ಸಾಗರ: ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಅಡಿಗೆ ೫,೨೪೦ ರೂಪಾಯಿ ಪರಿಹಾರ ಕೊಡಲು ಒಪ್ಪಿದ್ದೇವೆ. ಆದರೆ ಕೆಲವು ನಿವಾಸಿಗಳು ೭,೦೦೦ ರೂ. ಪರಿಹಾರ ಕೇಳುತ್ತಿದ್ದಾರೆ. ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ. ರಸ್ತೆ ಅಗಲೀಕರಣ ತುರ್ತಾಗಿ ಆಗಬೇಕಾಗಿದ್ದು, ಒಂದೊಮ್ಮೆ ನಮ್ಮ ಪರಿಹಾರ ಮೊತ್ತಕ್ಕೆ ಒಪ್ಪದೆ ಹೋದಲ್ಲಿ ಅನಿವಾರ್ಯವಾಗಿ ಬೇರೆ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ರಜೆ ಹಾಕಬೇಡಿ. ಪ್ರಮುಖವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ. ಮಳೆಗಾಲದಲ್ಲಿ ರಸ್ತೆ ಸೇತುವೆ ಕೊಚ್ಚಿಕೊಂಡು ಹೋದರೆ, ಮನೆಕೊಟ್ಟಿಗೆ ಮೇಲೆ ಮರ ಬಿದ್ದು ಅವಘಡ ಸಂಭವಿಸಿದರೆ ಫೋಟೋ ಹೊಡೆದು ತಕ್ಷಣ ನನ್ನ ಗಮನಕ್ಕೆ ತನ್ನಿ. ನಾನು ಸೂಕ್ತ ಸೌಲಭ್ಯ ಒದಗಿಸುವ ಪ್ರಯತ್ನ ನಡೆಸುತ್ತೇನೆ. ಶಾಲೆಗಳು ಸೋರುತ್ತಿದ್ದರೆ ತಕ್ಷಣ ರಿಪೇರಿ ಮಾಡಿ. ಸಾಧ್ಯವಾಗದೆ ಹೋದಲ್ಲಿ ಮಕ್ಕಳಿಗೆ ಸುರಕ್ಷಿತ ಜಾಗದಲ್ಲಿ ಪಾಠಪ್ರವಚನ ನಡೆಸಿ, ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗಬಾರದು. ಶಾಲಾ ದುರಸ್ತಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಒಳಚರಂಡಿ ಕಾಮಗಾರಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ಸ್ವಚ್ಛಭಾರತ್ ಯೋಜನೆಯಡಿ ೧೪ ಕೋಟಿ ರೂ. ಅನುದಾನ ಬರುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಗಮನ ಹರಿಸಲಾಗಿದೆ. ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯ ಸೌಲಭ್ಯ ಸಿದ್ದಪಡಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಕರ್ತವ್ಯಕ್ಕೆ ವಿಳಂಬವಾಗಿ ಬರುವ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಸಾಂಕ್ರಾಮಿಕ ರೋಗ ಹರಡದಂತೆ ನಗರಸಭೆ ವತಿಯಿಂದ ನಗರವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಳೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಹಿಂದಿನ ಶಾಸಕರು ತಾವು ಅಭಿವೃದ್ದಿಗೆ ಅನುದಾನ ತಂದಿದ್ದು, ನಾನು ಏನೂ ತಂದಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಅವರ
ಅವಧಿಯಲ್ಲಿ ಕಾಮಗಾರಿ ಗುರುತಿಸಲಾಗಿತ್ತೇ ವಿನಾ ಅನುದಾನ ತಂದಿರಲಿಲ್ಲ. ನಾನು ಶಾಸಕನಾದ ಮೇಲೆ ಸಂಬಂಧಪಟ್ಟ ಕಾಮಗಾರಿಗೆ ಹಣಕಾಸು ಮಂಜೂರು ಮಾಡಿಸಿದ್ದೇನೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಸೈಯದ್ ಕಲಿಮುಲ್ಲಾ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: Haveri; ಮೋದಿ ಅಲೆಗಿಂತ ಬಿಜೆಪಿ ಅಲೆ ಹೆಚ್ಚಿತ್ತು: ಆನಂದಸ್ವಾಮಿ ಗಡ್ಡದೇವರಮಠ