Advertisement

ಕಾಡಾನೆಗಳ ದಾಳಿಯಿಂದ ರೈತರಿಗೆ ಮುಕ್ತಿ ಎಂದು?

04:40 PM Jun 05, 2023 | Team Udayavani |

ಬಂಗಾರಪೇಟೆ: ತಾಲೂಕಿನ ಗಡಿಭಾಗದ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಯ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳ ಮಿತಿಮೀರಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶ ಮಾಡಿ ಅಪಾರ ನಷ್ಟ ಉಂಟಾಗುತ್ತಿದ್ದರೂ ಸಹ ಅರಣ್ಯ ಇಲಾಖೆಯು ಕಾಡಾನೆಗಳ ಉಪಟಳದಿಂದ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫ‌ಲವಾಗಿದೆ.

Advertisement

ದಾಳಿಯಿಂದ ರೈತರು ಹೈರಾಣು: ಹಲವು ವರ್ಷಗಳಿಂದ ಕಾಡಾನೆಗಳ ಹಿಂಡು ತಮಿಳುನಾಡಿನಿಂದ ನೀರು ಹಾಗೂ ಆಹಾರಕ್ಕಾಗಿ ರಾಜ್ಯದ ಗಡಿಯಾಗಿರುವ ಕಾಮಸಮುದ್ರ ಹೋಬಳಿಯ ಗ್ರಾಮಗಳಾದ ಬಲಮಂದೆ, ದೊಡ್ಡಪನ್ನಾಂಡಹಳ್ಳಿ, ಭೀಮಗಾನಹಳ್ಳಿ, ತೊಪ್ಪನಹಳ್ಳಿ, ಕದರಿನತ್ತ ಅರಣ್ಯ ಪ್ರದೇಶದ ಮೂಲಕ ಪ್ರವೇಶ ಮಾಡಿ ಬಳಿಕ ಕಾಡಿನಲ್ಲಿ ನೀರು, ಆಹಾರ ಸಿಗದ ಹಿನ್ನೆಲೆಯಲ್ಲಿ ಗ್ರಾಮಗಳತ್ತ ಲಗ್ಗೆ ಹಾಕಿ ಬರದಲ್ಲಿ ಬೆವರು ಹನಿ ಸುರಿಸಿ ರೈತರು ಬೆಳೆದಿರುವ ವಾಣಿಜ್ಯ ಬೆಳೆಗಳನ್ನು ನಾಶ ಮಾಡುತ್ತಿದೆ. ಇದರಿಂದ ಮೊದಲೇ ಬೆಂಡಾಗಿರುವ ರೈತರು ಕಾಡಾನೆಗಳ ಹಾವಳಿಯಿಂದ ಮತ್ತಷ್ಟು ಹೈರಾಣಾಗುವಂತಾಗಿದೆ.

ಕಾಡಾನೆಗಳೆಂದರೆ ಗ್ರಾಮಸ್ಥರು ಮೊದಲು ಹೆದರುವಂತಾಗಿತ್ತು, ಕಾಡಾನೆಗಳು ಗ್ರಾಮದ ಸುತ್ತಮುತ್ತ ಹೊಳಗಳಿಗೆ ಬಂದರೆ ಮನೆಯಿಂದ ಹೊರಗಡೆ ಬರಲೂ ಹೆದರುವಂತಾಗಿತ್ತು. ಆದರೆ ಈಗ ಮಾಮೂಲಾಗಿದೆ. ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕಾಡಾನೆಗಳನ್ನು ಹಿಮ್ಮಟ್ಟಿಸಲು ರೈತರು ಮುಂದಾಗಿ ಹತ್ತಾರು ಮಂದಿ ಜೀವ ಕಳೆದುಕೊಂಡರೂ , ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ವರ್ಷವಿಡೀ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ಸುತ್ತಮುತ್ತಲಿನ ಗಡಿಭಾಗದಲ್ಲಿ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ನಾಶಗೊಳಿಸುತ್ತಿದೆ. ಕಾಡಾನೆಗಳನ್ನು ಓಡಿಸಲು ಹೋದರೆ ಎಲ್ಲಿ ಪ್ರಾಣ ಹಾನಿ ಉಂಟುಮಾಡುವುದೋ ಎಂಬ ಭಯ ಒಂದುಕಡೆ ಯಾದರೆ, ಮತ್ತೂಂದೆಡೆ ಹಗಲು ರಾತ್ರಿ ಬೆವರು ಸುರಿಸಿದ ಬೆಳೆ ಕಣ್ಣಮುಂದೆಯೇ ಹಾಳಾಗುವುದನ್ನು ನೋಡಲಾಗದೆ ಪರದಾಡುವರು. ಅರಣ್ಯ ಇಲಾಖೆ ಯಲ್ಲಿನ ಸಿಬ್ಬಂದಿ ಕೊರತೆಯಿಂದ ಅವರು ಕಾಡಾನೆಗಳನ್ನು ಹಿಮ್ಮಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿ ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ. ಪದೇ ಪದೆ ಕಾಡಾನೆಗಳು ಬಂದು ಹೋಗುವುದರಿಂದ ಕಾಮಸಮುದ್ರ ಹೋಬಳಿಯ ಪ್ರದೇಶವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಬೇಕೆಂದು ರೈತರು ಸರ್ಕಾರಕ್ಕೆ ಹತ್ತು ವರ್ಷಗಳ ಹಿಂದೆಯೇ ಪ್ರಸ್ತಾಪವೆ ಸಲ್ಲಿಸಿದರು. ವನ್ಯಜೀವಿ ಧಾಮ ಮಾಡುವುದರಿಂದ ಕಾಡಿನಿಂದ ಗ್ರಾಮಗಳ ಕಡೆಗೆ ಬಾರದಂತೆ ಬೇಲಿ ಅಳವಡಿಸಲಾಗುತ್ತದೆ, ಅವುಗಳಿಗೆ ಆಹಾರ ಸಸ್ಯ, ಗಿಡಗಳನ್ನು ಬೆಳೆಸಿ ನೀರು ಪೂರೈಕೆ ಮಾಡುವುದು ಸೇರಿದಂತೆ ಅದಕ್ಕಾಗಿಯೇ ಅರಣ್ಯ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡುವರು. ಈ ಕಡತ ಸಹ ಹತ್ತು ವರ್ಷಗಳಿಂದ ಧೂಳು ತಿನ್ನುತ್ತಿದೆ.

ಪ್ರತಿ ವರ್ಷವೂ ಬೆಳೆ ನಷ್ಟ: ಸರ್ಕಾರ ಹಾಗೂ ಅರಣ್ಯ ಇಲಾಖೆಯು ಕಾರಿಡಾರ್‌ ಯೋಜನೆಗೆ ಅನುದಾನ ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆಯೇ ವಿನಃ ಇದುವರೆಗೂ ಕಾರ್ಯಗತವಾಗಿಲ್ಲ, ಇನ್ನೂ ಎಷ್ಟು ಪ್ರಾಣ ಹಾನಿ, ಬೆಳೆ ಹಾನಿ ಆದ ಮೇಲೆ ಸರ್ಕಾರ ಈ ಕಡೆ ಕಣ್ಣಾಕುವುದೋ, ಬರೀ ಪರಿಹಾರ ನೀಡಿದರೆ ಸಾಕೇ, ಶಾಶ್ವತವಾದ ಪರಿಹಾರ ಬೇಡವೇ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. ರೈತಸಂಘಗಳು ಹಲವಾರು ಬಾರಿ ಹೋರಾಟ ಮಾಡಿ ದರೂ ಸಹ ಅರಣ್ಯ ಇಲಾಖೆಯುಎಚ್ಚೆತ್ತುಕೊಳ್ಳಲಿಲ್ಲ. ರೈತರ ಬಗ್ಗೆ ಅರಣ್ಯ ಇಲಾಖೆ ಕಾಳಜಿ ಇಲ್ಲದ ಕಾರಣ ಬೆಳೆನಷ್ಟ ಸಹಜವಾಗಿ ವರ್ಷವೂ ಉಂಟಾಗುತ್ತಿದೆ. ಅರಣ್ಯ ಇಲಾಖೆಯು ರಾಜ್ಯದ ಗಡಿಭಾಗದಲ್ಲಿ ಸ್ವಲ್ಪಮಟ್ಟಿಗೆ ಸೋಲಾರ್‌ ಪೆನ್ಸಿಂಗ್‌ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ತಾಲೂಕಿನ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಗಳ ಗಡಿಭಾಗದಲ್ಲಿ ಸಂಪೂರ್ಣವಾಗಿ ಸೋಲಾರ್‌ ಪೆನ್ಸಿಂಗ್‌ ಹಾಕದೇ ಇರುವುದರಿಂದ ಕಾಡಾನೆಗಳು ಪದೇ ಪದೇ ಪ್ರವೇಶವಾಗುತ್ತಿರುವುದರಿಂದ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ.

Advertisement

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ: ತಾಲೂಕಿನ ಗಡಿಭಾಗದಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿರುವ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ನಂಬು ವಂತಿಲ್ಲ. ಕೆಲವು ಅಧಿಕಾರಿಗಳು ತೊಪ್ಪನಹಳ್ಳಿ ಸರ್ಕಾರಿ ಅರಣ್ಯ ಅತಿಥಿಗೃಹದಲ್ಲಿ ಕಾಲ ಕಳೆಯುವುದರಲ್ಲಿಯೇ ಮಗ್ನರಾಗಿದ್ದಾರೆ. ಇನ್ನೂ ಬೂದಿಕೋಟೆ ಹೋಬಳಿಯ ಕೆಲವು ಅರಣ್ಯ ಪ್ರದೇಶವು ಮಾಲೂರು ತಾಲೂಕಿಗೆ ಸೇರಿರುವುದರಿಂದ ಇಲ್ಲಿನ ಅಧಿಕಾರಿಗಳು ಮೊಬೈಲ್‌ ನಂಬರ್‌ ನೀಡಿಲ್ಲ. ಅದರೂ ನಂಬರ್‌ ಪಡೆದ ಪೋನ್‌ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂಬ ಗಂಭೀರ ಆರೋಪವು ಇದೆ.

ತಾಲೂಕಿನ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಗಳಲ್ಲಿನ ಗಡಿಭಾಗದ ಗ್ರಾಮಗಳಿಗೆ ಸುನಾಮಿಯಂತೆ ಕಾಡಾನೆಗಳು ದಾಳಿ ಮಾಡುತ್ತಿರು ವುದರಿಂದ ಈ ಭಾಗದ ರೈತರು ಬದುಕಲು ಕಷ್ಟವಾಗಿದೆ.

ಕೃಷಿ ಚಟುವಟಿಕೆಗಳನ್ನು ಯಾರೂ ಮಾಡುವಾಗಿಲ್ಲ. ಮಾಡಿದರೂ ಕಾಡಾನೆಗಳಿಗೆ ಅಹುತಿಯಾಗುತ್ತಿದೆ. ಸರ್ಕಾರವು ನೀಡುವ ಪರಿಹಾರ ಸಾಕಾಗುವುದಿಲ್ಲ. ಕಾಡಾನೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಸರ್ಕಾರವೇ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. – ಪಿಚ್ಚಹಳ್ಳಿ ಗೋವಿಂದರಾಜುಲು, ಡಿಸಿಸಿ ಬ್ಯಾಂಕ್‌ ನಿರ್ದೇಶಕರು, ಬಂಗಾರಪೇಟೆ

– ಎಂ.ಸಿ.ಮಂಜುನಾಥ್‌

 

Advertisement

Udayavani is now on Telegram. Click here to join our channel and stay updated with the latest news.

Next