ಸುಬ್ರಹ್ಮಣ್ಯ: ಕಾಡಿನಲ್ಲಿ ಆಹಾರ ಕೊರತೆ ಕಾಣಿಸಿಕೊಳ್ಳುವ ಕಾರಣ ಹತ್ತಿರದ ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ಲಗ್ಗೆ ಇಡುವ ಪ್ರಕರಣಗಳು ಪ್ರತೀದಿನವೆಂಬಂತೆ ವರದಿಯಾಗುತ್ತಲೇ ಇದೆ. ಅದರಲ್ಲೂ ಕಾಡೆಮ್ಮೆ, ಚಿರತೆ ಮತ್ತು ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಸುಬ್ರಹ್ಮಣ್ಯ ಭಾಗದಲ್ಲಿ ಬರುವ ಕುಮಾರ ಪರ್ವತದ ತಪ್ಪಲಿನ ಬಾಳುಗೋಡು ಮೀಸಲು ಅರಣ್ಯಭಾಗಕ್ಕೆ ಸೇರುವ ಕೋಟಿ ಝರಿ ಎಂಬ ಪ್ರದೇಶದ ಕಾಡಿನಲ್ಲಿ ಆನೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಕಾಡಾನೆಯ ಎಡ ಮುಂಗಾಲಿಗೆ ಬಲವಾದ ಪೆಟ್ಟುಬಿದ್ದಿರುವಂತೆ ತೋರುತ್ತಿದ್ದು ಆನೆ ನೋವು ತಾಳಲಾರದೆ ಮತ್ತು ಮುಂಗಾಲನ್ನು ಸರೀಯಾಗಿ ಊರಲೂ ಆಗದೇ ಯಾತನೆ ಅನುವಿಸುತ್ತಿದೆ.
ಪ್ರಾರಂಭದಲ್ಲಿ ಬುಧವಾರದಂದು ಈ ಕಾಡಾನೆಯು ಸ್ಥಳೀಯರನ್ನು ಅಟ್ಟಿಸಿಕೊಂಡು ಬಂದಿತ್ತು. ಬಳಿಕ ಕೆಲವರು ಆನೆ ಎಲ್ಲಿಗೆ ಹೋಗಿರಬಹುದು ಎಂದು ಕಾಡಿನೊಳಗೆ ಹುಡುಕುತ್ತಿದ್ದ ಸಂದರ್ಭದಲ್ಲಿ ಕಮರಿಯ ಹತ್ತಿರ ಆನೆ ಗಾಯಗೊಂಡು ನರಳಾಡುತ್ತಿರುವುದನ್ನು ಕಂಡಿದ್ದಾರೆ.
ಬಾಳುಗೋಡು, ಪದಕ, ಮಿತ್ತಡ್ಕ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಯೊಂದು ತಿರುಗಾಡುತ್ತಿದ್ದ ವಿಚಾರವನ್ನು ಈ ಭಾಗದ ಗ್ರಾಮಸ್ಥರು ತಿಳಿಸಿದ್ದು ಅದೇ ಆನೆ ಇದಾಗಿರಬಹುದೆಂಬ ಶಂಕೆಯೂ ಇದೀಗ ವ್ಯಕ್ತವಾಗಿದೆ.
ಗ್ರಾಮಸ್ಥರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಆನೆ ಇರುವ ಸ್ಥಳಕ್ಕೆ ಆಗಮಿಸಿ ಇದೀಗ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗುರುವಾರದಂದು ನಾಗರಹೊಳೆಯಿಂದ ತಜ್ಞ ವೈದ್ಯರು ಆಗಮಿಸಿ ಗಾಯಗೊಂಡಿರುವ ಈ ಕಾಡಾನೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ರೇಂಜ್ ಫಾರೆಸ್ಟ್ ಆಫೀಸರ್ ತ್ಯಾಗರಾಜ್ ಅವರು ಮಾಹಿತಿ ನೀಡಿದ್ದಾರೆ.