ಸುಳ್ಯ: ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಯ್ಯಪ್ಪ ವ್ರತಧಾರಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕಲ್ಮಕಾರಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕಲ್ಮಕಾರಿನ ರಾಘವ ಅವರ ಪುತ್ರ, ಹರಿಹರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಚರಿತ್(28) ಗಾಯಗೊಂಡವರು. ಅವರು ಬೆಳಗ್ಗೆ 6.30ರ ವೇಳೆಗೆ ಕಲ್ಮಕಾರಿನ ಶೆಟ್ಟಿಕಟ್ಟ ಎಂಬಲ್ಲಿನ ಮಂದಿರದ ಸಮೀಪದ ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಹಿಂದಿನಿಂದ ಬಂದ ಕಾಡಾನೆ ದಾಳಿ ನಡೆಸಿದೆ. ಚರಿತ್ ಅವರನ್ನು ಆನೆ ಸೊಂಡಿಲಿನಿಂದ ಎತ್ತಿ ನೀರಿಗೆ ಎಸೆದಿದ್ದು, ಬೆನ್ನು ಹಾಗೂ ತಲೆಗೆ ತೀವ್ರ ಗಾಯವಾಗಿದೆ.
ಘಟನೆಯನ್ನು ಕಂಡ ಅಲ್ಲೇ ಸಮೀಪದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯೋರ್ವರು ಇತರರಿಗೆ ತಿಳಿಸಿದ್ದು, ಸ್ಥಳೀಯರು ಆಗಮಿಸಿ ಚರಿತ್‌ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರಿನ ಆಸ್ಪತ್ರೆಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಮತ್ತಿತರ ಅಧಿಕಾರಿಗಳು ಭೇಟಿ ನೀಡಿ, ಗಾಯಾಳುವಿನ ಆರೋಗ್ಯ ವಿಚಾ ರಿಸಿದ್ದಾರೆ. ಘಟನ ಸ್ಥಳಕ್ಕೆ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಭೇಟಿ ನೀಡಿ ಪರಿಶೀಲಿಸಿದರು.
ಕಲ್ಮಕಾರಿನಲ್ಲಿ ಮಂಗಳವಾರ ಒಂಟಿ ಕಾಡಾನೆ ರಸ್ತೆಯಲ್ಲಿ ಓಡಾಡಿದ ವೀಡಿಯೋ ಸೆರೆಯಾಗಿದ್ದು, ಇದೇ ಆನೆ ಚರಿತ್ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆ ಬಳಿಕ ಆ ಆನೆ ಅರಣ್ಯದತ್ತ ತೆರಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ಭಾಗದಲ್ಲಿ ರಾತ್ರಿ ಹಾಗೂ ಬೆಳಗ್ಗೆ ಹೊತ್ತಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ಹೆಚ್ಚಿನ ಸಿಬಂದಿಯನ್ನು ನಿಯೋಜಿಸಿ ಆನೆ ಮೇಲೆ ನಿಗಾ ಇರಿಸಲಾಗಿದೆ ಎಂದು ಅರಣ್ಯಾಧಿಕಾರಿ ವಿಮಲ್ ಬಾಬು ತಿಳಿಸಿದ್ದಾರೆ.
ಮಾಡ್ನೂರು: ಕಾಡಾನೆ ಹಾವಳಿ ತೀವ್ರ
ಪುತ್ತೂರು:
ಮಾಡ್ನೂರು ಪರಿಸರದಲ್ಲಿ ಕೆಲವು ದಿನಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಕೃಷಿ ತೋಟಗಳಿಗೆ ಹಾನಿ ಮಾಡು ತ್ತಿರುವ ಘಟನೆ ಹೆಚ್ಚಾಗುತ್ತಿದೆ. ಸೋಮವಾರ ರಾತ್ರಿ ಮಾಟ್ನೂರು ಗ್ರಾಮದ ಕೃಷ್ಣಪ್ರಸಾದ್ ಅವರ ತೋಟಕ್ಕೆ ಹಾನಿ ಮಾಡಿದೆ.
ಇದನ್ನೂ ಓದಿ: Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್