Advertisement
ಮುಖ್ಯವಾಗಿ ಬೈಂದೂರು ತಾಲೂಕು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭತ್ತದ ಬೇಸಾಯ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಮುಂಗಾರು ಬೆಳೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಹವಾಮಾನ ವೈಪರೀತ್ಯ ಒಂದೆಡೆಯಾದರೆ ಈ ಸಮಯದಲ್ಲಿ ಗದ್ದೆಯಲ್ಲಿರುವ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸಪಡಬೇಕಾಗಿದೆ.
ಸಾಮಾನ್ಯವಾಗಿ ರಾತ್ರಿ ವೇಳೆ ಹಳ್ಳಿಗಳಲ್ಲಿ ರೈತರು ಅಟ್ಟಣಿಗೆ (ಮನೆ ಹಳ್ಳಿ) ನಿರ್ಮಿಸಿಕೊಂಡು ರಾತ್ರಿಯಿಡೀ ಗದ್ದೆ ಕಾಯುತ್ತಾರೆ. ಕಾಡು ಹಂದಿಯ ಕಾಟ ಈ ವರ್ಷ ಅತ್ಯಧಿಕವಾಗಿದೆ. ನವಿಲು, ಕಡವೆ, ಕಾಡುಕೋಣ, ಹಂದಿ ಕಾಟದಿಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಪೈರುಗಳು ಬೆಳೆದಿರುವ ಕಾರಣ ಗದ್ದೆಯಲ್ಲಿ ಮೊಳಕೆ ಬರುವ ಪರಿಸ್ಥಿತಿ ಇದೆ ಎನ್ನುವುದು ಕೃಷಿಕ ನಾರಾಯಣ ಮರಾಠಿಯವರ ಅಭಿಪ್ರಾಯವಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು
ಕಳೆದ ಕೆಲವು ವರ್ಷಗಳಿಂದ ಪ್ರತಿ ಸಾರಿಯೂ ಭತ್ತದ ಬೆಳೆಗೆ ಕಾಡು ಪ್ರಾಣಿಗಳ ಕಾಟ ಅಧಿಕವಾಗಿದೆ. ಕಾಡು ನಾಶದ ಪರಿಣಾಮ ಒಂದೆಡೆಯಾದರೆ ಮಂಗಗಳು ಕಾಡು ಬಿಟ್ಟು ಊರು ಸೇರಿಕೊಂಡಿವೆ.ಮಾತ್ರವಲ್ಲದೆ ಮನೆಯ ಪಾತ್ರೆಯಲ್ಲಿ ರುವ ಆಹಾರ ಎತ್ತಿಕೊಂಡು ಹೋಗುತ್ತವೆ. ಭತ್ತದ ಗದ್ದೆಗೂ ಕೂಡ ಇವುಗಳ ಕಾಟ ಅಧಿಕವಾಗಿದೆ. ರಾತ್ರಿ ವೇಳೆ ಕಾಡು ಹಂದಿ ಹಗಲು ವೇಳೆ ಮಂಗ,ನವಿಲು ಕಾಯುವುದು ರೈತರಿಗೆ ಸಮಸ್ಯೆಯಾಗತೊಡಗಿದೆ.ಕೂಲಿಯಾಳುಗಳ ಕೊರತೆ ಮತ್ತು ಹಿರಿಯರು ಮಾತ್ರ ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಬಂದಿರುವುದರ ನಡುವೆ ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ ಈ ಬಾರಿಯೂ ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ.
Related Articles
ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿರುವುದು ನಿಜ. ಆದರೆ ಅತಿಯಾದ ಕಾಡು ನಾಶ ಕೂಡ ಇದಕ್ಕೆ ಮಹತ್ವದ ಕಾರಣವಾಗಿದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶವಾದಾಗ ಅದರ ವಿವರದ ಅರ್ಜಿಯನ್ನು ಅರಣ್ಯ ಇಲಾಖೆಗೆ ನೀಡಿದರೆ ಇಲಾಖೆಯಿಂದ ಬೆಳೆ ನಾಶದ ಪರಿಹಾರ ಕೊಡಲಾಗುತ್ತದೆ. ರೈತರು ಇದರ ಉಪಯೋಗ ಪಡೆಯಬಹುದಾಗಿದೆ.
– ಕಿರಣ್ ಬಾಬು, ವಲಯಾರಣ್ಯಧಿಕಾರಿ ಬೈಂದೂರು
Advertisement
ಅರುಣ ಕುಮಾರ್, ಶಿರೂರು