆಡುತ್ತಿವೆ.
ಜಿಲ್ಲೆಯಲ್ಲಿ ಕಾಡಾನೆ ಹಾವಳಿ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಕಾಡಾನೆ ಮತ್ತ ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಪುಂಡಾನೆಗಳ ಸ್ಥಳಾಂತರ, ಸೋಲಾರ್ ಫೆನ್ಸಿಂಗ್, ಆನೆ ನಿರೋಧಕ ಟ್ರಂಚ್, ಥರ್ಮಲ್ ಕ್ಯಾಮೆರಾ, ಆನೆ ಕಾರ್ಯಪಡೆ ಹೀಗೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆಯಾದರೂ, ಇದ್ಯಾವುದೂ ಸಫಲಗೊಂಡಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣು: ಇದೀಗ ಚನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳಲ್ಲಿ ಸುತ್ತಾಡುತ್ತಿರುವ 6 ಕಾಡಾನೆಗಳ ಹಿಂಡನ್ನು ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆ ತಂಡ ಕಬ್ಟಾಳು ಅರಣ್ಯ ಪ್ರದೇಶದಿಂದ ಸಂಗಮ ವನ್ಯಜೀವಿ ವಲಯದತ್ತ ಅಟ್ಟಿದ್ದರು. ಆದರೆ, ವನ್ಯಜೀವಿ ವಲಯದ ಒಳಗೆ ಪ್ರವೇಶಿಸುವುದಕ್ಕೆ ಮುನ್ನ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಆನೆಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹೈರಾಣಾಗಿಸಿದೆ.
ಆನೆ ಹಾವಳಿ: ಶಾಶ್ವತ ಪರಿಹಾರ ಅಗತ್ಯ: ಕಾಡಾನೆಗಳ ಹಾವಳಿ ತಪ್ಪಿಸಲು ವೈಜ್ಞಾನಿಕ ಪರಿಹಾರ ಹುಡುಕಬೇಕಾದ ಅರಣ್ಯ ಇಲಾಖೆ, ಹೊಸ ಹೊಸ ಯೋಜನೆ ರೂಪಿಸಿ ಹಣ ಖರ್ಚು ಮಾಡುವ ದಾರಿ ಹುಡುಕುತ್ತಿದೆ. ಇತ್ತ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ನೂರಾರು ಗ್ರಾಮಗಳ ಜನತೆ ಕಾಡಾನೆ ಹಾವಳಿಯಿಂದ ಕಂಗಾಲಾಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವರೇ ಎಂದು ಕಾಯ್ದು ನೋಡಬೇಕಿದೆ.
● ಸು.ನಾ.ನಂದಕುಮಾರ್