ಮಂಗಳೂರು: ಪತ್ನಿಯನ್ನು ಹತ್ಯೆಗೈದ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಮೂಲತಃ ಹಾಸನ ಅರಕಲಗೂಡಿನವನಾಗಿದ್ದು ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದವನು.
ಈತ ಪತ್ನಿ, ಪತಿಯ ತಾಯಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದ. ಸಾಂಸಾರಿಕ ವಿಚಾರದಲ್ಲಿ ಪ್ರತಿದಿನ ಗಲಾಟೆ ಮಾಡಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಜೀವಬೆದರಿಕೆ ಹಾಕುತ್ತಿದ್ದ.
2020ರ ಜು. 1ರಂದು ಸಂಜೆ 5.30ಕ್ಕೆ ಸಾಮಾನು ತರುವುದಕ್ಕೆಂದು ಹೇಳಿ ಪತ್ನಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ರಾತ್ರಿ 7ರಿಂದ 7.20ರ ನಡುವಿನ ಅವಧಿಯಲ್ಲಿ ಅಂತೋನಿಕಟ್ಟೆ ಎಂಬಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ದೂಡಿ ಹಾಕಿ ಹತ್ಯೆ ಮಾಡಿದ್ದ. ಅಲ್ಲದೆ ಪತ್ನಿಯ ತಾಯಿಗೆ ಜೀವಬೆದರಿಕೆ ಹಾಕಿದ್ದ. ಈ ಬಗ್ಗೆ ಕಾವೂರು ಠಾಣೆಯ ಇನ್‌ಸ್ಪೆಕ್ಟರ್ ರಾಘವ ಎಸ್. ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ವಿಚಾರಣೆ ನಡೆಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ ಎ. 8ರಂದು ಭಾರತೀಯ ದಂಡ ಸಂಹಿತೆಯ ಕಲಂ 302ರ ಅಪರಾಧಕ್ಕೆ ಕಠಿನ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ.ದಂಡ, ಭಾರತೀಯ ದಂಡ ಸಂಹಿತೆ ಕಲಂ 498 (ಎ)ರ ಅಪರಾಧಕ್ಕೆ 3 ವರ್ಷ ಕಠಿನ ಶಿಕ್ಷೆ ಮತ್ತು 25,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 506ರ ಅಪರಾಧಕ್ಕೆ 2 ವರ್ಷ ಕಠಿನ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದವರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ಮತ್ತು ಬಿ. ಶೇಖರ ಶೆಟ್ಟಿ ವಿಚಾರಣೆ ನಡೆಸಿದ್ದಾರೆ. ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ ವಾದ ಮಂಡಿಸಿದ್ದರು.