Advertisement

Bengaluru; ರಾಸಲೀಲೆ ಕಂಡ ಪತಿಯ ಕೊಂದ ಪತ್ನಿ,ಪ್ರಿಯಕರ!; ರುಬ್ಬುವ ಕಲ್ಲು ಎತ್ತಿಹಾಕಿ ಹತ್ಯೆ

09:19 AM Jan 14, 2024 | Team Udayavani |

ಬೆಂಗಳೂರು: ಪ್ರಿಯಕರನ ಜತೆ ರಾಸಲೀಲೆಯಲ್ಲಿ ತೊಡಗಿದ್ದಾಗ ಎಂಟ್ರಿಕೊಟ್ಟ ಪತಿಯನ್ನು ಪ್ರಿಯಕರ ಜತೆ ಸೇರಿ ರುಬ್ಬುವ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಬಳಿಕ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ 2ನೇ ಸೆಕ್ಟರ್‌ನ ನಂದಿನಿ ಬಾಯಿ (22) ಮತ್ತು ಆಕೆಯ ಪ್ರಿಯಕರ ನಿತೀಶ್‌ ಕುಮಾರ್‌ (22) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್‌ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಈ ಸಂಬಂಧ ಮೃತನ ತಂದೆ ಲಕ್ಷ್ಮೀ ನಾಯಕ್‌ ಎಂಬುವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶದ ಅನಂತಪುರ ಮೂಲದ ವೆಂಕಟರಮಣ ನಾಯಕ್‌ ನಾಲ್ಕು ವರ್ಷದ ಹಿಂದೆ ಸಂಬಂಧಿ ನಂದಿನಿ ಬಾಯಿಯನ್ನು ಮದುವೆಯಾಗಿದ್ದು, ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. ಕಳೆದ ಮೂರು ವರ್ಷಗಳಿಂದ ದಂಪತಿ ಮಕ್ಕಳೊಂದಿಗೆ ಎಚ್‌ಎಸ್‌ಆರ್‌ ಲೇಔಟ್‌ನ 2ನೇ ಸೆಕ್ಟರ್‌ನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಹೀಗಾಗಿ ಮನೆ ಮಾಲೀಕರು, ಮನೆ ಆವರಣದಲ್ಲಿರುವ ಕೊಠಡಿಯೊಂದನ್ನು ದಂಪತಿ ವಾಸಕ್ಕೆ ಬಿಟ್ಟುಕೊಟ್ಟಿದ್ದರು.

ವೆಂಕಟರಮಣ ಬೆಳಗ್ಗೆ ಇಂದಿರಾ ನಗರದ ಅಂಗಡಿಯೊಂದರಲ್ಲಿ ಸೇಲ್ಸ್‌ ಮ್ಯಾನ್‌ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ತಾನು ವಾಸವಿರುವ ಬನಶಂಕರಿ ಕಟ್ಟಡದಲ್ಲೇ ಸೆಕ್ಯೂರಿಟಿ ಗಾರ್ಡ್‌ ಆಗಿದ್ದರು. ನಂದಿನಿ ಮನೆ ಕೆಲಸ ಮಾಡಿಕೊಂಡಿದ್ದಳು. ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಆ ಬಳಿಕ ಪತ್ನಿ ನಂದಿನಿ ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ ತೆಗೆದು ತವರು ಮನೆಗೆ ಹೋಗುತ್ತಿದ್ದಳು. ಅಲ್ಲದೆ, ತನ್ನ ಮೂರು ವರ್ಷದ ಮಗಳನ್ನು ತನ್ನ ತವರು ಮನೆಯಲ್ಲೇ ಬಿಟ್ಟಿದ್ದಳು. ಈ ಮಧ್ಯೆ ತನ್ನ ವಿದ್ಯಾರ್ಥಿ ಜೀವನದ ಗೆಳೆಯನ ಜತೆ ಮೊಬೈಲ್‌ ನಲ್ಲಿ ಹೆಚ್ಚು ಮಾತನಾಡುತ್ತಿದ್ದಳು. ಈ ವಿಚಾರ ತಿಳಿದ ಪತಿ ವೆಂಕಟರಮಣ ಪತ್ನಿ ಜತೆ ಜಗಳ ಮಾಡಿದ್ದ. ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ.

ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ

Advertisement

ಪತಿ ಹಾಗೂ ಹಿರಿಯರು ಎಚ್ಚರಿಕೆ ನೀಡಿದರೂ ನಂದಿನಿ, ಪ್ರಿಯಕರ ಜತೆಗಿನ ಮಾತುಕತೆ ಮುಂದುವರಿಸಿದ್ದಳು. ಅಲ್ಲದೆ, ಬೆಂಗಳೂರಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದಾಳೆ. ಅದೇ ವೇಳೆ ಪತಿ ವೆಂಕಟರಮಣ ಮನೆಗೆ ಬಂದಿದ್ದು, ಇಬ್ಬರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಮೂವರ ನಡುವೆ ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್‌ ಕುಮಾರ್‌ ಹಲ್ಲೆ ನಡೆಸಿ, ಕೆಳಗೆ ಬಿದ್ದಾಗ ಆತನ ತಲೆಗೆ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಇಬ್ಬರು ಸೆಕ್ಯೂರಿಟಿ ಗಾರ್ಡ್‌ ಕೊಠಡಿಯ ಬಳಿಯ ಶೌಚಾಲಯಕ್ಕೆ ಎಳೆದೊಯ್ದು ಮಲಗಿಸಿದ್ದಾರೆ. ಆರೋಪಿ ನಿತೀಶ್‌ ಕುಮಾರ್‌ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಜಾರಿ ಬಿದ್ದು ಪತಿ ಸಾವು ಎಂದು ಕಥೆ ಸೃಷ್ಟಿಸಿದ ಪತ್ನಿ

ಆ ನಂತರ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿದ ನಂದಿನಿ, ಪತಿ ಶೌಚಾಲಯದಲ್ಲಿ ಕಾರು ಜಾರಿ ಬಿದ್ದಿದ್ದಾರೆ ಎಂದು ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರಿಗೆ, ವೆಂಕಟರಮಣನ ಮೃತದೇಹ ಗಮನಿಸಿದಾಗ ಬಿದ್ದು ಮೃತಪಟ್ಟಿರಲು ಸಾಧ್ಯವಿಲ್ಲ. ಯಾರೋ ಹಲ್ಲೆ ನಡೆಸಿಯೇ ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆಗ ನಂದಿನಿಯನ್ನು ಪ್ರಶ್ನಿಸಿದಾಗ, ಪತಿ ಮದ್ಯದ ಅಮಲಿನಲ್ಲಿ ಜಾರಿ ಬಿದ್ದಾಗ ಚೂಪಾದ ಕಲ್ಲುಗಳು ತಲೆಗೆ ಹೊಕ್ಕಿ ಮೃತಪಟ್ಟಿದ್ದಾರೆ ಎಂದು ಮತ್ತೆ ಪುನರುಚ್ಚಿಸಿದ್ದಾಳೆ. ಅಲ್ಲದೆ, ಕೊಲೆಯಾದ ವೆಂಕಟರಮಣನ ತಂದೆ ಲಕ್ಷ್ಮೀ ನಾಯಕ್‌ ಸಹ ಮಗನದು ಅಸಹಜ ಸಾವಲ್ಲ. ಇದು ಕೊಲೆ ಎಂದು ಸೊಸೆ ನಂದಿನಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ನಂದಿನಿ ಮೇಲೆ ನಿಗಾ ವಹಿಸಿದ್ದರು.

ಕಾಲೇಜು ದಿನಗಳಿಂದ ಯುವಕ ಜತೆ ಪ್ರೀತಿ

ಆರೋಪಿಗಳ ವಿಚಾರಣೆಯಲ್ಲಿ ನಂದಿನಿ ಮತ್ತು ನಿತೀಶ್‌ ಆಂಧ್ರಪ್ರದೇಶದಲ್ಲಿ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಂದಿನಿಂದಲೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಜಾತಿ ಕಾರಣಕ್ಕೆ ಎರಡು ಕುಟುಂಬಗಳು ಮದುವೆಗೆ ನಿರಾಕರಿಸಿದ್ದರು. ಬಳಿಕ ನಂದಿನಿಗೆ ಸಂಬಂಧಿ ವೆಂಕಟರಮಣನ ಜತೆ ಮದುವೆ ಮಾಡಲಾಗಿತ್ತು. ಆದರೂ ನಂದಿನಿ ಮತ್ತು ನಿತೀಶ್‌ ಜತೆ ಅನೈತಿಕ ಸಂಬಂಧ ಮುಂದುವರೆದಿತ್ತು ಎಂದು ಪೊಲೀಸರು ಹೇಳಿದರು.

ವಿಚಾರಣೆ ವೇಳೆ ಸತ್ಯ ಬಾಯಿ ಬಿಟ್ಟ ಮಹಿಳೆ

ಮತ್ತೂಂದೆಡೆ ಮರಣೋತ್ತರ ಪರೀಕ್ಷೆ ವರದಿಯಲ್ಲೂ ಅಸಹಜ ಸಾವಲ್ಲ. ಹಲ್ಲೆ ನಡೆಸಲಾಗಿದೆ ಎಂದು ವರದಿ ಬಂದಿತ್ತು. ಜತೆಗೆ ಮನೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಜ.9ರಂದು ಮಧ್ಯಾಹ್ನ ಮನೆಗೆ ಬಂದು, ರಾತ್ರಿ ವಾಪಸ್‌ ಹೋಗಿದ್ದಾನೆ. ನಂದಿನಿ ಮೊಬೈಲ್‌ಗೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಒಂದೇ ನಂಬರ್‌ನಿಂದ ಹೆಚ್ಚು ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾಳೆ. ಬಳಿಕ ಆರೋಪಿ ನಿತೀಶ್‌ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next