Advertisement
ತುಮಕೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾನೂನು ಮತ್ತು ಎನ್‌ಆರ್‌ಸಿ ವಿರೋಧಿಸಿ ವಿವಿಧ ಸಂಘಟನೆ ಒಳಗೊಂಡ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾವಿರಾರು ಹಿಂದೂ-ಮುಸ್ಲಿಮರು ಸೇರಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಮಂತ್ರಿ ಅಮಿತ್ ಶಾ ವಿರುದ್ಧ ಹರಿಹಾಯ್ದರು.
Related Articles
Advertisement
ಸಂವಿಧಾನದ ತತ್ವಕ್ಕೆ ಧಕ್ಕೆ: ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳುಗಳ ಭರವಸೆ ನೀಡಿ ದೇಶದ ಅಭಿವೃದ್ಧಿ ಕಡೆಗಣಿಸಿದೆ. ಸಂವಿಧಾನದ ತತ್ವಕ್ಕೆ ಧಕ್ಕೆ ತರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ದಲಿತ ಸಂಘಟನೆ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿ, ಮುಸ್ಲಿಮರು ಮಾತ್ರವಲ್ಲದೇ ದಲಿತ ಸಮುದಾಯವೂ ಈ ಕಾನೂನಿನಿಂದ ಕಷ್ಟಕ್ಕೆ ಸಿಲುಕಲಿದ್ದು, ಶಾಂತಿ ಸೌಹಾರ್ದತೆ ನಾಡಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಬದ್ಧ ಹಕ್ಕು ಕಸಿಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನಷ್ಟೇ ಅಲ್ಲ, ನೋಟು ಅಮಾನ್ಯಿಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡುವ ಮೂಲಕ ಜನರಿಗೆ ದ್ರೋಹ ಬಗೆದಿದೆ. ಆ ಮೂಲಕ ತಮ್ಮ ಗುಪ್ತ ಅಜೆಂಡಾ ಅನುಷ್ಠಾನಕ್ಕೆ ತಂದಿದೆ. ಆದ್ದರಿಂದ ದುಡಿಯುವ ಜನ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ಕುಮಾರ್ ಗೌಡ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಗಡಿಪಾರಾಗಿದ್ದ ಅಮಿತ್ ಶಾ ಗೃಹಮಂತ್ರಿಯಾಗಿರುವುದು ದೇಶದ ದುರ್ದೈವ. ಹಿಂದೂ, ಮುಸ್ಲಿಮರನ್ನು ಒಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಮುಖಂಡ ನಿರಂಜನ್ ಮಾತನಾಡಿ, ಪಂಕ್ಚರ್ ಹಾಕುವ ಎದೆಗಳಲ್ಲಿ ಇರುವುದು ಪ್ರೀತಿಯೇ ಹೊರತು ಅಕ್ಷರ ಮಾತ್ರವಲ್ಲ. ಬಡವರ ತುತ್ಛವಾಗಿ ಕಾಣುವುದು ಮತ್ತು ದುರಂಹಕಾರದ ಮಾತು ಕೇಂದ್ರದಲ್ಲಿರುವವರು ಬದಲಿಸಿಕೊಳ್ಳಬೇಕು ಎಂದರು.
ಶಾಸಕ ಡಿ.ಸಿ ಗೌರೀಶಂಕರ್, ಮಾಜಿ ಮೇಯರ್ ಅಸ್ಲಾಂ ಪಾಷಾ, ಪಾಲಿಕೆ ಸದಸ್ಯ ನಯಾಜ್ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ, ಫಾ. ರೆವರೆಂಡ್ ಎಲಿಸ್ ದೇವನ್, ಮೌಲ್ವಿ ಉಮರ್ ಅನ್ಸಾರಿ ಮಾತನಾಡಿದರು. ವೇಲ್ಫೆರ್ ಪಾರ್ಟಿಯ ತಾಜುದ್ದೀನ್, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಮುಖಂಡ ಸಾಕೇತ್ ರಾಜನ್, ಜಿಯಾಉರ್ ರೆಹಮಾನ್, ಮುದಾಸೀರ್, ಶಮೀಲ್, ರಾಯಿಲ್, ಕನ್ನಡ ಸಂಘಟನೆಯ ಅರುಣ್,
ಭೀಮಸೇನೆ ಗಣೇಶ್ ಮುಸ್ಲಿಂ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಕಾರ್ಯದರ್ಶಿ ಅಯಾಜ್ ಉಬೇದುಲ್ಲಾ, ಇನಾಮುಲ್ಲಾ, ಅನೀಫ್ ಉಲ್ಲಾ, ಹಿಂದೂಸ್ತಾನ ಫಯಾಜ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಜೀಬ್ ಮಾಡಿದ್ದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಡಾ. ಕೆ ರಾಕೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಅಭಿನಂದಿಸಿದರು. ನಿಮ್ಮ ಮನವಿ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಅರೇ ಸುನ್‌ಲೇ ಮೋದಿ, ಶಾ…: ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಸಾವಿರಾರು ಜನರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಕಾಯ್ದೆ ವಾಪಸ್ ತೆಗದುಕೊಳ್ಳುವಂತೆ ಆಗ್ರಹಿಸಿದರು. ಅರೇ ಸುನ್‌ಲೇ ಮೋದಿ, ಅರೇ ಸುನ್‌ಲೇ ಅಮಿತ್ ಶಾ (ಕೇಳಿಸಿಕೋ ಮೋದಿ, ಕೇಳಿಸಿಕೋ ಅಮಿತ್ ಶಾ) ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದರು. ಸುಮಾರು ಎರಡು ಗಂಟೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾರಾಜಿಸಿದ ರಾಷ್ಟ್ರಧ್ವಜ: ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು. ಹಿಂದೂ-ಮುಸ್ಲಿಂ ಏಕ್ ಹೈ ಎಂದು ಘೋಷಣೆ ಕೂಗುತಿದ್ದರು. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬರೀ ರಾಷ್ಟ್ರಧ್ವಜಗಳೇ ಕಣ್ಣಿಗೆ ಕಾಣಿಸುತಿತ್ತು.
ಅತ್ಯಂತ ಶಾಂತಿ ಮತ್ತು ಶಿಸ್ತಿಗೆ ಪ್ರತಿಭಟನೆ ಸಾಕ್ಷಿಯಾಗಿತ್ತು. ಪ್ರಧಾನಿ ಮತ್ತು ಗೃಹ ಸಚಿವರಿಗೆ ಏಕ ವಚನದಲ್ಲಿ ವಾಗ್ಧಾಳಿ ನಡೆಸಿದ್ದು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರು. ಸಮಯಕ್ಕೆ ಸರಿಯಾಗಿ ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆ ಸುತ್ತ ಮುತ್ತ ಅಲ್ಲಲ್ಲಿ ಸ್ವಯಂ ಸೇವಕರ ನೇಮಿಸಿಕೊಂಡು ಗಲಾಟೆ, ನೂಕುನುಗ್ಗಲು ಉಂಟಾಗಂದಂತೆ ಜಾಗೃತಿ ವಹಿಸಿದ್ದರು. ಪೊಲೀಸರು ನಗರದ ಎಲ್ಲಾ ಕಡೆ ಬಿಗಿ ಭದ್ರತೆ ಒದಗಿಸಿದ್ದರು. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋ. ನಂ.ವಂಶಿಕೃಷ್ಣ, ಎಎಸ್‌ಪಿ ಉದೇಶ್, ಡಿವೈಎಸ್‌ಪಿ ತಿಪ್ಪೇಸ್ವಾಮಿ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ವಹಿಸಿದ್ದರು.
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಅರ್‌ಸಿಯನ್ನು ಜಾರಿಗೆ ತರುವ ಮುನ್ನ ಸರ್ವಧರ್ಮ ಗುರುಗಳನ್ನು ಕರೆದು ಚರ್ಚಿಸಬೇಕಾಗಿತ್ತು. ಮೋದಿ ಮತ್ತು ಅಮಿತ್ ಶಾ ಜನರ ಮೇಲೆ ಕಾಯ್ದೆ ಮೂಲಕ ದರ್ಪ ಮಾಡುತ್ತಿದ್ದಾರೆ. ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು. ಸಂಸದ ತೇಜಸ್ವಿ ಸೂರ್ಯ ಬಡವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಎದೆ ಸೀಳಿದರೆ ಒಂದಕ್ಷರ ಇಲ್ಲ, ಪಂಕ್ಚರ್ ಹಾಕುವವರು ಎಂದು ಮುಸ್ಲಿಂರ ಬಗ್ಗೆ ಕೀಳು ಮಾತನಾಡಿದ್ದಾರೆ. ಬಡವರ ನೋವು ಅವರಿಗೆ ತಿಳಿದಿಲ್ಲ.-ಡಿ.ಸಿ.ಗೌರಿಶಂಕರ್, ಗ್ರಾಮಾಂತರ ಶಾಸಕ ದೇಶದಲ್ಲಿ ತರುತ್ತಿರುವ ಕಾನೂನುಗಳು ಜನಪರವಾಗಿರದೆ ಜನರ ಒಡೆದು ಆಳುವ ನೀತಿಗೆ ಪೂರಕವಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳಿಕೆ ಗಮನಿಸಿದರೆ ಸರ್ಕಾರದ ದ್ವಂದ್ವ ತಿಳಿಯುತ್ತದೆ.
-ಸಿ.ಯತಿರಾಜ್, ಪರಿಸರವಾದಿ ಒಂದು ಕೋಮಿನ ಜನರಷ್ಟೇ ಅಲ್ಲ, ದೇಶದ ಬುಡಕಟ್ಟು, ಆದಿವಾಸಿಗಳು ಬಡವರೂ ಸಂಕಟಕ್ಕೆ ಒಳಗಾಗುವ ಪರಿಸ್ಥಿತಿ ಬಂದಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿ ಹೋರಾಟದ ಹಕ್ಕು ಕಸಿದುಕೊಳ್ಳುವುದು ಸಂವಿಧಾನ ವಿರೋಧಿಯಾಗಿದೆ. ಜನರು ಆತಂಕದಲ್ಲಿ ಬದುಕುವಂತೆ ಮಾಡಿ ಅಧಿಕಾರ ಭದ್ರಪಡಿಸಿಕೊಳ್ಳುವವರನ್ನು ಜನತೆ ಹಿಮ್ಮೆಟ್ಟಿಸಬೇಕು.
-ಕೆ.ದೊರೈರಾಜು, ಜನಪರ ಚಿಂತಕ