Advertisement

ಪತ್ನಿ, ಗೆಳತಿ, ಫೇಸ್‌ಬುಕ್‌ ಮತ್ತು ಐಸಿಸ್‌ ಸಂಚು!

06:22 AM Mar 10, 2019 | |

ದೆಹಲಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹಜ್‌ಯಾತ್ರೆ ಪ್ರಯಾಣಿಕರಿರುವ ಏಳು ವಿಮಾನಗಳಲ್ಲಿ “ಬಾಂಬ್‌’ ಇಡಲಾಗಿದೆ ಎಂಬ ಬೆದರಿಕೆಯ ಸಂದೇಶಗಳು ಬರತೊಡಗಿದ್ದವು. ವಿಮಾನ ನಿಲ್ದಾಣ ಅಧಿಕಾರಿಗಳು ಬೆಚ್ಚಿಬಿದ್ದರು, ವಿಮಾನಗಳ ಪ್ರಯಾಣ ರದ್ದಾಯಿತು. ಹೈ ಅಲರ್ಟ್‌ ಘೋಷಣೆಯಾಗಿತ್ತು. ಇದ್ದು ಆದದ್ದು ಸೆ.2015ರಲ್ಲಿ.

Advertisement

ಏಕ ಕಾಲದಲ್ಲಿ ಬೆಂಗಳೂರು ಹಾಗೂ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದರು. ರಾಷ್ಟ್ರೀಯ ತನಿಖಾ ತಂಡಗಳು ಹಾಗೂ ಗುಪ್ತಚರ ದಳಗಳು ಎಚ್ಚೆತ್ತುಕೊಂಡವು. ಬಾಂಬ್‌ ಸಂದೇಶದ ಕುರಿತು ವೇಗದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದ ಮೊಬೈಲ್‌ ಹೊಂದಿದ್ದ ವ್ಯಕ್ತಿಯ ವಿಳಾಸ ಪತ್ತೆಯಾಯಿತು.ಜಾಡು ಹಿಡಿದ ಪೊಲೀಸರ ತಂಡವೊಂದು ಎಚ್‌ಎಸ್‌ಆರ್‌ ಲೇಔಟ್‌ನ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ವೊಂದರ ಬಾಗಿಲು ಬಡಿಯಿತು. ಒಳಗಡೆಯಿಂದ ಬಾಗಿಲು ತೆರೆದ ವ್ಯಕ್ತಿ ಆಗ ತಾನೆ ಅರೆ ನಿದ್ರೆಯಿಂದ ಎದಿದ್ದ.

ಬೆದರಿಕೆ ಸಂದೇಶಗಳು ಬರುತ್ತಲೇ ಇದ್ದ ಕಾರಣ, ಎದುರಿಗಿದ್ದ ವ್ಯಕ್ತಿ ಆತನಲ್ಲ ಎಂದು ಪೊಲೀಸರು ಮೊಬೈಲ್‌ ನಂಬರ್‌ ಲೊಕೇಶನ್‌ ಆಧರಿಸಿ ಅದೇ ಅಪಾರ್ಟ್‌ಮೆಂಟ್‌ ಮತ್ತೂಂದು ಫ್ಲ್ಯಾಟ್‌ನತ್ತ ಧಾವಿಸಿ ಬಾಗಿಲು ತೆರೆಸಿ ಒಳ ಪ್ರವೇಶಿಸಿದರು. ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಬೆದರಿಕೆ ಸಂದೇಶಗಳನ್ನು ಕಳುಹಿಸುವುದರಲ್ಲಿ ತಲ್ಲೀನನಾಗಿದ್ದ. ಕೂಡಲೇ ಆತನ ಮೊಬೈಲ್‌ ಪಡೆದು ಆತನನ್ನೂ ಬಂಧಿಸಲಾಯಿತು.

ವಿಮಾನ ನಿಲ್ದಾಣಗಳಲ್ಲಿ ಹಲವು ಗಂಟೆಗಳ ಕಾಲ ಸೃಷ್ಟಿಯಾಗಿದ್ದ ಆತಂಕ ಕೊನೆಗೂ ದೂರವಾಯಿತು, ವಿಮಾನಗಳು ಪಯಣಕ್ಕೆ ಅಣಿಯಾದವು. ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಹುಸಿಬಾಂಬ್‌ ಕರೆ ಮಾಡಿದ ಆರೋಪ ಕೇಸ್‌ನಲ್ಲಿ ಬಂಧಿತನಾಗಿದ್ದ ಟೆಕ್ಕಿಯನ್ನು ವಿಚಾರಣೆಗೊಳಪಡಿಸಿದಾಗ ಹುಸಿಬಾಂಬ್‌ ಕರೆ ರಹಸ್ಯವಷ್ಟೇ ಅಲ್ಲದೆ ಪತ್ನಿಯನ್ನೇ ಕೊಲೆ ಮಾಡಿದ ಸಂಚು ಕೇಳಿ ಪೊಲೀಸರು ಜಾಗೃತರಾದರು.

ಆತನ ಹೆಸರು ನಕುಲ್‌, ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಉನ್ನತ ಹುದ್ದೆ. ಕೈ ತುಂಬಾ ಸಂಬಳ, ಪತ್ನಿ, ಒಂದು ಹೆಣ್ಣು ಮಗುವಿನ ಸುಂದರ ಸಂಸಾರ. ಆತನ ಬಾಳಿಗೆ ಫೇಸ್‌ಬುಕ್‌ ಮೂಲಕ ತನ್ನ ಕಾಲೇಜು ದಿನಗಳ ಗೆಳತಿ ಪರಿಚಯವಾಗಿತ್ತು. ಆಕೆಗೂ ಪತಿ ಮಕ್ಕಳಿದ್ದರು.ಆದರೆ, ಇವನಿಗೆ ಗೆಳತಿಯ ಮೇಲೆ ಮೋಹ ಆರಂಭವಾಯಿತು. ಆಕೆಯ ಜತೆ ಬದುಕಬೇಕು ಎಂಬ ಆಸೆ ಹುಟ್ಟಿಕೊಂಡಿತ್ತು. ಹೀಗಾಗಿಯೇ 2013ರಲ್ಲಿ ದೆಹಲಿಯಿಂದ ಬೆಂಗಳೂರಿಗೆ ಸಂಸಾರ ಸಮೇತ ಶಿಫ್ಟ್ ಆಗಿ ಅವರಿದ್ದ ಅಪಾರ್ಟ್‌ಮೆಂಟ್‌ನಲ್ಲಿಯೇ ವಾಸಿಸುತ್ತಿದ್ದ.

Advertisement

ಈ ಬೆಳವಣಿಗೆಗಳ ನಡುವೆಯೇ ಪತ್ನಿ ಬೇರೊಬ್ಬ ಯುವಕನ ಜತೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವೂ ಶುರುವಾಯಿತು. ಇಬ್ಬರ ನಡುವೆ ಜಗಳ ಮೊದಲಾಯಿತು. ವಿಚ್ಛೇದನ ನೀಡಿ ಪ್ರತ್ಯೇಕವಾಗೋಣ ಎಂಬ ಆಲೋಚನೆ ಬಂದರೂ ಮಗಳಿಗಾಗಿ ಈ ನಿರ್ಧಾರ ಕೈಬಿಟ್ಟಿದ್ದ. ಆದರೆ, ಗೆಳತಿ ಜತೆ ಜೀವನ ನಡೆಸಬೇಕು ಎಂಬ ಬಯಕೆ ಮಾತ್ರ ಬಲವಾಗಿತ್ತು.

ತನ್ನ ಪತ್ನಿಯ ಸಂಬಂಧದ ಬಗ್ಗೆ ಆಕೆಯಿಂದಲೇ ಬಾಯ್ಬಿಡಿಸಬೇಕೆಂದು ಟೆಕ್ಕಿ ಹೊಸತಂತ್ರ ರೂಪಿಸಿದ. ಪತ್ನಿ ಬಾಬಾನ ಅಪಾರ ಭಕ್ತೆ ಆಕೆಯಾಗಿದ್ದರಿಂದ ಫೇಸ್‌ಬುಕ್‌ನಲ್ಲಿ “ಬಾಬಾ’ ಎಂಬ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಪತ್ನಿಗೆ ರಿಕ್ವೆಸ್ಟ್‌ ಕಳುಹಿಸಿದ. ಆಕೆ ಅಕ್ಸೆಪ್ಟ್ ಮಾಡಿದಳು. ನಿಧಾನವಾಗಿ ಆಕೆಯ ವಿಶ್ವಾಸಗಳಿಸಿದ. ನಂತರ ನೀನು ಹೊಂದಿರುವ ಇನ್ನೊಂದು ಸಂಬಂಧದ ಬಗ್ಗೆ ಒಪ್ಪಿಕೊಳ್ಳುವಂತೆ ಮರಳು ಮಾಡಿದ್ದ. ಜತೆಗೆ, ಆತನೊಂದಿಗೆ ನಗ್ನವಾಗಿರುವ ಫೋಟೋ ಕಳುಹಿಸುವಂತೆ ಕೇಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದ.

ಇದಾದ ಕೆಲವು ದಿನಗಳ ಬಳಿಕ ಮತ್ತೂಮ್ಮೆ “ನಿಶಾ’ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಅಕೌಂಟ್‌ ಸೃಷ್ಟಿಸಿ ಪತ್ನಿಗೆ ಕಳುಹಿಸಿದ್ದ . ಆಗ ತಾನೂಬ್ಬ ಜ್ಯೋತಿಷ್ಯ ತಜ್ಞೆ, ದೈವಜ್ಞೆ ಎಂದು ತಿಳಿಸಿ ಆಕೆಯ ನಂಬಿಕೆ ಗಳಿಸಿ ಯುವಕನ ಜೊತೆ ಹೊಂದಿರುವ ಸಂಬಂಧದ ಬಗ್ಗೆ ಮಾಹಿತಿ ಪಡೆದುಕೊಂಡು. ಯಾಗ ಮಾಡಿದರೆ, ಪ್ರಾಯಶ್ಚಿತ ವಾಗಲಿದೆ. ಜತೆಗೆ, ವಿಚ್ಛೇದನ ನೀಡದೆ ಗಂಡನ ಜತೆ ಬಾಳಬಹುದು ಎಂದು ನಂಬಿಸಿದ್ದ.

ಪತ್ನಿ ಕೊಲೆಗೈದು ಆತ್ಮಹತ್ಯೆ ಕಥೆ ಹೆಣೆದ: 2015 ಜುಲೈ ತಿಂಗಳಲ್ಲಿ ಒಂದು ದಿನ ರಾತ್ರಿ ಫ್ಲ್ಯಾಟ್‌ನಲ್ಲಿ ನಕುಲ್‌ ಹಾಗೂ ಪತ್ನಿಗೆ ದೆಹಲಿಗೆ ವಾಪಾಸ್‌ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಯಿತು. ಕೋಪದ ಭರದಲ್ಲಿ ಗಣೇಶ ವಿಗ್ರಹವನ್ನು ತೆಗೆದುಕೊಂಡವನೇ ಪತ್ನಿಯ ತಲೆಗೆ ಹೊಡೆದು ಬಿಟ್ಟ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆ ಉಸಿರು ಚೆಲ್ಲಿದ್ದಳು. ಮಾರನೇ ದಿನ ಬೆಳಗ್ಗೆ ಆಕೆಯ ಪೋಷಕರಿಗೆ ಫೋನ್‌ ಮಾಡಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ. ಪೊಲೀಸರಿಗೂ ಇದೇ ಕತೆ ಹೇಳಿದ. ಪಾನಮತ್ತಳಾಗಿದ್ದ ಪತ್ನಿ ಟಿ.ವಿ ಸ್ಟಾಂಡ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದ.

 ಪೊಲೀಸರಿಗೆ ಅನುಮಾನವಿತ್ತಾದರೂ ಅಳಿಯನ ಬೆಂಬಲಕ್ಕೆ ನಿವೃತ್ತ ಪೊಲೀಸ್‌ ಆಧಿಕಾರಿ ನಿಂತರು. ಮಗಳು ಕುಡಿದು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಳಿಯ ತುಂಬಾ ಮುಗ್ಧನೆಂದು ನಂಬಿದರು. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಬಾಬಾ ಹಾಗೂ ಆಶಾ ಹೆಸರಿನಲ್ಲಿ ಪತ್ನಿಯ ಇನ್ನೊಂದು ಸಂಬಂಧದ ಬಗ್ಗೆ ಹಂಚಿಕೊಂಡಿದ್ದ ಮಾಹಿತಿಯನ್ನು ಮಾವನಿಗೆ ಸಾಕ್ಷಿ ಸಮೇತ ತಿಳಿಸಿದ್ದ. ಹೀಗಾಗಿ ಮಡಿವಾಳ ಠಾಣೆಯಲ್ಲಿ ಆಕೆಯ ಸಾವಿನ ಬಗ್ಗೆ ಅಸಹಜ ಸಾವು ಕೇಸ್‌ ದಾಖಲಾಗಿತ್ತು.

ಗೆಳತಿಯ ಗಂಡನ ಸಿಲುಕಿಸಲು “ಉಗ್ರ’ ಸಂಚು: ಪತ್ನಿ ಮೃತಳಾಗುತ್ತಲೇ ಗೆಳತಿಯನ್ನು ತನ್ನವಳಾನ್ನಾಗಿಸಿಕೊಳ್ಳುವ ದಾರಿ ಸುಗಮವಾಯಿತೆಂದು ನಕುಲ್‌ ಸಂತಸಪಟ್ಟ. ಇದೀಗ, ಗೆಳತಿಯ ಗಂಡನನ್ನು ಆಕೆಯಿಂದ ದೂರ ಮಾಡಲು ತಂತ್ರ ಹೆಣೆದ. ಆಕೆಯ ಗಂಡನನ್ನು ಐಸಿಸ್‌ ಉಗ್ರ ಸಂಘಟನೆ ಒಲವುಳ್ಳವನು ಎಂದು ಬಿಂಬಿಸಬೇಕು ಇದರಿಂದ ಬಂಧಿತನಾಗುತ್ತಾನೆ ಎಂದು ಲೆಕ್ಕಾಚಾರ ಹಾಕಿದ. ಅದರಂತೆ, ಗೆಳತಿಯ ಗಂಡನ ಫೋಟೋ ಹಾಗೂ ಆತನ ದಾಖಲೆಗಳನ್ನು ಕಳವು ಮಾಡಿದ.

ಬಳಿಕ ನಕಲಿ ಫೇಸ್‌ಬುಕ್‌ ಅಕೌಂಟ್‌ ಸೃಷ್ಟಿಸಿ ಹುಸಿಬಾಂಬ್‌ ಸಂದೇಶ ರವಾನಿಸಿ ಪೊಲೀಸರಿಗೆ ಸಿಕ್ಕಿಬಿದ್ದ. ಆರೋಪಿ ನಕುಲ್‌ ವಿರುದ್ಧ ಸಿಸಿಬಿ ಪೊಲೀಸರು ಪ್ರತ್ಯೇಕ ತನಿಖೆ ನಡೆಸಿದ್ದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪತ್ನಿ ಕೊಲೆ ಕೇಸ್‌ ಅನ್ನು ಮಡಿವಾಳ ಪೊಲೀಸರು ತನಿಖೆ ಪೂರ್ಣಗೊಳಿಸಿದರು. ಈ ಎರಡೂ ಕೇಸ್‌ಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಅಧಿಕಾರಿ ತಿಳಿಸಿದರು.

ಹುಸಿ ಸಂದೇಶದಿಂದ ಬಂಧನ: ಗೆಳತಿಯ ಗಂಡನ ಹೆಸರಿನಲ್ಲಿ ಒಂದು ಹೊಸ ಫೋನ್‌ ಹಾಗೂ ಸಿಮ್‌ ಕಾರ್ಡ್‌ ದಾಖಲಿಸಿದ. ರೆಹಮಾನ್‌ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು, ಐಸಿಸ್‌ ಹಾಗೂ ಜಿಹಾದಿ ಪರವಾದ ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ. ಹೇಗಾದರೂ ಮಾಡಿ ಗೆಳತಿಯ ಪತಿಯನ್ನು ಸಿಕ್ಕಿಹಾಕಿಸಬೇಕೆಂಬುದು ಅವನ ಸಂಚಾಗಿತ್ತು.

ಹೀಗಾಗಿ, ಸೆ. 4ರಂದು ತಡ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಹಜ್‌ ಯಾತ್ರೆಗೆ ತೆರಳುತ್ತಿರುವ ಮೂರು ವಿಮಾನಗಳಲ್ಲಿ ಬಾಂಬ್‌ ಇದೆ ಹುಸಿ ಸಂದೇಶಗಳನ್ನು ಕಳುಹಿಸಲಾರಂಭಿಸಿದ. ಇದರಿಂದ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು ಎಂದು ತನಿಖೆ ಅಧಿಕಾರಿಯೊಬ್ಬರು ತಿಳಿಸಿದರು.

* ಮಂಜುನಾಥ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next