Advertisement

ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌ನಲ್ಲಿ ವ್ಯಾಪಕ ಪ್ರಚಾರ

01:01 PM Apr 12, 2019 | Team Udayavani |

ಜೇವರ್ಗಿ: ಕೆಂಡದಂತಹ ಬಿಸಿಲಿಗಿಂತ ಲೋಕಸಭೆ ಚುನಾವಣೆಯ ಕಾವು ದಿನೇ
ದಿನೇ ಹೆಚ್ಚಾಗುತ್ತಿದೆ. ನಾಮಪತ್ರ ಸಲ್ಲಿಸುವ, ವಾಪಸ್‌ ಪಡೆಯುವ ಪ್ರಕ್ರಿಯೇ
ಮುಗಿದಿದ್ದು, ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಜಿದ್ದಾಜಿದ್ದಿನ ಪ್ರಚಾರಕ್ಕೆ ಮುಂದಾಗಿವೆ.

Advertisement

ಪ್ರತಿ ಚುನಾವಣೆಗಿಂತ ಈ ಚುನಾವಣೆ ಪ್ರಚಾರ ವಿಭಿನ್ನವಾಗಿದ್ದು, ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಭಿತ್ತಿ ಪತ್ರಗಳನ್ನು ಕೈಬಿಟ್ಟು ಸೋಶಿಯಲ್‌
ಮೀಡಿಯಾದ ಮೂಲಕ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ .
ಕಾಂಗ್ರೆಸ್‌ ಅಭ್ಯರ್ಥಿ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ,
ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ಫೇಸ್‌ ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌ ಖಾತೆಗಳನ್ನು ತೆರೆದು ಮತಯಾಚನೆ ಮಾಡುತ್ತಿದ್ದಾರೆ.

ಕಲಬುರಗಿ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣವನ್ನು
ಸಮರ್ಥವಾಗಿ ಬಳಸುವ ಮೂಲಕ ಕಡಿಮೆ ಖರ್ಚು, ಹೆಚ್ಚು ಶ್ರಮವಿಲ್ಲದೇ ಪರಿಣಾಮಕಾರಿಯಾಗಿ ಪ್ರಚಾರದ ಕೆಲಸವನ್ನು ಸದ್ದಿಲ್ಲದೇ ಮಾಡಲಾಗುತ್ತಿದೆ. ಕಳೆದ ಹಿಂದಿನ ಎಲ್ಲ ಚುನಾವಣೆಗಿಂತಲೂ ಈ ಚುನಾವಣೆ ತುರುಸಿನಿಂದ ಕೂಡಿದೆ. ಕಾಂಗ್ರೆಸ್‌ ನ ಸೋಲಿಲ್ಲದ ಸರದಾರ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಕೊನೆ ಚುನಾವಣೆ ಎಂದೇ ಹೇಳಲಾಗುತ್ತಿದ್ದು, ಚಿಂಚೋಳಿ ಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಖರ್ಗೆ ಅವರಿಗೆ ಪ್ರತಿಸ್ಪರ್ಧಿಯಾಗಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಅಲ್ಲದೇ ಡಾ| ಖರ್ಗೆ ಅವರ ಪರಮಾಪ್ತ ಮಾಜಿ ಸಚಿವ ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಬಿಜೆಪಿ ಸೇರ್ಪಡೆಯಾದರೇ, ಬಾಬುರಾವ ಚವ್ಹಾಣ, ಕೆ.ಬಿ. ಶಾಣಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದರಿಂದ ಕಣ ಮತ್ತಷ್ಟು ರಂಗೇರಿದೆ.

ಕಾಂಗ್ರೆಸ್‌ ಕಲಬುರಗಿಗಾಗಿ ಖರ್ಗೆ, ಬಿಜೆಪಿ ಫಿರ್‌ ಸೇ ಮೋದಿ ಎನ್ನುವ ಸ್ಲೋಗನ್‌
ಜೊತೆ ಎರಡು ಪಕ್ಷಗಳು ಕೇಂದ್ರ ಸರ್ಕಾರದ ಸಾಧನೆ ಹಾಗೂ ಕಳೆದ ಯುಪಿಎ
ಸರ್ಕಾರದ ಸಾಧನೆ ಕುರಿತು ಪ್ರಚಾರ ನಡೆಸಿ ಯುವ ಮತದಾರರನ್ನು ಸೆಳೆಯುವ
ಪ್ರಯತ್ನ ಮಾಡುತ್ತಿದೆ.

ಚುನಾವಣೆ ಆಯೋಗ ಪ್ರಚಾರದ ಕುರಿತು ಕಠಿಣ ಕ್ರಮ, ನಿಯಮಗಳನ್ನು
ಜಾರಿಗೆ ತಂದಿರುವುದರಿಂದ ಬ್ಯಾನರ್‌, ಫ್ಲೆಕ್ಸ್‌, ಕಟೌಟ್‌, ಲೌಡ್‌ ಸ್ಪೀಕರ್‌ಗಳಿಗೆ
ಕಡಿವಾಣ ಬಿದ್ದಿದೆ. ಯಾವುದೇ ವಸ್ತುಗಳನ್ನು ಪ್ರಚಾರಕ್ಕೆ ಬಳಸಬೇಕಾದರೆ
ಚುನಾವಣಾ ಆಯೋಗದ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು. ಹೀಗಾಗಿ ಕಣದಲ್ಲಿರುವ ಬೆಂಬಲಿಗರು ಪ್ರಚಾರಕ್ಕಾಗಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌ ಮೂಲಕ ಸುಲಭ ಮಾರ್ಗ ಕಂಡುಹಿಡಿದು ಕೊಂಡಿದ್ದಾರೆ. ದಿನಬೆಳಗಾದರೆ ಸಾಕು ಸಾಮಾಜಿಕ ಜಾಲತಾಣ ರಾಜಕೀಯ ಪೋಸ್ಟರ್‌ಗಳಿಂದ ತುಂಬಿ ತುಳುಕುತ್ತಿವೆ.

Advertisement

ಪಾರದರ್ಶಕವಾಗಿ ಚುನಾವಣೆ ನಡೆಸಬೇಕು, ಅಭ್ಯರ್ಥಿಗಳ ಆಮೀಷಕ್ಕೆ ಯಾವೊಬ್ಬ ಮತದಾರ ಬಲಿಯಾಗದೇ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳ ಮೇಲೆಯೂ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಅಭ್ಯರ್ಥಿಯ ಚಾರಿತ್ರ್ಯ ವಧೆ ಮಾಡುವ ಪೋಸ್ಟ್‌ ಕಂಡುಬಂದರೇ ಆ ಕುರಿತು ಆಯೋಗ ಶಿಸ್ತಿನ ಕ್ರಮ ಕೈಗೊಳ್ಳುತ್ತದೆ.

„ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next