ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ ಅನ್ನು ವಿಸರ್ಜಿಸಿ, ಸಾರ್ವತ್ರಿಕ ಚುನಾವಣೆ ನಡೆಸುವಂತೆ ಇಮ್ರಾನ್ ಖಾನ್ ಆಗ್ರಹಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ಸಿದ್ಧತೆಯಲ್ಲಿದ್ದು, ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಗೆಳತಿ ಫರಾ ಖಾನ್ ಬಂಧನದ ಭೀತಿಯಿಂದ ಪಾಕ್ ಬಿಟ್ಟು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ದಶಕಗಳ ವಿವಾದಿತ ಸಮಾಧಿಯ ಶಿಲುಬೆ ಸಾಮರಸ್ಯದ ಮೂಲಕ ತೆರವು
ಫರಾ ಖಾನ್ ಐಶಾರಾಮಿ ಹ್ಯಾಂಡ್ ಬ್ಯಾಗ್ ನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನ ಕಾಲಬುಡದಲ್ಲಿ ಫರಾಹ್ ಖಾನ್ ಬ್ಯಾಗ್ ಇಟ್ಟುಕೊಂಡಿರುವ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋ ಯಾವ ಸಂದರ್ಭದಲ್ಲಿ ತೆಗೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ದ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಫರಾ ಖಾನ್ ಪತಿ ಅಶಾನ್ ಜಮೀಲ್ ಗುಜ್ಜಾರ್ ಈಗಾಗಲೇ ಅಮೆರಿಕಕ್ಕೆ ಪಲಾಯನವಾಗಿದ್ದು, ಫರಾ ಖಾನ್ ಭಾನುವಾರ ದುಬೈಗೆ ಕಾಲ್ಕಿತ್ತಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನದ ಸಂಸತ್ ನಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ತಿರಸ್ಕರಿಸಿದ್ದು, ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ನಂತರ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಫರಾ ಖಾನ್ ಪರಾರಿಯಾಗಿದ್ದೇಕೆ?
ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಗೆಳತಿ ಫರಾ ಖಾನ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ನಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾಳೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಫರಾ ಖಾನ್ ಭಾರೀ ಮೊತ್ತದ ಲಂಚ ಪಡೆದಿರುವುದಾಗಿ ವಿರೋಧ ಪಕ್ಷಗಳು ಆರೋಪಿಸಿವೆ. ಫರಾ ಖಾನ್ ಅಂದಾಜು 32 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹಗರಣದಲ್ಲಿ ಭಾಗಿಯಾಗಿರುವುದಾಗಿ ದೂರಲಾಗಿದೆ.
ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಅಣತಿಯ ಮೇರೆಗೆ ಫರಾ ಭ್ರಷ್ಟಾಚಾರದಲ್ಲಿ ತೊಡಗಿದ್ದಳು ಎಂದು ಪಾಕಿಸ್ತಾನ್ ಮುಸ್ಲೀಮ್ ಲೀಗ್ ನ ಮರ್ಯಾಮ್ ನವಾಜ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ನೂತನ ಸರ್ಕಾರ ರಚನೆಯಾದರೆ ಬಂಧನಕ್ಕೊಳಗಾಬಹುದು ಎಂಬ ಭೀತಿಯಲ್ಲಿ ಫರಾ ಮತ್ತು ಪತಿ ಗುಜ್ಜಾರ್ ದೇಶ ಬಿಟ್ಟು ಪರಾರಿಯಾಗಿರುವುದಾಗಿ ವರದಿ ವಿವರಿಸಿದೆ.