ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಮೂರ್ಕೆರೆ ದಾರಿ ನೀರಿನ ಹೊಂಡದ ಸಮೀಪ ಕಾಡಾನೆಯೊಂದು ಅವಳಿ ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಆನೆ ಮರಿಗಳು ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆನೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಇದೇ ಮೊದಲ ಬಾರಿಗೆ ಬಂಡೀಪುರದಲ್ಲಿ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದೆ ಎನ್ನಲಾಗಿದೆ. ಇದು ಬಂಡೀಪುರ ವ್ಯಾಪ್ತಿಯಲ್ಲಿ ಅಪರೂಪದ ಘಟನೆಯಾಗಿದೆ.
ಸಾಮಾನ್ಯವಾಗಿ ಆನೆಗಳು 22 ರಿಂದ 23 ತಿಂಗಳ ಕಾಲದಲ್ಲಿ ಜನ್ಮ ನೀಡಲಿದ್ದು, ಆನೆ ಮರಿಗಳು 90 ಕೆಜಿಯಿಂದ 100 ಕೆಜಿ ತನಕ ಇದ್ದರೆ ಆರೋಗ್ಯವಾಗಿವೆ ಎಂದರ್ಥ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾಹತಿ ನೀಡಿದರು. ಇನ್ನು ಇದು ಆನೆ ಸಂತತಿ ಹೆಚ್ಚಳಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಸಂತೋಷ್ ಆತ್ಮಹತ್ಯೆ ಮಾಡಿದ್ದ ಉಡುಪಿಯ ಲಾಡ್ಜ್ ನಲ್ಲಿ ಮತ್ತೋರ್ವ ಆತ್ಮಹತ್ಯೆ!
ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಿಂದೆಂದು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದ ಉದಾಹರಣೆ ಇಲ್ಲ. ಆದರೆ ಇದೀಗ ಬಂಡೀಪುರ ವಲಯದ ಮೂರ್ಕೆರೆ ದಾರಿ ನೀರಿನ ಹೊಂಡದ ಸಮೀಪ ಕಾಡಾನೆಯೊಂದು ಭಾನುವಾರ ಅವಳಿ ಮರಿಗೆ ಜನ್ಮ ನೀಡಿರುವುದು ಅಪರೂಪದ ಘಟನೆಯಾಗಿದ್ದು, ತಾಯಿ ಮತ್ತು ಆನೆ ಮರಿಗಳು ಆರೋಗ್ಯವಾಗಿದೆ.
– ನವೀನ್, ಎಸಿಎಫ್, ಬಂಡೀಪುರ.