ಮುಂಬಯಿ : ಅತ್ಯಂತ ಸಿನಿಮೀಯ ಶೈಲಿಯಲ್ಲಿ ನಡೆದಿದ್ದ ನಿಗೂಢ ಶೀನಾ ಬೋರಾ ಕೊಲೆ ಕೇಸಿನ ತನಿಖಾ ತಂಡದ ಭಾಗವಾಗಿದ್ದ ಮುಂಬಯಿ ಪೊಲೀಸ್ ಇನ್ಸ್‌ಪೆಕ್ಟರ್ ಧ್ಯಾನೇಶ್ವರ್ ಗಣೋರೆ ಅವರ ಪತ್ರಿ ದೀಪಾಲಿ ಗಣೋರೆ ಅವರು ಮುಂಬಯಿಯ ಸಾಂತಾಕ್ರೂಜ್‌ನಲ್ಲಿನ ತಮ್ಮ ನಿವಾಸದಲ್ಲಿ ನಿನ್ನೆ ಮಂಗಳವಾರ ತಡ ರಾತ್ರಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಪತಿ ಧ್ಯಾನೇಶ್ವರ್ ಗಣೋರೆ ಅವರು ತಮ್ಮ ಕರ್ತವ್ಯ ಮುಗಿಸಿ ಇಂದು ಬುಧವಾರ ನಸುಕಿನ 3.30ರ ವೇಳೆಗೆ ಮನೆಗೆ ಮರಳಿದಾಗ ಪತ್ನಿ ಶವವಾಗಿ ಬಿದ್ದಿರುವುದನ್ನು ಕಂಡು ದಿಗಿಲಾದರು.
ಮುಂಬಯಿ ಪೊಲೀಸರ ಪ್ರಕಾರ, ಇನ್ಸ್‌ಪೆಕ್ಟರ್ ಧ್ಯಾನೇಶ್ವರ್ ಅವರು ತಮ್ಮ ಮನೆ ಬಾಗಿಲನ್ನು ತೆರೆಯಲು ಪ್ರಯತ್ನಿಸಿ ವಿಫಲರಾದಾಗ ಪತ್ನಿಯ ಮೊಬೈಲ್‌ಗೆ ಫೋನ್ ಮಾಡಿದರು; ಆದರೆ ಆ ಹೊತ್ತಿಗೆ ಅದು ನಾಟ್ ರೀಚೇಬಲ್ ಆಗಿತ್ತು. ಕೊನೆಗೂ ಅವರು ಬಲವಂತದಿಂದ ಮನೆ ಬಾಗಿಲನ್ನು ತೆರೆದು ಒಳಪ್ರವೇಶಿಸಿದಾಗ ಪತ್ನಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದನ್ನು ಕಂಡರು.
ಧ್ಯಾನೇಶ್ವರ್ ಅವರ ಪುತ್ರ ಕೂಡ ನಾಪತ್ತೆಯಾಗಿದ್ದು ಆತನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಯಿತು. ಕೊಲೆಗೆ ಬಳಸಲಾದ ಚೂರಿ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ.
ಇನ್ಸ್‌ಪೆಕ್ಟರ್ ಧ್ಯಾನೇಶ್ವರ್ ಪ್ರಕೃತ ಖಾರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.
ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.