Advertisement
ಹದಿನೆಂಟರ ಅಂಚಿನಲ್ಲಿರುವ ಹುಡುಗಾಟದ ವಯಸ್ಸು ನನ್ನದು. ಆದರೂ, ನಾಚಿಕೆ ಸ್ವಭಾವದ ನಾನು ಹುಡುಗರ ತಂಟೆಗೆ ಹೋದವಳಲ್ಲ. ನನ್ನ ಮಾತುಗಳೇನಿದ್ದರೂ ಗೆಳತಿಯರ ಜೊತೆಗೆ ಮಾತ್ರ. ಹುಡುಗರನ್ನು ನೋಡಿದರೆ, ಅವರ ಉಡುಪು, ಹೇರ್ ಸ್ಟೈಲ್, ನಡೆಯುವ ಶೈಲಿಯನ್ನು ನೋಡಿ, ಕಮೆಂಟ್ ಮಾಡಿ ನಗುತ್ತಿದ್ದೆನೇ ಹೊರತು, ಅದಕ್ಕಿಂತ ಜಾಸ್ತಿ ಅವರ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ಇವೆಲ್ಲಾ ನೀ ಸಿಗುವವರೆಗಿನ ಮಾತು.
Related Articles
Advertisement
ಗೆಳೆಯ, ನೆನಪಿದೆಯಾ? ಸೆಕೆಂಡ್ ಪಿಯು ಹಾಲ್ ಟಿಕೆಡ್ ಪಡೆಯಲು ಕಾಲೇಜಿಗೆ ಬಂದಿದ್ದೆವು. ಅವತ್ತೂ ನನ್ನ ಕಣYಳು ನಿನ್ನನ್ನೇ ಹುಡುಕುತ್ತಿದ್ದವು. ಮನಸ್ಸಿನಲ್ಲಿ ಒಂಥರಾ ಭಯ. ಈ ಎಲ್ಲಾ ಭಾವನೆಗಳು ಇಂದೇ ಕೊನೆಗೊಳ್ಳುತ್ತದೆ ಎನ್ನುವ ಕಾರಣಕ್ಕಿರಬಹುದು. ಕಣ್ಣಂಚಲ್ಲಿ ನೀರು.
ಅಂದು ನಾ ಹೋಗುತ್ತಿದ್ದ ದಾರಿಯಲ್ಲಿ, ಹಿಂದೆಯೇ ನೀನು ನಡೆದು ಬರುತ್ತಿದ್ದೆ. ನನ್ನ ಹೃದಯದ ಬಡಿತ ಹೆಚ್ಚಾಗಿ, ಮನಸ್ಸು ನಿನ್ನ ಬರುವಿಕೆಯನ್ನು ತಿಳಿಸುತ್ತಿದೆ ಅನ್ನಿಸಿತು. ಒಮ್ಮೆ ಹಿಂತಿರುಗಿ ನೋಡು ಎಂದು ಹೃದಯ ಸೂಚನೆ ನೀಡಿತು. ತಕ್ಷಣ ಹಿಂದಿರುಗಿ ನೋಡೆದೆ… ಆ ಕ್ಷಣದಲ್ಲಿ ನನ್ನ ಕಣ್ಣುಗಳು ನೇರವಾಗಿ ಸಂಧಿಸಿದ್ದು ನಿನ್ನ ಕಣ್ಣುಗಳನ್ನು. ನಿನಗೆ ಅರಿವಿದ್ದೋ, ಇಲ್ಲದೆಯೋ ನೀನೂ ಸಹ ನನ್ನನ್ನೇ ನೋಡುತ್ತಿದ್ದೆ. ಒಂದೆರಡು ಕ್ಷಣ ಇಬ್ಬರೂ ನೋಡುತ್ತಲೇ ಇದ್ದೆವು. ಹೆದರಿಕೆಯಾಗಿ ಮುಂದೆ ತಿರುಗಿಕೊಂಡವಳು ನಾನೇ.ಮತ್ತೆ ತಿರುಗಿ ನೋಡಬೇಕೆನಿಸಿದರೂ ತಿರುಗುವ ಸಾಹಸಕ್ಕೆ ಹೋಗಲಿಲ್ಲ. ಅದೇ ನಮ್ಮ ಭೇಟಿಯ ಕೊನೆಯ ದಿನವಾಗಿತ್ತು. ಅದಾದಮೇಲೆ ನೀನು ಯಾವತ್ತೂ ಕಾಣಿಸಲೇ ಇಲ್ಲ…. ಆದರೆ, ಅವತ್ತು ನೀನ್ಯಾಕೆ ಹಾಗೆ ನೋಡಿದೆ ನನ್ನನ್ನು? ನಿಂಗೇನಾದ್ರೂ ಹೇಳ್ಳೋಕಿತ್ತಾ? ಅಥವಾ ಅಚಾನಕ್ಕಾಗಿ ನಡೆದ ಘಟನೆಯಾ ಅದು? ನನ್ನಲ್ಲಿ ಉತ್ತರವಿಲ್ಲ. ಉತ್ತರ ನನಗೆ ಬೇಕಾಗಿಯೂ ಇಲ್ಲ. ನನ್ನ ಪಾಲಿಗೆ ನೀನೊಂದು ಮಧುರವಾದ ನೆನಪು. ನಿನ್ನನ್ನು ಸದಾ ಕಾಲ ಎದೆಯಲ್ಲಿಟ್ಟುಕೊಂಡು ಕಾಪಾಡುತ್ತೇನೆ. -ಅಮೃತಾ ಚಂದ್ರಶೇಖರ್, ತೀರ್ಥಹಳ್ಳಿ