ಬೆಂಗಳೂರು: ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನ ವ್ಯಕ್ತಪಡಿಸಿ, ಮೊಬೈಲ್ ಪರಿಶೀಲಿಸಿ, ಮಾನಸಿಕ ಕಿರಿಕಿರಿ ಉಂಟು ಮಾಡುತ್ತಿದ್ದ ಪತ್ನಿಯನ್ನು ಲಟ್ಟಣಿಗೆ, ಕುಕ್ಕರ್ ಮುಚ್ಚಳ ಬಳಸಿ ಹತ್ಯೆಗೈದಿದ್ದ ಆರೋಪಿ ಪತಿಯನ್ನು ಮಹಾಲಕ್ಷ್ಮೀ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಜೆ.ಸಿ.ನಗರ ನಿವಾಸಿ ರಾಕೇಶ್ ಕುಮಾರ್ ಗುಪ್ತಾ (29) ಬಂಧಿತ ಆರೋಪಿ. ರಾಕೇಶ್, ತಮ್ಮ ಪತ್ನಿ ರಾಧಾರನ್ನು ಲಟ್ಟಣಿಗೆ, ಕುಕ್ಕರ್ ಮುಚ್ಚಳದಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಆದರೆ ತಮ್ಮ ಪತ್ನಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರಾಕೇಶ್‌ಕುಮಾರ್, 2016ರಲ್ಲಿ ರಾಧಾ ಎಂಬವರನ್ನು ಮದುವೆ ಮಾಡಿಯಾಗಿದ್ದು, ದಂಪತಿಗೆ ಎರಡು ವರ್ಷದ ಮಗು ಇದೆ. ಮಹಾಲಕ್ಷ್ಮೀ ಲೇಔಟ್‌ನ ಜೆ.ಸಿ.ನಗರದ ಬಾಡಿಗೆ ಮನೆಯಲ್ಲಿ ಎರಡು ವರ್ಷಗಳಿಂದ ಕುಟುಂಬದ ಜತೆ ವಾಸವಾಗಿದ್ದ. ಪ್ರತಿಷ್ಠಿತ ಕಂಪನಿಯೊಂದರ ಔಷಧ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಮಹಿಳಾ ವೈದ್ಯರು, ಔಷಧಿ ಮಾರಾಟ ಮಳಿಗೆ ಪ್ರತಿನಿಧಿಗಳು ಆಗಾಗ್ಗೆ ಕರೆ ಮಾಡುತ್ತಿದ್ದರು. ಆದರೆ, ಅದರಿಂದ ಅನುಮಾನಗೊಂಡಿದ್ದ ಪತ್ನಿ ರಾಧಾ, ಪತಿ ರಾಕೇಶ್‌ನ ಮೊಬೈಲ್ ಅನ್ನು ಅವಾಗಾವಾಗ ಪರಿಶೀಲಿಸಿ, ಕಿರಿಕಿರಿ ಉಂಟು ಮಾಡುತ್ತಿದ್ದಳು ಎನ್ನಲಾಗಿದೆ.
ಅನುಮಾನವೇ ಕೃತ್ಯಕ್ಕೆ ಕಾರಣ: ಈ ಮಧ್ಯೆ ನ.17ರಂದು ರಾತ್ರಿ 11 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ರಾಕೇಶ್ ಕುಮಾರ್ ಗುಪ್ತಾ ಊಟ ಬಡಿಸುವಂತೆ ಪತ್ನಿಗೆ ಕೇಳಿದ್ದಾನೆ. ಆದರೆ, ಪತ್ನಿ ರಾಧಾ, “ನಾನು ಯಾವುದೇ ಅಡುಗೆ ಮಾಡಿಲ್ಲ. ನೀವು ಪರಸ್ತ್ರೀ ಜತೆ ಅಕ್ರಮ ಸಂಬಂಧ ಹೊಂದಿದ್ದೀರಿ. ಈ ಬಗ್ಗೆ ತನಗೆ ಅನುಮಾನವಿದೆ ಎಂದು ರಾಕೇಶ್‌ನ ಮೊಬೈಲ್ ಕಸಿದುಕೊಂಡು ಪರಿಶೀಲಿಸಿ, ಗಲಾಟೆ ಮಾಡುತ್ತಿದ್ದರು. ಅದರಿಂದ ಕೋಪಗೊಂಡ ಆರೋಪಿ, ಅಲ್ಲೇ ಇದ್ದ ಲಟ್ಟಣಿಗೆ, ಕುಕ್ಕರ್ ಮಚ್ಚುಳದಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ತಲೆಯನ್ನು ಗೋಡೆಗೆ ಜೋರಾಗಿ ಗುದ್ದಿದ್ದಾನೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲೇ ಮಲಗಿಸಿದ್ದ. ಆದರೆ, ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಆಕೆ ಮುಂಜಾನೆಯೊಳಗೆ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಕಾಲು ಜಾರಿ ಬಿದ್ದ ಕಥೆ ಕಟ್ಟಿದ್ದ ರಾಕೇಶ್: ಮರುದಿನ ಬೆಳಗ್ಗೆ ಪತ್ನಿಯನ್ನು ಎಚ್ಚರಗೊಳಿಸಲು ಹೋದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ಆದರೆ, ರಾಧಾರ ಪೋಷಕರಿಗೆ ಕರೆ ಮಾಡಿದ ಆರೋಪಿ, ಮುಂಜಾನೆ ಮನೆಯ ಮೆಟ್ಟಿಲುಗಳಿಂದ ಕಾಲು ಜಾರಿ ಬಿದ್ದಿದ್ದು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದರು ಎಂದು ಮಾಹಿತಿ ನೀಡಿದ್ದ. ಬಳಿಕ ಬೆಂಗಳೂರಿಗೆ ಬಂದ ಆಕೆಯ ಪೋಷಕರು ಪುತ್ರಿಯ ಮೃತದೇಹ ಕಂಡು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ರಾಧಾಳ ಮೇಲೆ ಗಂಭೀರ ಹಲ್ಲೆಯಾಗಿದೆ. ಅದರಿಂದಲೇ ರಾಧಾ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮೊಬೈಲ್ ಕಸಿದುಕೊಂಡು ಪರಿಶೀಲಿಸಿ, ಕಿರಿಕಿರಿ ಉಂಟು ಮಾಡುತ್ತಿದ್ದಳು. ಬೇರೆ ಯಾವುದೇ ಮಹಿಳೆ ಜತೆ ಸಂಬಂಧ ಇಲ್ಲ ಎಂದು ಮನವಿ ಮಾಡಿದರೂ, ವಿನಾ ಕಾರಣ ಜಗಳ ತೆಗೆದು ಗಲಾಟೆ ಮಾಡುತ್ತಿದ್ದಳು. ಅದರಿಂದ ಆಕ್ರೋಶಗೊಂಡು ಹತ್ಯೆಗೈದಿದ್ದೇನೆ ಎಂದು ವಿಚಾರಣೆ ಸಂದರ್ಭದಲ್ಲಿ ರಾಕೇಶ್ ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.