ಸೋಮು ಹೊಯ್ಸಳ ನಿರ್ದೇಶನದಲ್ಲಿ ಮೂಡಿಬಂದಿರುವ “ವಿಕಿಪೀಡಿಯ’ ಸಿನಿಮಾ ಇದೇ ಆ. 26ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಮೋಡಕ್ಕೆ ಮೋಡ…’ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿದೆ.
ಪ್ರಮೋದ್ ಮರವಂತೆ ಸಾಹಿತ್ಯದ ಹಾಡಿಗೆ ರಾಕ್ ಅಂಡ್ ನಿಲ್ ಸೊಗಸಾದ ಮ್ಯೂಸಿಕ್ ನೀಡಿದ್ದು, ರಘು ದೀಕ್ಷಿತ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ.
ಹಲವಾರು ಧಾರಾವಾಹಿಗಳಲ್ಲಿ ಮಿಂಚಿರುವ ಯಶವಂತ್ ಈ ಸಿನಿಮಾದ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಇವರಿಗೆ ಆಶಿಕಾ ಸೋಮಶೇಖರ್ ಜೋಡಿಯಾಗಿ ನಟಿಸಿದ್ದಾರೆ. “ವಿಕಿಪೀಡಿಯ’ ಚಿತ್ರಕ್ಕೆ ಚಿದಾನಂದ್ ಎಚ್. ಕೆ ಛಾಯಾಗ್ರಹಣ, ರಾಕೇಶ್ ಮತ್ತು ನೀಲಿಮ ಸಂಗೀತ, ರವಿಚಂದ್ರನ್ ಸಿ. ಸಂಕಲನವಿದೆ. “ರಫ್ ಕಟ್ ಪ್ರೊಡಕ್ಷನ್’ ಅಡಿ ಚಿತ್ರ ನಿರ್ಮಾಣವಾಗಿದೆ.
ಇನ್ನು “ವಿಕಿಪೀಡಿಯ’ ಸಿನಿಮಾದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಡ್ರಾಮಾ, ಎಮೋಷನಲ್ ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಈ ಸಿನಿಮಾದಲ್ಲಿದೆ. ಬದುಕಿಗೆ ಹತ್ತಿರವಾದ, ಎಲ್ಲರ ಮನಸಿಗೆ ನಾಟುವಂತಹ ಕಥೆಯೊಂದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಂತೆಯೇ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತದೆ.