ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಮೇಘನಾ ರಾಜ್, ಮದುವೆ ಬಳಿಕ ಫ್ಯಾಮಿಲಿ ಲೈಫ್ ಎಂಜಾಯ್ ಮಾಡುವುದರ ಜೊತೆಗೆ ಇದೀಗ ಚಿತ್ರವೊಂದಕ್ಕೆ ಹಾಡನ್ನೂ ಹಾಡಿದ್ದಾರೆ. ಅದರಲ್ಲೂ ಅವರ ಪತಿ ನಟ ಚಿರಂಜೀವಿ ಸರ್ಜಾ ಅವರ ಅಭಿನಯದ “ಸಿಂಗ’ ಚಿತ್ರಕ್ಕೆ ಎಂಬುದು ವಿಶೇಷ.
ಹೌದು, ಮೇಘನಾ ರಾಜ್ “ಸಿಂಗ’ ಚಿತ್ರದಲ್ಲಿ ಬರುವ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾಗಿದ್ದಾರೆ. ಇವರೊಂದಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್ ನೀಡಿದ್ದಾರೆ. “ವಾಟ್ ಎ ಬ್ಯೂಟಿಫುಲ್ ಹುಡ್ಗಿ… ವಾಟ್ ಎ ಸೂಪರ್ ಡೂಪರ್ ಹೈದಾ ಶಿವಾ ಶಿವಾ…’ ಎಂಬ ಸಾಲುಗಳಿಂದ ಶುರುವಾಗುವ ಮಂಡ್ಯ ಶೈಲಿಯ ಪಕ್ಕಾ ಮಾಸ್ ಆಗಿ ಹಾಡು ಮೂಡಿಬಂದಿದೆ.
ತಮ್ಮ ಹಾಡಿನ ಕುರಿತು ಮಾತನಾಡುವ ಮೇಘನಾ, “ಹಾಡಿಗೂ ಮುನ್ನ ಮೆಲೋಡಿ, ವೆಸ್ಟರ್ನ್ ಸೇರಿದಂತೆ ಬೇರೆ ಶೈಲಿಯ ಹಾಡುಗಳನ್ನು ಹಾಡಿದ್ದೆ. ಆದರೆ ಈ ರೀತಿಯ ಹಾಡನ್ನು ಹಾಡಿದ್ದು, ಇದೇ ಮೊದಲು. ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ಹೊಸಥರ ಇದ್ದಿದ್ದರಿಂದ ತುಂಬಾ ಎಂಜಾಯ್ ಮಾಡಿಕೊಂಡು ಹಾಡನ್ನು ಹಾಡಿದ್ದೇನೆ.
ಇದರಲ್ಲಿ ಮ್ಯೂಸಿಕ್ ಬೀಟ್ ಚೆನ್ನಾಗಿದ್ದು, ಟ್ರೆಂಡಿಂಗ್‌ನಲ್ಲಿದೆ’ ಎನ್ನುತ್ತಾರೆ. ಇನ್ನು, ಈ ಚಿತ್ರದ ಹಾಡಿಗೆ ಧರ್ಮವಿಶ್ ಸಂಗೀತ ಸಂಯೋಜನೆಯಿದೆ. ಇತ್ತೀಚೆಗೆ “ಸಿಂಗ’ ಚಿತ್ರದ ಟೀಸರ್ ಮತ್ತು “ಶಾನೆ ಟಾಪ್ ಆಗವ್ಳೆ…’ ಎಂಬ ಮೊದಲ ಹಾಡು ರಿಲೀಸ್ ಆಗಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಚಿತ್ರದಲ್ಲಿ ಚಿರು ಸರ್ಜಾಗೆ ನಾಯಕಿಯಾಗಿ ಅಧಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರವನ್ನು, ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ.