ಬೆಂಗಳೂರು: “ವೈಫ್ ಸ್ವಾಪಿಂಗ್'(ಪತ್ನಿಯರ ಅದಲ-ಬದಲು ಮಾಡುವುದು)ಗೆ ಒಪ್ಪದಿದ್ದಕ್ಕೆ ಪತ್ನಿ ಮೇಲೆ ಬೆಲ್ಟ್ ನಿಂದ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಈರಣ್ಣಗುಡ್ಡ ನಿವಾಸಿ 23 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಆಕೆಯ ಪತಿ ಪೂರ್ಣಚಂದ್ರ, ಆತನ ತಾಯಿ ಮಂಜುಳಾ, ತಂದೆ ಮಂಜುನಾಥ್, ಸಂಬಂಧಿ ಗಳಾದ ಭವ್ಯಾ, ಪ್ರವೀಣ್, ರಂಗಸ್ವಾಮಿ, ಮಂಜಮ್ಮ, ಯೋಗೇಶ್, ಅನಸೂಯ, ನಾಗಮ್ಮ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಪೂರ್ಣಚಂದ್ರ ವರ್ಷದ ಹಿಂದೆ ಸಂತ್ರಸ್ತೆಯನ್ನು ಮದುವೆಯಾಗಿದ್ದು, ದಂಪತಿ ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು. ಈ ವೇಳೆ ಪತಿ ಸೇರಿ ಕುಟುಂಬ ಸದಸ್ಯರು ಸಂತ್ರಸ್ತೆಗೆ ವರದಕ್ಷಿಣಿ ಕಿರುಕುಳ ನೀಡಿದ್ದಾರೆ.
ಇದೇ ವಿಚಾರವಾಗಿ ಪತಿ ಪೂರ್ಣಚಂದ್ರ ಹಲವು ಬಾರಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಮಧ್ಯೆ ಪೂರ್ಣಚಂದ್ರ ಸಹೋದರಿ ಭವ್ಯಾ ಪತಿ ಪ್ರವೀಣ್, ಸಂತ್ರಸ್ತೆ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮತ್ತೂಂದೆಡೆ ಪತಿ ಪೂರ್ಣಚಂದ್ರ, ಅಶ್ಲೀಲ ವಿಡಿಯೋ ತೋರಿಸಿ ಇದೇ ರೀತಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದು, ಹಲವು ಸಲ ಸಂತ್ರಸ್ತೆಗೆ ವಿರುದ್ಧವಾಗಿ ಸಂಪರ್ಕ ಬೆಳೆಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ವೈಫ್ ಸ್ವಾಪಿಂಗ್ ಆರೋಪ: ಈ ಮಧ್ಯೆ ಆರೋಪಿ ಪೂರ್ಣಚಂದ್ರ, ತನ್ನ ಕಂಪನಿಯಲ್ಲಿ ವೈಫ್ ಸ್ವಾಪಿಂಗ್ ಪದ್ಧತಿ ಇದೆ. ಹೀಗಾಗಿ “ನೀನು ಕೂಡ ನನ್ನ ಸ್ನೇಹಿತರ ಜತೆ ದೈಹಿಕ ಸಂಪರ್ಕ ಬೆಳೆಸಬೇಕು’ ಎಂದು ಒತ್ತಾ ಯಿಸಿದ್ದಾನೆ. ಅದಕ್ಕೆ ಒಪ್ಪದಿದ್ದಾಗ, ಬೆಲ್ಟ್ ನಿಂದ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಉಸಿರುಗಟ್ಟಿಸಿ ಕೊಲೆಗೂ ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡು ಸಂತ್ರಸ್ತೆಗೆ ದಾಖಲೆ ನೀಡುವಂತೆ ನೋಟಿಸ್ ಕೊಡಲಾಗಿದೆ ಎಂದು ಪೊಲೀಸರು ಹೇಳಿದರು.