Advertisement

Udupi ಜಿಲ್ಲಾದ್ಯಂತ ವ್ಯಾಪಕ ಮಳೆ; ಹಾಲಾಡಿ ಬಳಿ ಗುಡ್ಡ ಕುಸಿತ

03:27 AM Aug 01, 2024 | Team Udayavani |

ಉಡುಪಿ: ಜಿಲ್ಲಾದ್ಯಂತ ಮಂಗಳವಾರ ತಡರಾತ್ರಿ, ಬುಧವಾರ ಮಳೆ ಬಿರುಸುಗೊಂಡಿದ್ದು, ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ.

Advertisement

ಶಾಲೆಗಳಿಗೆ ರಜೆ
ಗುರುವಾರ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿವರೆಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬುಧವಾರ ಹಲವೆಡೆ ಹೆಚ್ಚು ಮಳೆಯಾಗುತ್ತಿದ್ದರಿಂದ ಉಡುಪಿ, ಕಾಪು, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ರಜೆ ಘೋಷಿಸಲಾಗಿತ್ತು.

ಕುಂದಾಪುರ, ಕಾರ್ಕಳ, ಉಡುಪಿ ಸುತ್ತಮುತ್ತಲೂ ವ್ಯಾಪಕ ಮಳೆಯಾಗುತ್ತಿದ್ದು, ಕಾರ್ಕಳದಲ್ಲಿ ಮುಂಡ್ಲಿ, ಬಜಗೋಳಿ, ಮಿಯಾರು, ರೆಂಜಾಲ, ಕುಂದಾಪುರ ಭಾಗದಲ್ಲಿ ಪಡುಕೋಣೆ, ಮರವಂತೆ, ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಣಿಪಾಲ, ಮಲ್ಪೆ, ಕಾಪು, ಬ್ರಹ್ಮಾವರ ಸುತ್ತಮುತ್ತ ಮಧ್ಯಾಹ್ನ ಅನಂತರ ಎಡಬಿಡದೆ ಮಳೆ ಸುರಿದಿದೆ.

ವಾರಾಹಿ, ಸ್ವರ್ಣಾ, ಸೀತಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನತೆ ನೆರೆ ಆತಂಕದಲ್ಲಿದ್ದಾರೆ.ಕಾರ್ಕಳ ಮುಂಡ್ಕೂರು, ಈದು, ಕಾಪು ತಾಲೂಕಿನ ಪಡು, ಬ್ರಹ್ಮಾವರ ತಾಲೂಕಿನಲ್ಲಿ ಹಲುವಳ್ಳಿ, ವಾರಂಬಳ್ಳಿ, ಕುಂದಾ‌ಪುರ ತಾಲೂಕಿನ ಕೊಡ್ಲಾಡಿ, ಕಟ್‌ಬೆಲೂ¤ರು, ರಟ್ಟಾಡಿ, ಹಟ್ಟಿಯಂಗಡಿ ಭಾಗದಲ್ಲಿ ಗಾಳಿ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದೆ.

ಕಡಲಿನಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರಿದಿದ್ದು. ಜಿಲ್ಲೆಯ ಬೈಂದೂರು, ಕುಂದಾಪುರ, ಮಲ್ಪೆ, ಕಾಪು, ಪಡುಬಿದ್ರಿ ಭಾಗದ ಕಡಲತೀರ ಪ್ರಕ್ಷುಬ್ಧವಾಗಿದ್ದು, ಬೃಹತ್‌ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ 96.9 ಮಿ. ಮೀ. ಸರಾಸರಿ ಮಳೆಯಾಗಿದೆ.

Advertisement

ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ
ಹಾಲಾಡಿ ಬಳಿ ಗುಡ್ಡ ಕುಸಿತ
ಕುಂದಾಪುರ: ಬೈಂದೂರು – ಹೆಬ್ರಿ – ವಿರಾಜಪೇಟೆ ರಾಜ್ಯ ಹೆದ್ದಾರಿಯ ಹಾಲಾಡಿ ಸಮೀಪದ ಕಾಸಾಡಿಯ ತಿರುವಿನಲ್ಲಿ ಬುಧವಾರ ಗುಡ್ಡ ಕುಸಿದು, ದೊಡ್ಡ ಬಂಡೆಕಲ್ಲುಗಳು, ಭಾರೀ ಪ್ರಮಾಣದ ಮಣ್ಣಿನ ರಾಶಿಯು ರಸ್ತೆಯಂಚಿಗೆ ಬಂದು ನಿಂತಿದೆ.
ನಿರಂತರ ಮಳೆಯಿಂದಾಗಿ ಹಾಲಾಡಿ ಸಮೀಪದ ಕಾಸಾಡಿ ತಿರುವಿನಲ್ಲಿ ಗುಡ್ಡ ಕುಸಿದಿದೆ.

ಈ ರಾಜ್ಯ ಹೆದ್ದಾರಿಯ ಕಾಸಾಡಿ ತಿರುವಿನಲ್ಲಿ ಎರಡು ವರ್ಷಗಳಿಂದ 500 ಮೀ. ನಷ್ಟು ದೂರದವರೆಗೆ ನಿರಂತರವಾಗಿ ಕುಸಿಯಲು ಆರಂಭಗೊಂಡಿದ್ದು, ಈ ಬಾರಿಯ ಅಬ್ಬರದ ಮಳೆಗೆ ಇನ್ನಷ್ಟು ಕುಸಿಯುವ ಸಂಭವವಿದೆ. ಮುನ್ನಚ್ಚರಿಕೆ ವಹಿಸದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ.

ಪ್ರಮುಖ ಹೆದ್ದಾರಿ
ಈ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖ ಯಾತ್ರಾ ಸ್ಥಳಗಳಾದ ಕೊಲ್ಲೂರು ಹಾಗೂ ಶೃಂಗೇರಿ ಸಂಪರ್ಕಿಸುವ ಕೊಂಡಿಯೂ ಹೌದು. ಕುಂದಾಪುರದಿಂದ ಹೆಬ್ರಿ, ಆಗುಂಬೆ, ಶೃಂಗೇರಿ ಕಡೆಗೆ ಸಂಪರ್ಕ ಕಲ್ಪಿಸಲು ಇದೇ ಪ್ರಮುಖ ಮಾರ್ಗವಾಗಿದೆ.

ಎಚ್ಚರಿಸಿತ್ತು ಉದಯವಾಣಿ
ಈ ಕಾಸಾಡಿ ಗುಡ್ಡ ಕುಸಿಯುವ ಕುರಿತಂತೆ, ಶಾಶ್ವತ ತಡೆಗೋಡೆ ನಿರ್ಮಿಸಬೇಕಾಗಿದೆ ಎಂದು ಉದಯವಾಣಿಯು ಮೇ 12ರಂದು ವಿಶೇಷ ವರದಿ ಪ್ರಕಟಿಸಿ, ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next