Advertisement

ಹೊಡೆಯುವ ಹೆಂಡತಿಯರು!

02:17 PM Oct 03, 2018 | |

ಪತ್ನಿಯರೂ ಗೂಸಾ ಕೊಡುತ್ತಾರೆ! ಹಾಗೆಂದು ವಿಶ್ವಸಂಸ್ಥೆ ಇತ್ತೀಚೆಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾರತಕ್ಕೆ 3ನೇ ಸ್ಥಾನ ಕೊಟ್ಟಿದೆ. ಭಾರತದ ಗಂಡಂದಿರು ಯಾಕೆ ಪೆಟ್ಟು ತಿನ್ನುತ್ತಿದ್ದಾರೆ? ಇದು ಪುರುಷರ ಮೇಲಾಗುತ್ತಿರುವ ದೌರ್ಜನ್ಯವೇ? 

Advertisement

ಈಜಿಪ್ಟ್ಗೆ ಪ್ರಥಮ ಸ್ಥಾನ, ಯುನೈಟೆಡ್‌ ಕಿಂಗ್‌ಡಮ್‌ಗೆ ದ್ವಿತೀಯ ಮತ್ತು ನಮ್ಮ ಭಾರತಕ್ಕೆ ತೃತೀಯ ಸ್ಥಾನ! ವಿಶ್ವಸಂಸ್ಥೆ ಇತ್ತೀಚೆಗೆ ಹೀಗೆಂದು ಘೋಷಿಸಿಬಿಟ್ಟಿತು. ಆದರೆ, ಇದಕ್ಕೆ “ಅಯ್ಯೋ, ಮೂರನೇ ಸ್ಥಾನವೇ? ಮೊದಲನೆಯದ್ದೇ ಬಂದಿದ್ದರೆ ಒಳ್ಳೆಯದಿತ್ತು’ ಎಂದು ಹಪಹಪಿಸುವ ಹಾಗಿಲ್ಲ. ಏಕೆಂದರೆ, ಇಡೀ ಪ್ರಪಂಚದಲ್ಲಿ ಪತಿಯನ್ನು ಹೊಡೆಯುವ ಪತ್ನಿಯರು ಅತಿ ಹೆಚ್ಚು ಇರುವ ದೇಶಗಳಲ್ಲಿ ನಮ್ಮ ದೇಶಕ್ಕೆ ಮೂರನೇ ಸ್ಥಾನ!

  ಸಾಮಾನ್ಯವಾಗಿ ಹೊಡೆತ- ಬೈಗುಳ ಹೀಗೆ ಯಾವುದೇ ರೂಪದ ಹಿಂಸೆಯಾದರೂ ಮನಸ್ಸಿನಲ್ಲಿ ಮೂಡುವ ಚಿತ್ರ ಸಮಾಜದಲ್ಲಿ ಬಲಶಾಲಿ, ದೈಹಿಕವಾಗಿ ಶಕ್ತನಾದ ಗಂಡ, ಹೆಂಡತಿಯನ್ನು ಹಿಂಸಿಸುವುದು. ಆದರೆ ಹೆಣ್ಣಾಗಲೀ, ಗಂಡಾಗಲೀ ಹಿಂಸೆ ಹಿಂಸೆಯೇ. ಯಾರು ಯಾರನ್ನು ಹಿಂಸಿಸಿದರೂ ಅದು ತಪ್ಪೇ. ಆದರೆ, ಪುರುಷಪ್ರಧಾನ ವ್ಯವಸ್ಥೆ ಇಂದಿಗೂ ಪ್ರಬಲವಾಗಿರುವ ನಮ್ಮ ದೇಶದಲ್ಲಿ ಹೀಗಿರಲು ಸಾಧ್ಯವೇ? ಎಂಬ ಪ್ರಶ್ನೆ ಕಾಡುತ್ತೆ. 

ಪತಿಯನ್ನು ಹೊಡೆಯುವ ಪತ್ನಿಯರು ಅತಿಹೆಚ್ಚು ಅಂದರೆ, ಶೇ.28ರಷ್ಟು ಇರುವ ಈಜಿಪ್ಟ್ನಲ್ಲಿ ಪತಿಯರು ಬೇರೆ ದಾರಿ ಕಾಣದೆ ವಿಚ್ಛೇದನಕ್ಕೆ ಮೊರೆ ಹೋಗುತ್ತಿದ್ದಾರಂತೆ. ಈವರೆಗೆ ಪತ್ನಿಯರಿಂದಾದ ದೌರ್ಜನ್ಯದ ಕಾರಣ ನೀಡಿ ದೂರವಾಗಲು ಬಯಸಿರುವ‌ ಅರ್ಜಿಗಳು 6 ಸಾವಿರ! ಅಷ್ಟಕ್ಕೂ ಪತ್ನಿಯರು ಹೊಡೆಯುವುದು ಕೇವಲ ಕೈ- ಮುಷ್ಟಿಯಿಂದ ಅಲ್ಲವಂತೆ. ಬೆಲ್ಟ್, ಚಾಕು, ಪಿನ್‌, ಪಾತ್ರೆ, ಕತ್ತಿಗಳನ್ನೂ ಬಳಸಿ ಹೊಡೆದಿದ್ದಾರಂತೆ! ದೈಹಿಕವಾಗಿ ಬಲಿಷ್ಠನಾದ ಪತಿ, ಮರು ಆಕ್ರಮಣ ಮಾಡದಂತೆ ತಡೆಯಲು ಅವರಿಗೆ ನಿದ್ದೆ ಮಾತ್ರೆಗಳನ್ನು ಕೊಟ್ಟು, ಮತ್ತು ಬರುವಂತೆ ಮಾಡಿ ನಂತರ ಹೊಡೆಯುತ್ತಾರೆ ಎಂಬುದನ್ನೂ ವರದಿ ತಿಳಿಸಿದೆ! 

ಭಾರತದಲ್ಲಿ ಹೆಚ್ಚುತ್ತಿರುವ ಪತಿಯರ ಮೇಲಿನ‌ ದೌರ್ಜನ್ಯಕ್ಕೆ ಕಾರಣಗಳೇನು? ನಮ್ಮ ಸಮಾಜ ನಿಧಾನವಾಗಿ ಬದಲಾಗುತ್ತಿದೆ; ಆದರೂ ಕೆಳವರ್ಗದ ಜನರಲ್ಲಿ ಅನಕ್ಷರತೆ ಮತ್ತು ಅಜ್ಞಾನ ಪ್ರಮುಖ ಸಮಸ್ಯೆಗಳು. ಇದೇ ಕಾರಣದಿಂದ ಮದುವೆಯನ್ನು ಬೇಗ ಮಾಡುತ್ತಾರೆ. ಪುರುಷರು ಶ್ರಮಜೀವಿಗಳಾದರೂ ಬಲುಬೇಗ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಮಹಿಳೆಯರಿಗೆ ಮದುವೆ, ಮಕ್ಕಳು ಎಲ್ಲವೂ ಹದಿಹರೆಯದಲ್ಲೇ ನಡೆದು, ಇಡೀ ಕುಟುಂಬದ ಹೊಣೆ ಹೊರಬೇಕಾಗುತ್ತದೆ. ಕೆಳವರ್ಗದ ಕುಟುಂಬಗಳಲ್ಲಿ ಪತಿ- ಪತ್ನಿಯರಿಬ್ಬರೂ ಜಗಳವಾಡುವುದು ಅತೀಸಾಮಾನ್ಯ. ಮೊದಮೊದಲು ಪುರುಷರ ಕೂಗಾಟ- ಹೊಡೆತ ಸಹಿಸಿದರೂ ಮಕ್ಕಳಿಗೂ ಅದು ಮುಂದುವರಿದಾಗ ತನ್ನನ್ನು ಮತ್ತು ಮಕ್ಕಳನ್ನು ರಕ್ಷಿಸುವ ಸಲುವಾಗಿ ಹೆಣ್ಣು ಅನಿವಾರ್ಯವಾಗಿ ಗಂಡನನ್ನೇ ಹೊಡೆಯಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಅಂದರೆ, ಅದು ಆತ್ಮರಕ್ಷಣೆಯ ಮಾರ್ಗ. 

Advertisement

ಮಧ್ಯಮ ಮತ್ತು ಮೇಲ್ವರ್ಗದ ಮಹಿಳೆಯರ ವಿದ್ಯಾಭ್ಯಾಸ ಮಟ್ಟ ಹೆಚ್ಚಿದೆ, ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಮನೆ- ಆಫೀಸು, ಒಳಗೆ- ಹೊರಗೆ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ, ನಿಜ. ಆದರೆ, ಮಹಿಳೆಯರ ಕುರಿತಾದ ನಿರೀಕ್ಷೆಗಳೂ ಹೆಚ್ಚಿವೆ. ತನ್ನ ಕನಸನ್ನು ಸಾಧಿಸುವ ಇಚ್ಛೆ, ಸಮಾಜದ ರೂಢಿಗತ ಪಾತ್ರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎರಡೂ ಆಕೆಯದ್ದು. ಹೀಗೆ ಬಹುಪಾತ್ರಗಳನ್ನು ಮಾಡುತ್ತಾ, ತನ್ನ ಶಕ್ತಿ ಮೀರಿ ಕೆಲಸ ಮಾಡತೊಡಗಿದಾಗ ಆಕೆಯ ದೇಹ ದಣಿಯುತ್ತದೆ, ಮನ ಪ್ರಕ್ಷುಬ್ಧವಾಗುತ್ತದೆ. ಪರಿಣಾಮವಾಗಿ ಸಿಟ್ಟು- ಅಸಹನೆ ಮೂಡುತ್ತದೆ. ಅದೆಲ್ಲದರ ಪರಿಣಾಮವೇ ಈ ಗೂಸಾ ಇದ್ದಿರಬಹುದು!

ಪ್ರಕರಣ ಏಕೆ ಬೆಳಕಿಗೆ ಬರುತ್ತಿಲ್ಲ?
– ದೌರ್ಜನ್ಯಕ್ಕೆ ಒಳಗಾಗುವ ಶೇ.60ಕ್ಕೂ ಹೆಚ್ಚು ಪತಿಯಂದಿರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. 
– ಜನರು, ಪತ್ನಿ ಹೊಡೆಯುತ್ತಾಳೆ ಎಂಬುದನ್ನು ನಂಬಲೂ ಸಿದ್ಧರಿಲ್ಲ. 
– ಗಂಡಸಾಗಿ ಹೊಡೆಸಿಕೊಳ್ಳುತ್ತಾನೆ ಎಂಬ ಅಪಹಾಸ್ಯ ಹಬ್ಬಿಬಿಟ್ಟರೆ ಕಷ್ಟ ಅನ್ನೋ ಭಾವ. 
– ಹೆಂಡತಿಗೆ ನಾಲ್ಕು ಬಿಟ್ಟು ಬುದ್ಧಿ ಕಲಿಸಲಾಗದ ಅಸಮರ್ಥ ಎಂಬ ಕನಿಕರ ಬೆರೆತ ತಿರಸ್ಕಾರ ಮೂಡಿದರೆ ಗತಿಯೇನು ಎಂಬ ಚಿಂತೆ.
– ಇದೆಲ್ಲದರ ಬದಲು ಏಟು ತಿಂದು, ಸುಮ್ಮನಿರುವುದೇ ಲೇಸು ಎಂಬ ನಿರ್ಧಾರ ಹೆಚ್ಚಿನವರದ್ದು.

ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?
“ಪತಿ- ಪತ್ನಿಯರು ಪರಸ್ಪರ ಪ್ರೀತಿ- ಗೌರವಗಳಿಂದ ಬಾಳಬೇಕು. ಮಕ್ಕಳಿಗೆ ಮಾದರಿಯಾಗಬೇಕು. ಮದುವೆಯು ಅಧಿಕಾರ ಸ್ಥಾಪಿಸುವ ಹೋರಾಟವಲ್ಲ. ಪರಸ್ಪರ ನಂಬಿಕೆಯಿಂದ ಕೂಡಿ ಬಾಳುವ ಸಂಬಂಧ.  ಭಿನ್ನ ಕುಟುಂಬ-ಹಿನ್ನೆಲೆಯಿಂದ ಬಂದ ಪತಿ- ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಪರಿಹರಿಸಿ ಮುಂದುವರಿಯುವುದು, ಸಂದರ್ಭಕ್ಕೆ ತಕ್ಕಂತೆ ರಾಜಿಯಾಗುವುದು ಉತ್ತಮ. ಮಾನಸಿಕ- ದೈಹಿಕ- ಲೈಂಗಿಕ ಹಿಂಸೆ ಯಾರು ಯಾರಿಗೆ ಮಾಡಿದರೂ ತಪ್ಪು. ಜತೆಗೇ ಸುಮ್ಮನಿದ್ದು ಸಹಿಸುವುದೂ ತಪ್ಪೇ’.

ಬೇರೆ ದಾರಿ ಏನೈತೆ?
ಹೌದಕ್ಕೋ, ಹೊಡಿತೀನಿ, ಏನ್‌ ಮಾಡೋದು? ನಾಲ್ಕು ಮನೇಲಿ ಬೆಳಗ್ಗಿಂದಾ ಕಷ್ಟ ಪಟ್ಟು ಕೂಲಿ ಮಾಡಿಕಾಸು ತರೋಳು ನಾನು. ಮಕ್ಕಳು- ಮರಿಗೆ ಹೊಟ್ಟೆಗೆ ಹಾಕೋಷ್ಟರಲ್ಲಿ ಹೆಣ ಬಿಧ್ದೋಯ್ತದೆ. ಈ ಗಂಡ ಅನ್ನಿಸಿಕೊಂಡೋನು ಒಂದ್‌ ಪೈಸಾ ದುಡೀದೇ ನನ್ನ ಹತ್ರ ಕಾಸು ಕಿತ್ಕೊಂಡು ಕಂಠಮಟ್ಟ ಕುಡಿದು ಬರೋದಲ್ಲದೇ ನಂಗೆ- ಮಕ್ಕಳಿಗೆ ದನಕ್ಕೆ ಹೊಡದ್ಹಂಗೆ ಹೊಡೀತಾನೆ. ಒಂದಿನ- ಎರಡಿªನ ಸಹಿಸಿಕೊಳ್ತೀನಿ. ದಿನಾ ಹಿಂಗಾದ್ರೆ ಹೆಂಗೆ? ತಡೀಲಾರ್ದೆ ಆಗಾಗ ಆ ಯಪ್ಪಂಗೆ ಬಿಡ್ತೀನಿ. ನಾಲ್ಕು ದಿನ ಸರೀ ಇರ್ತಾನೆ, ಮತ್ತೆ ಅದೇ ಕತೆ. ಪಾಪ ಅನ್ನಿಸೆôತೆ, ಆದರೆ, ಬೇರೆ ದಾರಿ ಏನೈತೆ?
– ನಿಂಗಮ್ಮ ಎಚ್‌., ಕೊಡಿಗೆಹಳ್ಳಿ

ಡಾ.ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next