Advertisement
ನ. 15ರ ಬುಧವಾರ ಮಧ್ಯಾಹ್ನ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲಾಗಿತ್ತು. ಆನೆ ಸುಮಾರು 8 ಕಿಲೋ ಮೀಟರ್ ನಷ್ಟು ದೂರ ಸಾಗಿ ಸಾರಗೋಡು ಸಮೀಪ ಅರಣ್ಯದಲ್ಲಿ ಬಿದ್ದಿತ್ತು ಎನ್ನಲಾಗಿದೆ.
Related Articles
Advertisement
ಪ್ರಾಣಹಾನಿ ಉಂಟುಮಾಡುತ್ತಿದ್ದ ಒಂಟಿಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದು ಕಾಡಾನೆಯನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಆನೆಯೂ ಸಹ ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಉಪಟಳ ನೀಡುತ್ತಿತ್ತು ಎನ್ನಲಾಗಿದೆ.
ಪ್ರಾಣಹಾನಿ ಮಾಡಿದ ಆನೆಯಲ್ಲ: ಸ್ಥಳೀಯರ ಆರೋಪ
ಈಗ ಸೆರೆಯಾಗಿರುವ ಆನೆ ಜನರನ್ನು ಸಾಯಿಸಿರುವ ಆನೆಯಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮೊನ್ನೆ ಆಲ್ದೂರು ಸಮೀಪ ಮಹಿಳೆಯನ್ನು ಸಾಯಿಸಿದ್ದ ಆನೆಯ ಬೆನ್ನಿನ ಭಾಗದಲ್ಲಿ ದಪ್ಪದ ಗಂಟು ಇತ್ತು. ಅದರ ದಂತಗಳು ಚಿಕ್ಕದಾಗಿದ್ದವು, ಈಗ ಹಿಡಿದಿರುವ ಆನೆಯ ದಂತಗಳು ತುಂಬಾ ಉದ್ದವಾಗಿವೆ. ಹಾಗಾಗಿ ಈಗ ಹಿಡಿದಿರುವುದು ಮನುಷ್ಯರನ್ನು ಕೊಂದಿರುವ ಒಂಟಿಸಲಗವಲ್ಲ ಎಂದು ಹೇಳುತ್ತಿದ್ದಾರೆ.
ಕಾರ್ಯಾಚರಣೆ ಮುಂದುವರಿಯುತ್ತದೆ ; ಅರಣ್ಯ ಇಲಾಖೆ ಸ್ಪಷ್ಟನೆ
ಒಂಟಿ ಸಲಗವನ್ನು ಸೆರೆ ಹಿಡಿಯಲು ಒಟ್ಟು 9 ಸಾಕಾನೆಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದವು. ಸತತ ಐದು ದಿನಗಳಿಂದ ಕಾಡಾನೆ ಸೆರೆಗೆ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಮನುಷ್ಯರನ್ನು ಸಾಯಿಸಿದ್ದ ಒಂಟಿಸಲಗದ ಸುಳಿವು ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ರೈತರ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿಸಲಗವನ್ನು ಸೆರೆ ಹಿಡಿಯಲಾಗಿದೆ. ಒಂದು ದಿನದ ವಿಶ್ರಾಂತಿ ನಂತರ ಮತ್ತಾವರ ಭಾಗದಲ್ಲಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟುವ ಮತ್ತು ಮನುಷ್ಯರ ಸಾವಿಗೆ ಕಾರಣವಾಗಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂಟಿಸಲಗದ ಸುಳಿವು ಸಿಕ್ಕರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.