ಸಕಲೇಶಪುರ: ರಸ್ತೆ ದಾಟುತ್ತಿದ್ದ ಕಾಡಾನೆಯೊಂದು ಜನರ ಗದ್ದಲದ ಹಿನ್ನೆಲೆಯಲ್ಲಿ ಜನರತ್ತ ನುಗ್ಗಿದ್ದರಿಂದ ಕಾಡಾನೆ ನೋಡುತ್ತಿದ್ದವರು ಭಯದಿಂದ ಓಡಿ ಹೋದ ಘಟನೆ ತಾಲೂಕಿನ
ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಒಂಟಿ ಸಲಗವೊಂದು ರಸ್ತೆ ದಾಟುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಯನ್ನು ನೋಡುತ್ತ ರಸ್ತೆಯ ಮಧ್ಯದಲ್ಲೆ ನಿಂತಿದ್ದರು. ಜನರ ಕೂಗಾಟದಿಂದ ಸಿಟ್ಟಿಗೆದ್ದು ಜನರತ್ತ ಘೀಳಿಟ್ಟು ನುಗ್ಗಿದ ಸಲಗದ ರಕ್ಷಣೆ ಪಡೆಯಲು ಜನರು ಸ್ಥಳದಿಂದ ತುಸು ದೂರ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ವಾಯಿತು.
ಜನರು ದೂರ ಹೋದ ನಂತರ ಕಾಡಾನೆ ರಸ್ತೆ ದಾಟಿ ತೋಟವೊಂದಕ್ಕೆ ನುಗ್ಗಿತು. ಮಲೆನಾಡು ಭಾಗದಲ್ಲಿ ಮೀತಿಮೀರಿದ ಕಾಡಾನೆ ಗಳ ಉಪಟಳ ಮಿತಿ ಮೀರಿದ್ದು, ಕಾಡಾನೆಗಳ ಹಾವಳಿಯಿಂದ ಹಲವು ಸಾವು ನೋವುಗಳು ಸಂಭವಿಸಿದೆ. ಹಲಸುಲಿಗೆ ಸುತ್ತಮುತ್ತ ಹಾಡುಹಗಲೆ ಕಾಡಾನೆಗಳು ತಿರುಗಾಡುತ್ತಿದ್ದು, ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕೆಲಸ ಮಾಡಿದ್ರೂ ವೇತನ ನೀಡಿಲ್ಲ : ಪುರಸಭೆ ಮುಂದೆ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ