Advertisement

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವ್ಯಾಪಕ ಭ್ರಷ್ಟಾಚಾರ

09:23 PM Jul 20, 2019 | Lakshmi GovindaRaj |

ಚನ್ನರಾಯಪಟ್ಟಣ: ರೈತರ ಸಾಲಮನ್ನಾ ಹಣ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳ ಪಾಲಾಗುತ್ತಿದ್ದು ರೈತರಿಗೆ ಸರಿಯಾಗಿ ತಲುಪುತ್ತಿಲ್ಲವೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಆರೋಪಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು, ಸಿದ್ದರಾಮಯ್ಯ ಸರ್ಕಾರ ಹಾಗೂ ರಾಜ್ಯದ ಮೈತ್ರಿ ಸರ್ಕಾರ ರೈತರ ಏಳಿಗೆಗಾಗಿ ಸಾಲಮನ್ನಾ ಮಾಡಿದರೆ ಇದನ್ನು ರೈತರಿಗೆ ತಲುಪಿಸದೇ ಕಾರ್ಯದರ್ಶಿಗಳು ತಮ್ಮ ಜೋಬಿಗೆ ಇಳಿಸಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Advertisement

ಅವ್ಯವಹಾರ ತನಿಖೆಯಾಗಲಿ: ಸದಸ್ಯ ಶ್ರೇಯಸ್‌ ಎಂ. ಪಟೇಲ್‌ ಅಧ್ಯಕ್ಷರ ಮಾತಿಗೆ ಧ್ವನಿ ಗೂಡಿಸಿ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಆನೆಕೆರೆ ಹಾಗೂ ಕಾಚೇಹಳ್ಳಿ ಸೇರಿದಂತೆ ವಿವಿಧ ಸಹಾರ ಸಂಘಗಳ ಬಗ್ಗೆ ತನಿಖೆ ನಡೆಸಿದರೆ ಅಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಲು ಜೈಲು ಪಾಲಾಗುತ್ತಾರೆ. ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಹೋಬಳಿಯಲ್ಲಿ ಒಂದು ಪಕ್ಷದ ಕಾರ್ಯಕರ್ತರಿಗೆ ಸಾಲ ನೀಡಲಾಗಿದೆ. ಒಂದು ಮನೆಯಲ್ಲಿ ಎರಡ್ಮೂರು ಜನರಿಗೆ ಸಾಲ ನೀಡುವ ಮೂಲಕ ಪ್ರಮಾಣಿಕ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸಭೆ ಗಮನಕ್ಕೆ ತಂದರು.

ರೈತರ ಪರವಾಗಿ ಕೆಲಸ ಮಾಡಿ: ಸಭೆಯಲ್ಲಿ ಹಾಜರಿದ್ದ ಸಹಕಾರ ಇಲಾಖೆ ಅಧಿಕಾರಿಗಳನ್ನು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡು, ನೀವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ರೈತರ ಶಾಪ ಒಳ್ಳೆಯದಲ್ಲ. ಅಧಿಕಾರ ಇರುವವರ ಮಾತು ಕೇಳಿ ನಿಮ್ಮ ಕೆಲಸಕ್ಕೆ ಕುತ್ತು ತೊಂದುಕೊಳ್ಳಬೇಡಿ. ಕುಂದೂರು ಸಹಕಾರ ಸಂಘದಲ್ಲಿಯೂ ಇದೇ ಅಕ್ರಮ ಮಾಡಿದ್ದರಿಂದ ಸೂಪರ್‌ಸೀಡ್‌ ಮಾಡಲಾಗಿದೆ. ಸಂಘದ ಕಾರ್ಯದರ್ಶಿಗಳು ಕೆಲ ರಾಜಕಾರಣಿ ಹಿಂದೆ ಸುತ್ತುವುದನ್ನು ಬಿಟ್ಟು ರೈತರ ಪರವಾಗಿ ಕೆಲಸ ಮಾಡಿ ಎಂದು ಆದೇಶಿಸಿದರು.

ಜನರ ವಿಶ್ವಾಸಕ್ಕೆ ಧಕ್ಕೆ ತರಬೇಡಿ: ಹೋಬಳಿಯಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ದೇವರೇ ಬುದ್ದಿ ಕಲಿಸುತ್ತಾನೆ ಅಧಿಕಾರ ಶಾಶ್ವತವಲ್ಲ. ಜನರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು, ಸೇಡಿನ ರಾಜಕೀಯ ಮಾಡುವ ಮೂಲಕ ಅಮಾಯಕರ ಬಾಳಿನಲ್ಲಿ ಆಟವಾಡುವುದು ಹೆಚ್ಚು ದಿವಸ ನಡೆಯುವುದಿಲ್ಲ, ಕಾಲಚಕ್ರ ತಿರುಗುತ್ತಿರುತ್ತದೆ ಮೇಲಿದ್ದವ ಕೆಳಗೆ ಬರಲೇಬೇಕು ಎಂದು ಕಿಡಿಕಾರಿದರು.

ಕೃಷಿ ಅಭಿಯಾನದ ಉದ್ದೇಶವೇನು?: ತಾಪಂ ಸದಸ್ಯ ರಾಮಕೃಷ್ಣೇಗೌಡ ಮಾತನಾಡಿ, ಕೃಷಿ ಅಭಿಯಾನ ಯೋಜನೆ ಉದ್ದೇಶವೇನು? ಒಂದು ವಾಹನಕ್ಕೆ ಹಸಿರು ಫ್ಲೆಕ್ಸ್‌ ಹಾಕಿ ಮೈಕಿನಲ್ಲಿ ಮಾಹಿತಿ ನೀಡಲು ತಿಳಿಸಿದೆಯಾ? ಇಲ್ಲ ವೇ ವಾಹನದ ಜೊತೆ ಅಧಿಕಾರಿಗಲು ಹಾಜರಿದ್ದು ರೈತರಿಗೆ ಮಾಹಿತಿ ನೀಡುವಂತೆ ಹೇಳಿದೆಯಾ ತಿಳಿಸಿ. ಅಧಿಕಾರಿಗಳು ತಮ್ಮ ಕೆಲಸ ಸುಲಭ ಮಾಡಿಕೊಳ್ಳಲು ಇಲಾಖೆ ಮಾಹಿತಿಯನ್ನು ರೆಕಾರ್ಡ್‌ ಮಾಡಿ ಮೈಕಿನಲ್ಲಿ ಹಾಕಿದ್ದಾರೆ. ರೈತರಿಗೆ ಸಂಶಯ ಬಂದರೆ ಯಾರನ್ನು ಕೇಳಬೇಕು, ಸರ್ಕಾರದ ಹಣ ವೆಚ್ಚ ಮಾಡಲು ಅನ್ಯ ಮಾರ್ಗ ಹಿಡಿಯಲಾಗಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡದರು.

Advertisement

ಕೃಷಿ ಅಭಿಯಾನಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಸಭಾ ಕಾಯಕ್ರಮ ಮಾಡದೇ ಕೇವಲ ಕೃಷಿ ರಥ ಸಂಚಾರ ಮಾಡುವ ಮೂಲಕ ಅಭಿಯಾನದ ಮೂಲಕ ಉದ್ದೇಶವನ್ನು ದಾರಿ ತಪ್ಪಿಸಲಾಗುತ್ತಿದೆ. ದಂಡಿಗನಹಳ್ಳಿ, ಹಿರೀಸಾವೆ ಹಾಗೂ ನುಗ್ಗೇಹಳ್ಳಿ ಹೋಬಳಿಯಲ್ಲಿ ಸಭಾ ಕಾರ್ಯಕ್ರಮ ಮಾಡದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಜಿಪಂ ಅಧ್ಯಕ್ಷೆ ಶ್ವೇತಾ ಮಾಡನಾಡಿ ರೈತರಿಗೆ ಸಮೀಪದ ಇಲಾಖೆಯ ಅಧಿಕಾರಿಗಳು ಕೃಷಿಕರಿಗೆ ಸರಿಯಾಗಿ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರೈತರ ಸಭೆ ಮಾಡಬೇಕು ಎಂದು ಆದೇಶಿದರು.

ಶೂನ್ಯ ಬಂಡವಾಳ ಕೃಷಿ: ಕೃಷಿ ಇಲಾಖೆ ಸಹಾಯ ನಿರ್ದೇಶಕ ಗುರುಸಿದ್ದಪ್ಪ ಮಾತನಾಡಿ, ಕೃಷಿ ಅಭಿಯಾನದ ಸಭಾ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ತಾಲೂಕಿನ ರೈತರ ಮನವೊಲಿಸಿ ಸುಮಾರು 211 ಹೆಕ್ಟೇರ್‌ ಪ್ರದೇಶದಲ್ಲಿ ಶೂನ್ಯ ಬಂಡವಾಳದಲ್ಲಿ ಸಾವಯವ ಕೃಷಿ ಮಾಡಲು ಮುಂದಾಗುತ್ತಿದ್ದೇವೆ| ಫ‌ಲಸ್‌ ಬೀಮಾ ವಿಮಾ ಹಣ ಮುಂದಿನ ವಾರದಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದು ಉತ್ತರಿಸಿದರು.

ಆರೋಗ್ಯ ಕೇಂದ್ರದಲ್ಲಿ ಹಣ ವಸೂಲಿ: ಜಿಪಂ ಸದಸ್ಯ ದೇವೀರಮ್ಮ ಮಾತನಾಡಿ, ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಉಚಿತ ಔಷಧಿ ನೀಡದೇ ಮೆಡಿಕಲ್‌ ಅಂಗಡಿಗೆ ಚೀಟಿ ಬರೆಯಲಾಗುತ್ತಿದೆ ಇದನ್ನು ತಪ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಜೆನರಿಕ್‌ ಮಳಿಗೆ ಅರಿವು ಮೂಡಿಸಿ: ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರಕುಮಾರ್‌ ಮಾತನಾಡಿ ರೋಗಿಗಳಿಗೆ ಜನರಿಕ್‌ ಮೆಡಿಕಲ್‌ನಲ್ಲಿ ಔಷಧಿ ಪಡೆಯುಂತೆ ತಿಳಿಸಿದರು ಅವರು ಪಡೆಯುತ್ತಿಲ್ಲ. ಖಾಸಗಿ ಔಷಧಿ ಅಂಗಡಿಯಲ್ಲಿ ಪಡೆಯುತ್ತಾರೆ ದರು. ಜಿಪಂ ಸದಸ್ಯೆ ಮಂಜುಳಾ ಮಾತನಾಡಿ, ವೈದ್ಯರು ಈ ಬಗ್ಗೆ ಅರಿವು ಮೂಡಿಸದೇ ಇರುವುದರಿಂದ ರೋಗಿಗಳು ತೆಗೆದುಕೊಳ್ಳುತ್ತಿಲ್ಲ, ಖಾಸಗಿ ಆಸ್ಪತ್ರೆಯಲ್ಲಿ ಜನರಿಕ್‌ ಔಷಧಿಯನ್ನು ತೆಗೆದುಕೊಳ್ಳುವು ಬೇಡ ಎಂದು ರೋಗಿಗಳಿಗೆ ನಿರ್ದೇಶನ ನೀಡುತ್ತಾರೆ. ಈ ಬಗ್ಗೆ ಮೊದಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌.ಚಂದ್ರಶೇಖರ್‌, ಜಿಪಂ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ ಮೊದಲಾದವರು ಉಪಸ್ಥಿತರಿದ್ದರು.

ಭ್ರಷ್ಟರನ್ನು ವಜಾ ಮಾಡಿ: ತಾಲೂಕು ಪಂಚಾಯಿತಿ ಅಧ್ಯಕ್ಷೆ ರಂಜಿತಾ ಮಾತನಾಡಿ, ಗೌಡಗೆರೆ ಹಾಗೂ ಮತಿಘಟ್ಟ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ಮಾಡಿ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು. ಕೆಲ ರೈತರು ಧೈರ್ಯ ಮಾಡಿದ್ದರಿಂದ ಅಲ್ಲಿನ ಅಕ್ರಮ ಬೆಳಕಿಗೆ ಬಂದಿದೆ. ತಾಲೂಕಿನ 38 ಸಹಕಾರ ಸಂಘದಲ್ಲಿಯೂ ಇದೇ ಮಾದರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಗಳ ಅಶಿಸ್ತು: ಸಭೆ ನಡೆಯುತ್ತಿದ್ದರೂ ಅಧಿಕಾರಿಗಳು ತಮ್ಮ ಇಲಾಖೆ ವರದಿಯನ್ನು ಸಭೆಗೆ ಮಂಡಿಸಿದ ಮೇಲೆ ಸಭಾಂಗಣದಿಂದ ತೆರೆಳುತ್ತಿದ್ದಾರೆ ಇದು ಅವರ ಅಶಿಸ್ತನ್ನು ತೋರುತ್ತದೆ. ಈ ರೀತಿ ಸಭೆಯ ಮಧ್ಯದಲ್ಲಿ ಎದ್ದು ಹೋಗುವುದನ್ನು ತರವಲ್ಲ ಮೊದಲು ಅಧಿಕಾರಿಗಳಿಗೆ ಶಿಸ್ತು ಕಲಿಸಬೇಕು ಸಭೆ ಮುಕ್ತಾಯ ಆಗುವವರೆಗೆ ಇರುವುತಂತೆ ತಿಳಿಸುವಂತೆ ಜಿಪಂ ಅಧ್ಯಕ್ಷ ಶ್ವೇತಾ ತಾಲೂಕು ಪಂಚಾಯಿತಿ ಇಒಗೆ ಆದೇಶಿದರು.

Advertisement

Udayavani is now on Telegram. Click here to join our channel and stay updated with the latest news.

Next