ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದ ಪ್ರಮುಖ ರಸ್ತೆಗಳು ಇಕ್ಕಟ್ಟಾಗಿದ್ದು, ನಿತ್ಯ ಅಪಘಾತ ಸಂಭವಿಸುತ್ತಿವೆ. ಹಲವಾರು ಪ್ರತಿಭಟನೆಯ ಬಳಿಕ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲಾಗಿತ್ತಾದರೂ ಈಗ ಸ್ಥಗಿತಗೊಂಡಿದೆ. ರಸ್ತೆ ಅಗಲೀಕರಣ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿ. ಆ ಮೂಲಕ ಮುಧೋಳದ ಜನತೆಗೆ ಪ್ರಾಣಭಿಕ್ಷೆ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಧೋಳ ನಗರದ ಸಾಮಾಜಿಕ ಕಾರ್ಯಕರ್ತೆ ಸ್ನೇಹಾ ಹಿರೇಮಠ ಬರೆದ ಪತ್ರಕ್ಕೆ ಪ್ರಧಾನಿಗಳು ಸ್ಪಂದಿಸಿದ್ದಾರೆ.
ಪ್ರಧಾನಿ ರಚಿಸಿದ ನನ್ನ ಕುಂದುಕೊರತೆ ಆ್ಯಪ್ ಮೂಲಕ ಕಳೆದ 15 ದಿನಗಳ ಹಿಂದೆ ಪತ್ರ ಬರೆದು, ಮುಧೋಳ ನಗರದ ರಸ್ತೆಗಳ ದುಸ್ಥಿತಿ, ಜನರ ಪರದಾಟ ಕುರಿತು ವಿವರಿಸಿದ್ದರು. ಇದಕ್ಕೆ ಪ್ರಧಾನಿಗಳಿಂದ ಪ್ರತ್ಯುತ್ತರ ಬಂದಿದ್ದು, ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಿಇ)ಗೆ ಪತ್ರ ಬರೆದು, ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಮುಧೋಳ ನಗರದ ಸ್ನೇಹಾ ಹಿರೇಮಠ ಮುಧೋಳ ನಗರದ ರಸ್ತೆಗಳ ಕುರಿತು ಆ್ಯಪ್‌ನಲ್ಲಿ ಕುಂದುಕೊರತೆ ಹೇಳಿಕೊಂಡಿದ್ದರೆ, ಅವರಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 10 ಜನರೂ ರಸ್ತೆಗಳ ಸಮಸ್ಯೆ ಕುರಿತಾಗಿ ಸಮಸ್ಯೆ ಹೇಳಿಕೊಂಡು ಪತ್ರ ಬರೆದಿದ್ದರು. ಸ್ನೇಹಾ ಹಿರೇಮಠ ಅವರಲ್ಲದೇ ಆ 10 ಜನರಿಗೂ ಮೋದಿ ಕಚೇರಿಯಿಂದ ಉತ್ತರ ಬಂದಿದೆ. ಜತೆಗೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್‌ಗೆ ಸೂಚನೆ ನೀಡಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಇದೇ ಸ್ನೇಹಾ ಹಿರೇಮಠರು, ಈ ಹಿಂದೆ ಮುಧೋಳ ನಗರಕ್ಕೆ ಬೈಪಾಸ್ ರಸ್ತೆ ಮಂಜೂರು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಆಗಲೂ ಮೋದಿ ಅವರಿಂದ ಉತ್ತರ ಬಂದಿತ್ತು. ಕಳೆದ 2018ರಲ್ಲಿ ಮುಧೋಳದ ಬೈಪಾಸ್ ರಸ್ತೆಗೆ ರಾಜ್ಯ ಸರ್ಕಾರ 53 ಕೋಟಿ ಅನುದಾನವೂ ಬಿಡುಗಡೆಗೊಳಿಸಿದೆ. ಕಾಮಗಾರಿಗೆ ಟೆಂಡರ್ ಕೂಡ ಕರೆದು, ಅಂತಿಮಗೊಳಿಸಲಾಗಿದೆ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು: ಮುಧೋಳ ನಗರದಲ್ಲಿ ಪ್ರಮುಖ ರಸ್ತೆ ಸಹಿತ ಎಲ್ಲಾ ರಸ್ತೆಗಳು ಇಕ್ಕಟ್ಟಾಗಿವೆ. ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹಲವು ಬಾರಿ ಅಪಘಾತಕ್ಕೀಡಾಗಿದ್ದಾರೆ. ಸಾವು-ನೋವು ಸಂಭವಿಸಿವೆ. ರಸ್ತೆ ಅಗಲೀಕರಣ ಕೈಗೊಳ್ಳಲು ಹೋರಾಟ ಕೂಡ ಮಾಡಿದ್ದೇವು. ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಸದ್ಯ ಅದನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ನಗರದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಪ್ರಧಾನಿಗೆ ನನ್ನ ಕುಂದುಕೊರತೆ ಆ್ಯಪ್ ಮೂಲಕ ಪತ್ರ ಬರೆದಿದ್ದೆ. ಉತ್ತರವೂ ಬಂದಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ವಿಭಾಗದ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಮುಧೋಳ ನಗರಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಾ ಹಿರೇಮಠ ಒತ್ತಾಯಿಸಿದರು.