Advertisement

ಸ್ನೇಹಿತರ ಜತೆ ಸೇರಿ ಪತಿ ಹತ್ಯೆ ಮಾಡಿಸಿದ ಪತ್ನಿ.!

09:51 AM May 18, 2021 | Team Udayavani |

ಬೆಂಗಳೂರು: ನಿತ್ಯ ಮದ್ಯ ಸೇವಿಸಿ ಹಲ್ಲೆ ನಡೆಸುತ್ತಿದ್ದ ಪತಿಯನ್ನು ಸ್ನೇಹಿತರ ಜತೆ ಸೇರಿ ಹತ್ಯೆಗೈದ ಪತ್ನಿ ಸೇರಿ ಮೂವರನ್ನು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

Advertisement

ಟಿನ್‌ ಫ್ಯಾಕ್ಟರಿ ಸಮೀಪದ ಶಕ್ತಿನಗರ ನಿವಾಸಿ ಯಶೋಧ (40), ಆಕೆಯ ಸ್ನೇಹಿತರಾದ ವಿಜಿನಾಪುರ ನಿವಾಸಿ ಮುನಿರಾಜು (33), ಕಸ್ತೂರಿನಗರದ ಪ್ರಭು (27) ಬಂಧಿತರು. ಆರೋಪಿಗಳು ಮೇ 15ರಂದು ಲೋಕನಾಥ್‌ (48) ಎಂಬವರನ್ನು ಕೊಲೆಗೈದಿದ್ದರು.

ಗಾರೆ ಕೆಲ ಮಾಡುತ್ತಿದ್ದ ಲೋಕನಾಥ್‌ ಕೆಲ ವರ್ಷಗಳ ಹಿಂದೆ ಯಶೋಧಳನ್ನು ವಿವಾಹವಾಗಿದ್ದ. ಪತ್ನಿ ಮನೆ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಆತ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಮದ್ಯವ್ಯಸನಿಯಾಗಿದ್ದ ಲೋಕನಾಥ್‌ ನಿತ್ಯ ಪತ್ನಿಯನ್ನು ಅವಮಾನಿಸುವುದು, ಹೊಡೆಯುವುದು, ಬೈಯುವುದು ಮತ್ತು ಹಣ ನೀಡುವಂತೆ ಪೀಡಿಸುತ್ತಿದ್ದ.

ಪತಿಯ ಕಿರುಕುಳದಿಂದ ಬೇಸೆತ್ತ ಯಶೋಧ, ತನ್ನ ಸ್ನೇಹಿತ ಮುನಿರಾಜು ಬಳಿ ಪತಿ ಹಿಂಸೆ ಕೊಡುತ್ತಿರುವುದನ್ನು ಹೇಳಿಕೊಂಡು, ಆತನಿಗೆ ಹೊಡೆಯುವಂತೆ ಹೇಳಿದ್ದಳು.ಆಕೆಯ ಮಾತು ಕೇಳಿದ ಮುನಿರಾಜು, ಪತಿಯನ್ನು ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಮಲಗಿಸಿ ಆತ್ಮಹತ್ಯೆ ಎಂದು ಬಿಂಬಿಸಬಹುದು ಎಂದು ಸಲಹೆ ಕೊಟ್ಟಿದ್ದ. ಅದಕ್ಕೆ ‌ ಯಶೋಧ ಕೂಡ ಒಪ್ಪಿದ್ದಳು.

ಇದನ್ನೂ ಓದಿ : ನಾನು ನಿಮ್ಮೊಂದಿಗೆ ಇದ್ದೇನೆ ಎಂಬ ಮಾತಿನಿಂದ ಕೋವಿಡ್ ಗೆದ್ದೆ

Advertisement

ಬಳಿಕ ಮುನಿರಾಜು ತನನ ಸ್ನೇಹಿತ ಪ್ರಭುಜತೆ ಸೇರಿಕೊಂಡು, ಮೇ 15ರಂದು ರಾತ್ರಿ ಲೋಕನಾಥ್‌ನ್ನು ಭೇಟಿಯಾಗಿದ್ದಾನೆ. ಬಳಿಕ ಮುನಿರಾಜು ಮದ್ಯ ಸೇವಿಸೋಣ ಎಂದು ಹೇಳಿ ಬೈಯ್ಯಪ್ಪನಹಳ್ಳಿ ಎ ಪ್ಯಾನಲ್‌ ಮತ್ತು ಚೆನ್ನಸಂದ್ರ ರೈಲು ನಿಲ್ದಾಣದ ಮಧ್ಯೆ ಬರುವ ಕಸ್ತೂರಿ ನಗರದ ಹೊರ ವರ್ತುಲ ರಸ್ತೆ ಮೇಲು ಸೇತುವೆ ಬಳಿ ಕರೆದುಕೊಂಡು ಹೋಗಿದ್ದಾರೆ. ಆತನಿಗೆ ಕಂಠಮಟ್ಟ ಮದ್ಯ ಕುಡಿಸಿದ ಇಬ್ಬರು, ತಾವು ಮದ್ಯ ಸೇವಿಸಿದಂತೆ ನಟಿಸಿದ್ದಾರೆ. ಲೋಕನಾಥ್‌ಗೆ ಮದ್ಯದ ಅಮಲು ಹೆಚ್ಚಾಗುತ್ತಿದ್ದಂತೆ ಹಗ್ಗದಿಂದ ಆತನ ಕುತ್ತಿಗೆ ಬಿಗಿದುಕೊಲೆ ಮಾಡಿದ್ದಾರೆ.

ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಲೋಕನಾಥ್‌ ಮೃತದೇಹವನ್ನುಕಸ್ತೂರಿನಗರದ ರೈಲ್ವೆ ಹಳಿ ಮೇಲೆ ಮಲಗಿಸಿದ್ದರು. ರೈಲು ಶವದ ‌ ಮೇಲೆ ಹರಿದರೆ ಲೋಕನಾಥ್‌ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿದುಕೊಳ್ಳಬಹುದು ಎಂದು ಭಾವಿಸಿದ್ದ ಎಂದು ಪೊಲೀಸರು ಹೇಳಿದರು.

ಗುರುತು ಪತ್ತೆ ಹೇಗೆ ?: ಮೇ 15ರಂದು ತಡರಾತ್ರಿ ಇದೇ ಮಾರ್ಗವಾಗಿ ಬಂದ ರೈಲಿನ ಪೈಲೆಟ್‌ (ಚಾಲಕ) ಮೃತ ದೇಹಬಿದ್ದಿರುವುದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಗುರುತು ಪತ್ತೆಯಾಗಿರಲಿಲ್ಲ. ಮೃತದೇಹ ಸಿಕ್ಕಿದ ಆಸು-ಪಾಸಿನಲ್ಲಿದ್ದ ಹಲವು ಜನರನ್ನು ವಿಚಾರಿಸಿದಾಗ ಅಡುಗೆ ಗ್ಯಾಸ್‌ ಸರಬರಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬ ಲೋಕನಾಥ್‌ ಎಂದು ಗುರುತಿಸಿ ಆತನ ಪತ್ನಿಯ ಬಗ್ಗೆ ಮಾಹಿತಿಕೊಟ್ಟಿದ್ದ. ಮೇ 16ರಂದು ಆತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಆಕೆ ನಡೆದ ಸಂಗತಿ ವಿವರಿಸಿದ್ದಳು.

ಕೊಲೆ ನಡೆದ24 ಗಂಟೆಯೊಳಗೆ ರೈಲ್ವೆ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ದಿನವೂ ಲೋಕನಾಥ್‌, ಪತ್ನಿಯಿಂದ 500 ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದ. ಪತ್ನಿ ಬೇರೆ ದಾರಿ ಕಾಣದೇ ಸ್ನೇಹಿತನ ಜತೆಗೂಡಿ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next