ವಿಜಯಪುರ: ಪಂಚಮಸಾಲಿ ಹಾಗೂ ಇತರೆ ಮೀಸಲಾತಿ ವಿಷಯದಲ್ಲಿ ದೊಡ್ಡದಾಗಿ ಮಾತನಾಡುತ್ತಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೀಸಲಾತಿ ಗೊಂದಲ ಸೃಷ್ಟಿಸಿರುವ ಮಹಾಮೋಸ ಮಾಡಿರುವ ಸರ್ಕಾರದ ನಡೆ ಹಾಗೂ ಶೇಕಡಾ ನೂರರಷ್ಟು ಮೀಸಲಾತಿ ಕಲ್ಪಿಸುವುದು ಅಸಾಧ್ಯ ಎಂದಿರುವ ಸಚಿವ ಮುರುಗೇಶ ನಿರಾಣಿ ಮಾತಿಗೆ ಮೌನ ವಹಿಸಿರುವುದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಣಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಷಯದಲ್ಲಿ ಬಿಜೆಪಿ ಬಾಯಿ ಮುಚ್ಚಿಸಿದೆ. ಬಾಯಿ ತೆಗೆದರೆ ಪಕ್ಷದಿಂದ ಕಿತ್ತು ಹಾಕುತ್ತೇವೆ ಎಂದು ಯತ್ನಾಳಗೆ ಹೇಳಿದ್ದಾರೆ. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಯತ್ನಾಳ ಉಸಿರೇ ಇಲ್ಲದಂತಾಗಿದ್ದಾರೆ ಎಂದರು.
ಮೀಸಲಾತಿ ವಿಚಾರದಲ್ಲಿ ಪ್ರತಿಕ್ರಿಯೆ ಕೊಡಲು ಯತ್ನಾಳಗೆ ಕೇಳಿ ಎಂದು ಪತ್ರಕರ್ತರಿಗೆ ಸಲಹೆ ನೀಡಿದ ಶಿವಕುಮಾರ್, ಶಾಸಕ ಯತ್ನಾಳ ಸರ್ಕಾರ ಘೋಷಿಸಿರುವ ಮೀಸಲಾತಿ ಬಗ್ಗೆ ಬೆಂಬಲ ನೀಡಿ, ಇಲ್ಲವೇ ವಿರೋಧವನ್ನಾದರೂ ಮಾಡಿದ ಬಗ್ಗೆ ಹೇಳದೇ ಯತ್ನಾಳ ಏಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಅಲ್ ನಾಸರ್ ಪಾಲಾದ ರೊನಾಲ್ಡೊ: ವರ್ಷಕ್ಕೆ ಬರೋಬ್ಬರಿ 1770 ಕೋಟಿ ರೂ ನೀಡುತ್ತೆ ಸೌದಿ ಕ್ಲಬ್
ಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಬಂದಿಲ್ಲವೇಕೆ? ಸರ್ಕಾರದ ಗೊಂದಲಯುಕ್ತ ಮೀಸಲಾತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರ ಕಕೇವಲ ಟೋಪಿ ಹಾಕಿಲ್ಲ, ಎಲ್ಲ ಸಮಾಜಕ್ಕೂ ಮಹಾಮೋಸ ಮಾಡಿದೆ ಎಂದು ಟೀಕಿಸಿದರು.