Advertisement

Wife Missing: ಒಂದಲ್ಲ ಎರಡಲ್ಲ 27 ಮಂದಿಯನ್ನು ಮದುವೆಯಾಗಿ ವಂಚಿಸಿದ ಯುವತಿ; ಏನಿದು ಪ್ರಕರಣ?

01:54 PM Jul 16, 2023 | Team Udayavani |

ಶ್ರೀನಗರ: ಕೆಲವೆಡೆ ಮದುವೆಯಾದ ಬಳಿಕ ವರದಕ್ಷಿಣೆ ನೀಡುವ ಕಿರುಕುಳ ಪ್ರಕರಣಗಳು ಕಂಡು ಬರುತ್ತದೆ. ಆದರೆ ಇಲ್ಲೊಬ್ಬ‌ ಮಹಿಳೆ ಮದುವೆಯಾದ ಬಳಿಕ ಹಣವನ್ನು ಲೂಟಿ ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ಕಾಶ್ಮೀರದ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಕೆಲ ದೂರುಗಳು ಬಂದಿದೆ. 12 ಕ್ಕೂ ಹೆಚ್ಚಿನ ಮಂದಿ ತನ್ನ ಪತ್ನಿಯ ಫೋಟೋವನ್ನು ಹಿಡಿದುಕೊಂಡು ನಾಪತ್ತೆ ಕೇಸ್‌ ದಾಖಲಿಸಲು ಬಂದಿದ್ದಾರೆ. ಆದರೆ ವಿಚಿತ್ರವೆಂದರೆ ಇವರೆಲ್ಲ ಹಿಡಿದುಕೊಂಡು ಬಂದಿರುವ ಫೋಟೋದಲ್ಲಿರುವುದು ಒಬ್ಬಳೇ ಮಹಿಳೆ.!

ಮಹಿಳೆಯ ವಂಚನೆ ಜಾಲಕ್ಕೆ ಬಿದ್ದ 27 ಮಂದಿ:

ಕೆಲ ಸಮಯದ ಹಿಂದೆ ಸ್ಥಳೀಯ ಮದುವೆ ದಲ್ಲಾಳಿಯೊಬ್ಬ ನನ್ನ ಮಗನಿಗೆ ಹೆಣ್ಣು ಹುಡುಕುತ್ತೇನೆ ಎಂದು ಹೇಳಿದ್ದ. ನನ್ನ ಮಗನಿಗೆ ದೈಹಿಕವಾಗಿ ಸಮಸ್ಯೆಗಳಿದ್ದವೆ ಎಂದು ಆತನ ಬಳಿ ಹೇಳಿದ್ದೆ. ಅದಕ್ಕೆ ಆತ ಪರವಾಗಿಲ್ಲ ನೀವು 2 ಲಕ್ಷ ರೂ. ಕೊಟ್ಟರೆ ಮದುವೆ ಮಾಡಿಸುತ್ತೇನೆಂದು ಹೇಳಿದ್ದ. ಇದಾದ ಬಳಿಕ ನಾವು ಮದುವೆಗಾಗಿ ಹೊಟೇಲ್‌ ರೂಮ್‌ ಹುಡುಕುತ್ತಿದ್ದ ವೇಳೆ ದಲ್ಲಾಳಿ ಮದುವೆಯನ್ನು ವಿಳಂಬ ಮಾಡಲು ಯತ್ನಿಸುತ್ತಿದ್ದ.  ಆ ಬಳಿಕ ಮೊದಲು ತೋರಿಸಿದ್ದ ಹುಡುಗಿಗೆ ಅಪಘಾತವಾಗಿದೆ ಎಂದು ಹೇಳಿ ಅರ್ಧ ಹಣ ವಾಪಾಸ್‌ ನೀಡಿದ್ದ. ಕೆಲ ಸಮಯದ ಬಳಿಕ ಮತ್ತೊಂದು ಹುಡುಗಿಯ ಫೋಟೋವನ್ನು ತೋರಿಸಿ ಹಣವನ್ನು ಮತ್ತೆ ಕೇಳಿದ್ದ. ಇಶಾ (ಸಂಜೆ) ಸಮಯಕ್ಕೆ ಹುಡುಗಿಯನ್ನು ಕರೆ ತಂದಿದ್ದ. ಅದೇ ದಿನ ಮದುವೆ ಮಾಡಿಸಿ ನಾವು ಕಾಶ್ಮೀರಕ್ಕೆ ವಾಪಾಸ್‌ ಆದೆವು.

ಇದಾದ ಬಳಿಕ ಕೆಲ ದಿನಗಳ ನಂತರ ಹುಡುಗಿ ತನ್ನ ಗಂಡನ ಬಳಿ ಹೋಗಿ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ಚೆಕ್‌ ಅಪ್‌ ಮಾಡಿಸಲು ಹೋಗಬೇಕೆಂದು ಹೇಳಿದ್ದಾಳೆ. ಗಂಡ ಆಸ್ಪತ್ರೆಯ ಟಿಕೆಟ್‌ ಪಡೆಯಲು ಹೋಗುವ ವೇಳೆ ಅವಳು ಓಡಿ ಹೋಗಿದ್ದಾಳೆ ಎಂದು ಮೋಸ ಹೋದ ಯುವಕನ ತಂದೆಯೊಬ್ಬರು ‘ದಿ ಕಾಶ್ಮೀರಿಯತ್ʼಗೆ ಹೇಳಿದ್ದಾರೆ.

Advertisement

ನಾವು ಮದುವೆಗಾಗಿ ಆಕೆಗೆ 3,80,000 ಲಕ್ಷ ರೂ. ಚಿನ್ನ ಮತ್ತು 5 ಲಕ್ಷ ರೂ. ಮೌಲ್ಯದ ಮೆಹೆರ್‌ ನ್ನು ನೀಡಿದ್ದೇವೆ ಎಂದು ಮೋಸ ಹೋದ ಯುವಕನ ತಂದೆ ಹೇಳಿರುವುದಾಗಿ ವರದಿ ತಿಳಿಸಿದೆ.

ದಲ್ಲಾಳಿಯೊಬ್ಬ ಮಹಿಳೆಯ ಫೋಟೋ ತೋರಿಸಿದ್ದ ಅದೇ ದಿನ ರಾತ್ರಿ ನಾವು ಮದುವೆ ಮಾಡಿಸಿದ್ದೇವೆ. ಆಕೆ 10 ದಿನ ನಮ್ಮ ಮನೆಯಲ್ಲಿದ್ದಳು ನಂತರ ಓಡಿ ಹೋಗಿದ್ದಾಳೆ ಎಂದು ಮೋಸ ಹೋಗಿರುವ ಯುವಕನ ಕುಟುಂಬವೊಂದು ಹೇಳಿರುವುದಾಗಿ ವರದಿ ತಿಳಿಸಿದೆ.

ನಕಲಿ ಹೆಸರು, ದಾಖಲೆ ಕೊಟ್ಟು ಮದುವೆ..  ನಾನು ಕೂಡ ಆಕೆಯನ್ನು ವಿವಾಹವಾಗಿದ್ದೆ. ಮದುವೆ ಆಗುವ ವೇಳೆ ನಕಲಿ ದಾಖಲೆ ಹಾಗೂ ಹೆಸರನ್ನು ನೀಡಿದ್ದಾಳೆ. ಆಕೆ ರಾತ್ರಿಯ ವೇಳೆ ಮನೆಯಲ್ಲಿದ್ದ ಎಲ್ಲವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಮೋಸ ಹೋದ ಮೊಹಮ್ಮದ್‌ ಅಲ್ತಾಫ್‌ ಮಿರ್‌ ಎನ್ನುವವರು ‘ದಿ ಕಾಶ್ಮೀರಿಯತ್ʼಗೆ ಹೇಳಿದ್ದಾರೆ.

ಇದೊಂದು ದೊಡ್ಡ ಗ್ಯಾಂಗ್.‌ ಇದರಲ್ಲಿ ತುಂಬಾ ಜನರಿದ್ದಾರೆ. ಈಕೆ ಮ್ಯಾರೇಜ್‌ ಡಾಕ್ಯುಮೆಂಟ್‌ ನಲ್ಲಿ ಜಹೀನ್, ಲಾಯಸ್ , ಸಹೀನಾ ಹೀಗೆ ನಾನಾ ಹೆಸರಗಳನ್ನು ಕೊಟ್ಟಿದ್ದಾಳೆ. ಅವಳ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಬಡ್ಗಮ್ ಪ್ರದೇಶದಲ್ಲೇ ಈಕೆ ಕನಿಷ್ಠ 27 ಮಂದಿಯನ್ನು ಮದುವೆಯಾಗಿದ್ದಾಳೆ. ದಲ್ಲಾಳಿಗಳ ಸಹಾಯವೂ ಈಕೆಗಿದೆ ಎಂದು ವಕೀಲರೊಬ್ಬರು ಹೇಳುತ್ತಾರೆ.

ಸದ್ಯ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ವಂಚನೆ ಎಸಗಿರುವ ಮಹಿಳೆ ಹಾಗೂ ಗ್ಯಾಂಗ್‌ ಹುಡುಕಾಟಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next